ಲೋಕಾಪುರದ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಕೆ.ಜಿ. ವಿದ್ಯಾರ್ಥಿಗಳ ಅಕ್ಷರಾಭ್ಯಾಸ ಸಮಾರಂಭ ನಡೆಯಿತು. ಪ್ರಾಂಶುಪಾಲ ಪರಶುರಾಮ ವನಸಿ, ಡಾ. ಚಂದ್ರಶೇಖರ ಸ್ವಾಮೀಜಿ ಹಾಗೂ ಪಾಲಕರು ಮತ್ತಿತರರಿದ್ದರು.
- ಪರಶುರಾಮ ವನಸಿ ಹೇಳಿಕೆ
- ಕೆ.ಜಿ. ವಿದ್ಯಾರ್ಥಿಗಳ ಅಕ್ಷರಾಭ್ಯಾಸ ಸಮಾರಂಭ
ಲೋಕಾಪುರ: ವಿದ್ಯೆ ಜೀವನಪೂರ್ತಿ ಜೊತೆಯಾಗಿರುವ ಅಮೂಲ್ಯ ಸಂಪತ್ತಾಗಿದ್ದು, ಅಕ್ಷರಾಭ್ಯಾಸವು ಮಗುವಿನ ಶೈಕ್ಷಣಿಕ ಬದುಕಿನ ಮೊದಲ ಹೆಜ್ಜೆಯಾಗಿ ಭದ್ರ ಭವಿಷ್ಯಕ್ಕೆ ಅಡಿಪಾಯವಾಗುತ್ತದೆ ಎಂದು ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ ಪ್ರಾಂಶುಪಾಲ ಪರಶುರಾಮ ವನಸಿ ಹೇಳಿದರು.
ಪಟ್ಟಣದ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ನಡೆದ ಕೆ.ಜಿ. ವಿದ್ಯಾರ್ಥಿಗಳ ಅಕ್ಷರಾಭ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯದಲ್ಲೇ ಅಕ್ಷರಾಭ್ಯಾಸ ಆರಂಭಿಸುವುದು ಮಕ್ಕಳ ಬುದ್ಧಿ ಹಾಗೂ ವ್ಯಕ್ತಿತ್ವ ಅಭಿವದ್ಧಿಗೆ ಸಹಕಾರಿ ಎಂದು ತಿಳಿಸಿದರು.
ಹಿರೇಮಠದ ಡಾ. ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರಗಳನ್ನು ಬೆಳೆಸುವುದು ಪಾಲಕರು ಮತ್ತು ಶಿಕ್ಷಕರ ಪ್ರಮುಖ ಕರ್ತವ್ಯ ಎಂದು ಹೇಳಿದರು. ಅಕ್ಷರಾಭ್ಯಾಸವು ಕೇವಲ ಕಲಿಕೆಯ ಆರಂಭವಲ್ಲ, ಆದರ್ಶ ಜೀವನದ ಮಾರ್ಗದರ್ಶಕವಾಗಿದೆ ಎಂದರು.
ಕಂದಮ್ಮಗಳಿಗೆ ಅಕ್ಕಿ ಹಾಗೂ ಲಕದ ಮೇಲೆ ಮೊದಲ ಅಕ್ಷರಗಳನ್ನು ಬರೆಯಿಸುವ ಮೂಲಕ ವಿದ್ಯಾರಂಭ ನೆರವೇರಿಸಲಾಯಿತು. ಶಿಕ್ಷಕ ಸುರೇಶ ಸೌದತ್ತಿ ಶ್ಲೋಕ ಪಠಣ ನಡೆಸಿದರು. ಸಂಗೀತ ಶಿಕ್ಷಕ ಮುಸ್ತಾ ಪ್ರಾರ್ಥನೆ ಗೀತೆ ಹಾಡಿದರು.
ನೀಲಕ್ಕ ರಾಯಪ್ಪನವರ ಸ್ವಾಗತಿಸಿದರು. ಗೀತಾ ಶಿರೋಳ ವಂದಿಸಿದರು. ಲಕ್ಷ್ಮಿ ಸಿನ್ನೂರ ನಿರೂಪಿಸಿದರು. ಸ್ನೇಹ ಗುರುಮಾತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪಾಲಕರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.