ಸಿಎಂ ಸಿದ್ದರಾಮಯ್ಯ  
ರಾಜ್ಯ

ನಾಳೆ ರಾಜ್ಯ ಬಜೆಟ್​: 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ

ಪ್ರಮುಖ ಮುಖ್ಯಾಂಶಗಳು

  • ನಾಳೆ (ಮಾ.06) ರಾಜ್ಯ ಬಜೆಟ್​
  • ರಾಜ್ಯ ಬಜೆಟ್​ ಮಂಡನೆಗೆ ಸಿಎಂ ಸಿದ್ದರಾಮಯ್ಯ ಸಿದ್ಧ
  • ಈ ನಿಟ್ಟಿನಲ್ಲಿ, ರಾಜ್ಯದ 230 ಸರ್ಕಾರಿ ಬಸ್​ ನಿಲ್ದಾಣಗಳಲ್ಲಿ ಬಜೆಟ್​ ನೇರಪ್ರಸಾರ
ಬೆಂಗಳೂರು: ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಆಯವ್ಯಯವನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಮಾ.06) ಮಂಡಿಸಲಿದ್ದಾರೆ. ಇದು ಸಿಎಂ ಅವರ 17ನೇ ದಾಖಲೆಯ ಬಜೆಟ್ ಎಂಬುದು ವಿಶೇಷ. ​
17ನೇ ಬಾರಿ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಈ ಮೂಲಕ ದಾಖಲೆ ಬರೆಯಲಿದ್ದಾರೆ. ಇದೇ ಸಂದರ್ಭದಲ್ಲಿ, ಬಜೆಟ್ ಮಂಡನೆಯನ್ನು ವಿಶೇಷವಾಗಿಸಲು ರಾಜ್ಯದ ಪ್ರಮುಖ ಬಸ್​ ನಿಲ್ದಾಣಗಳಲ್ಲಿ ಟಿವಿ ಹಾಕುವ ಮೂಲಕ ಬಜೆಟ್​ ನೇರಪ್ರಸಾರವನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಪ್ರಸಾರ ಮಾಡಲು ನಿರ್ಧರಿಸಲಾಗಿದೆ. ಈ ಮಹತ್ವದ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ರಾಜ್ಯದ ಜನತೆಗೆ ತಲುಪಿಸುವ ಉದ್ದೇಶದಿಂದ ವೃತ್ತಿ ಸೊಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ರಾಜ್ಯದಲ್ಲಿರುವ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ತನ್ನ ಡಿಜಿಟಲ್ ಡಿಸ್ಪ್ಲೇ (LED) ಪರದೆಗಳ ಮೂಲಕ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ.
ವಿಧಾನಸೌಧದಲ್ಲಿ ನಡೆಯುವ ಬಜೆಟ್ ಮಂಡನೆ ಮತ್ತು ಅದರ ಬಳಿಕ ನಡೆಯಲಿರುವ ಸಿಎಂ ಅವರ ಪತ್ರಿಕಾಗೋಷ್ಠಿಯ ನೇರ ಪ್ರಸಾರವನ್ನು ರಾಜ್ಯದ ವಿವಿಧ ಬಸ್ ನಿಲ್ದಾಣಗಳಲ್ಲಿ ಜನಸಾಮಾನ್ಯರು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ರಾಜ್ಯದ ಜನತೆಗೆ ಬಜೆಟ್​ ಬಗ್ಗೆ ನೇರವಾಗಿ ಮಾಹಿತಿ ದೊರೆಯಲಿ ಎಂಬುದು ಇದರ ಮುಖ್ಯ ಉದ್ದೇಶವಾಗಿದೆ.