ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಗುರುವಾರ ಶಾಸಕ ಶರಣಗೌಡ ಕಂದಕೂರ ಭೇಟಿ ನೀಡಿ ಪರಿಶೀಲಿಸಿದರು. ಡಿಡಿಪಿಯು ಪಂಡಿತರಾವ್ ಪವಾರ, ಬಿಇಒ ವೀರಣ್ಣ ಕನ್ನಳ್ಳಿ ಇತರರಿದ್ದರು.
- ಅಧಿಕಾರಿಗಳಿಗೆ ಶಾಸಕ ಶರಣಗೌಡ ಕಂದಕೂರ ಸೂಚನೆ
- ಕಾಲೇಜಿಗೆ ಇರಲಿ ಹೈಟೆಕ್ ವ್ಯವಸ್ಥೆ
ಗುರುಮಠಕಲ್: ತಾಲೂಕಿನ ಕಂದಕೂರ ಗ್ರಾಮಕ್ಕೆ ಸರ್ಕಾರ ನೂತನವಾಗಿ ಪಿಯು ಕಾಲೇಜು ಮಂಜೂರು ಮಾಡಿದ್ದು, ಪ್ರಸಕ್ತ ಸಾಲಿನಿಂದಲೇ ವಿದ್ಯಾರ್ಥಿಗಳ ದಾಖಲಾತಿಗೆ ಮಾಡಿಕೊಳ್ಳುವಂತೆ ಶಾಸಕ ಶರಣಗೌಡ ಕಂದಕೂರ ಹೇಳಿದರು.
ಕಂದಕೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಗುರುವಾರ ಭೇಟಿ ನೀಡಿ, ಉನ್ನತಿಕರಿಸಿದ ಪದವಿಪೂರ್ವ ಕಾಲೇಜಿಗೆ ಬೇಕಾದ ಸೌಲಭ್ಯ ಕುರಿತು ಪರಿಶೀಲಿಸಿ, ಇದು ನನ್ನ ಸ್ವಂತ ಗ್ರಾಮ. ಕಂದಕೂರಿನಲ್ಲಿ ಪಿಯುಸಿ ಕಾಲೇಜು ಸ್ಥಾಪನೆಯಾಗಬೇಕು ಎಂಬುದು ನಮ್ಮ ತಂದೆ, ಮಾಜಿ ಶಾಸಕ ದಿ.ನಾಗನಗೌಡ ಅವರ ಬಹುದಿನಗಳ ಕನಸಾಗಿತ್ತು. ಹೀಗಾಗಿ ಸರ್ಕಾರ ಕೂಡ ಅನುಮತಿ ನೀಡಿದ್ದರಿಂದ ಪ್ರಶಸ್ತ ಸಾಲಿನಿಂದಲೇ ವಿದ್ಯಾರ್ಥಿಗಳ ಪ್ರವೇಶ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಮೇಲೆ ನಾನು ಹಲವು ಬಾರಿ ಮನವಿ ಮಾಡಿ ಒತ್ತಡ ಹಾಕಿದ ಮೇಲೆ ಈ ವರ್ಷದಿಂದ ಸರ್ಕಾರ ಕಂದಕೂರಿನಲ್ಲಿ ನೂತನ ಕಾಲೇಜು ಆರಂಭಿಸಿದೆ. ಪ್ರಸಕ್ತ ವರ್ಷದಿಂದಲೇ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ವಿಶೇಷ ಗಮನ ಹರಿಸುವಂತೆ ನಿರ್ದೇಶನ ನೀಡಿದರು.
ಕಲಾ ವಿಭಾಗಕ್ಕಿಂತ ವಾಣಿಜ್ಯ ವಿಭಾಗದ ಕೋರ್ಸ್ಗೆ ಹೆಚ್ಚಿನ ಅವಕಾಶಗಳಿವೆ. ಬಿಕಾಂ, ಎಂಬಿಎ ಪಧವಿ ಮಾಡಿದರೆ ಕಾರ್ಖಾನೆ, ದೊಡ್ಡದೊಡ್ಡ ಖಾಸಗಿ ಉದ್ಯಮಗಳಲ್ಲಿ ಸಾವಿರಾರು ಉದ್ಯೋಗ ಅವಕಾಶಗಳಿವೆ. ಹೀಗಾಗಿ ಕಾಮರ್ಸ್ ಕೋರ್ಸ್ ಆಯ್ಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಜಾಗೃತಿ ಮೂಡಿಸಲು ಸೂಚನೆ ನೀಡಿದರು.
ಗ್ರಾಮದಲ್ಲಿ ಕರೆದಿದ್ದ ಸಭೆ ನಂತರ ಮಾತನಾಡಿ, ನಮ್ಮೂರಿನ ಮಕ್ಕಳು ಕಾಲೇಜಿಗೆ ದೂರದ ಪಟ್ಟಣಗಳಿಗೆ ಅಲೆಯುವುದು ಬೇಡ ಎಂಬ ಕಾರಣಕ್ಕಾಗಿ ಸ್ಥಳಿಯವಾಗಿ ಕಾಲೇಜು ಮಂಜೂರು ಮಾಡಿಸಲಾಗಿದೆ. ಗ್ರಾಮಸ್ಥರು ತಮ್ಮ ಮಕ್ಕಳಿಗೆ ಹೊಸ ಕಾಲೇಜಿಗೆ ದಾಖಲಾತಿ ಮಾಡಿಸಿ ಎಂದು ಶಾಸಕರು ಸಲಹೆ ನೀಡಿದರು.
ಈ ವೇಳೆ ಡಿಡಿಪಿಯು ಪಂಡಿತರಾವ್ ಪವಾರ, ಬಿಇಒ ವೀರಣ್ಣ ಕನ್ನಳ್ಳಿ, ಶರಣಗೌಡ ಆಶನಾಳ, ಎಸ್ ಡಿಎಂಸಿ ಅಧ್ಯಕ್ಷ ವೆಂಕಟರಡ್ಡಿ ಇತರರಿದ್ದರು.
ಹೊಸ ಕಾಲೇಜಿಗೆ ಬೇಕಾದ ಪೀಠೋಪಕರಣ ಒದಗಿಸಲು ನನ್ನ ಅನುದಾನದಲ್ಲಿ ಹಣ ಒದಗಿಸಲಾಗುವುದು. ಕಾಲೇಜಿಗೆ ಉಪನ್ಯಾಸಕರು ಸೇರಿ ಒಟ್ಟರೆ ಹೈಟೆಕ್ ಕಾಲೇಜು ಸ್ಥಾಪನೆಯಾಗಬೇಕು.
— > ಶರಣಗೌಡ ಕಂದಕೂರ ಶಾಸಕ ಗುರುಮಠಕಲ್