- ಮೂರು ಡಜನ್ ಆಕಾಂಕ್ಷಿಗಳು ನಾನಾ ಮಾರ್ಗದಲ್ಲಿ ಸಚಿವ ಸ್ಥಾನ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.
- ವರಿಷ್ಠರ ಒಪ್ಪಿಗೆಯ ಬಳಿಕವೇ ಹೊಸ ಸಚಿವರ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ
ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಮಹತ್ವದ ಚಟುವಟಿಕೆಗಳು ಮತ್ತೆ ಆರಂಭವಾಗಿವೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರುಗಳು ದೆಹಲಿಗೆ ಸೋಮವಾರ ತೆರಳಿದ್ದು, ಪಕ್ಷದ ವರಿಷ್ಠರೊಂದಿಗೆ ಅಂತಿಮ ಹಂತದ ಸಮಾಲೋಚನೆ ನಡೆಸಲಿದ್ದಾರೆ.
ಮಂಗಳವಾರ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಈ ಮೂವರು ನಾಯಕರು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆಯ ಕುರಿತು ಅಂತಿಮ ಚರ್ಚೆ ನಡೆಸುವ ಸಾಧ್ಯತೆ ಇದೆ.
ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವುದು, ಜಾತಿ ಹಾಗೂ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವುದು ಮತ್ತು ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಕುರಿತು ಹೈಕಮಾಂಡ್ ವಿಶೇಷ ಗಮನ ಹರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಚಿವ ಸ್ಥಾನಾಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮೂರು ಡಜನ್ ಆಕಾಂಕ್ಷಿಗಳು ನಾನಾ ಮಾರ್ಗದಲ್ಲಿ ಸಚಿವ ಸ್ಥಾನ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಹಲವು ಬಾರಿ ದೆಹಲಿ ಯಾತ್ರೆ ಮಾಡಿ ಸುಸ್ತಾಗಿರುವ ಶಾಸಕರು, ಕೊನೆ ಪ್ರಯತ್ನವನ್ನು ಕೈ ಚೆಲ್ಲದೆ ದೆಹಲಿಯತ್ತ ಮುಖ ಮಾಡಿದ್ದಾರೆ.
ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುವುದು ಕಾಂಗ್ರೆಸ್ ನಾಯಕತ್ವಕ್ಕೆ ಸವಾಲಾಗಿದೆ. ಸಿದ್ದರಾಮಯ್ಯ ಸಂಪುಟ ರಚನೆಯಾಗು ಸಂದರ್ಭದಲ್ಲಿ ಮೊದಲ ಬಾರಿಗೆ ಶಾಸಕರಾದವರಿಗೆ ಈ ಬಾರಿ ಸಚಿವ ಸ್ಥಾನ ಇಲ್ಲ ಎಂಬ ಷರತ್ತು ಹಾಕುವ ಮೂಲಕ ಪಕ್ಷದ ಅರ್ಧದಷ್ಟು ಶಾಸಕರನ್ನು ದೂರ ಇಡಲಾಗಿತ್ತು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಮೊದಲ ಬಾರಿಗೆ ಶಾಸಕರಾದವರಿಗೂ ಅವಕಾಶವಿದೆ ಎನ್ನುವ ಕಾರಣದಿಂದ ಅವರುಗಳು ತೀವ್ರ ಪ್ರಯತ್ನ ನಡೆಸುತ್ತಿದ್ದು, ಸ್ಪರ್ಧೆ ಇನ್ನಷ್ಟು ಕಠಿಣವಾಗಿದೆ.
ನಾಯಕರುಗಳ ಹಂತದಲ್ಲಿ ಏನೇ ಕಸರತ್ತು ನಡೆದರೂ, ವರಿಷ್ಠರ ಒಪ್ಪಿಗೆಯ ಬಳಿಕವೇ ಹೊಸ ಸಚಿವರ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಸಂಪುಟ ವಿಸ್ತರಣೆ ಹಲವು ಬಾರಿ ಮುಂದೂಡಲ್ಪಟ್ಟಿದ್ದು, ಈ ಬಾರಿ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಹೆಚ್ಚಿದೆ. ವಿಧಾನಸಭೆ ಅಧಿವೇಶನ ಸಮೀಪಿಸುತ್ತಿದ್ದು, ಎಲ್ಲಾ ಜಿಲ್ಲೆಯಲ್ಲಿ ಬರ ಪ್ರವಾಸ ಮಾಡಬೇಕಾಗಿರುವ ಕಾರಣ, ಸಂಪುಟ ವಿಸ್ತರಣೆ ಮಾಡಲೇಬೇಕಾದ ಅನಿವಾರ್ಯತೆ ಹೆಚ್ಚಾಗಿದೆ. ಬುಧವಾರ, ಗುರುವಾರದಲ್ಲಿ ಸಂಪುಟ ವಿಸ್ತರಣೆ ಆಗಬಹುದು ಎಂದು ದೆಹಲಿ ಮೂಲಗಳು ಖಚಿತಪಡಿಸಿವೆ.
*ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುವುದು ಕಾಂಗ್ರೆಸ್ ನಾಯಕತ್ವಕ್ಕೆ ಸವಾಲಾಗಿದೆ.