ಮಧುಗಿರಿ: ತಾಲೂಕಿನ ಚಿಕ್ಕಮಲೂರು ಗ್ರಾಪಂ ವ್ಯಾಪ್ತಿಯಲ್ಲಿ ಎನ್ಆರ್ಇಜಿ ಯೋಜನೆ ಅಡಿಯಲ್ಲಿ 120 ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದು, ಕೇವಲ 40 ಕಾಮಗಾರಿಗಳು ಮಾತ್ರ ಪ್ರಾರಂಭವಾಗಿರುವ ಬಗ್ಗೆ ಜಿಪಂ ಸಿಇಒ ಜಿ.ಪ್ರಭು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಚಿಕ್ಕಮಾಲೂರು ಗ್ರಾಮ ಪಂಚಾಯಿತಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮದಲ್ಲಿ ಕಾಮಗಾರಿ ವಿಳಂಬವಾಗುತ್ತಿದ್ದು, ಉಳಿಕೆ 80 ಕಾಮಗಾರಿಗಳನ್ನು ಶೀಘ್ರದಲ್ಲೇ ಆರಂಭಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಭೇಟಿ ಸಂದರ್ಭದಲ್ಲಿ ಪಿಡಿಒ ಕಚೇರಿಯಲ್ಲಿ ಇಲ್ಲದೆ ಇರುವುದನ್ನು ಗಮನಿಸಿ ವಿವಿಧ ಕಡತಗಳನ್ನು, ಕ್ರಿಯಾ ಯೋಜನೆಯ ಕಡತಗಳನ್ನು ಖುದ್ದು ಪರಿಶೀಲಿಸಿದರು. ಈ ಕಡತಗಳಲ್ಲಿ ಹೆಚ್ಚು ನ್ಯೂನ್ಯತೆಗಳು ಕಂಡುಬಂದಿದ್ದು, ದಾಖಲಾತಿಗಳು ಸರಿಯಾಗಿ ನಿರ್ವಹಿಸದೇ ಇರುವುದನ್ನು ಗಮನಿಸಿ, ಗ್ರಾಪಂ ಕಾರ್ಯದರ್ಶಿ ಮತ್ತು ಪಿಡಿಒ ಕಾರ್ಯವೈಖರಿ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ತಾಪಂ ಇಒ ಲಕ್ಷ್ಮಣ್ ಅವರಿಗೆ ಸೂಚನೆ ನೀಡಿದರು.
ನಂತರ ಸಾರ್ವಜನಿಕರ ಅವಹಾಲನ್ನು ಆಲಿಸಿದರು. ಸಾರ್ವಜನಿಕರು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅನೇಕ ದೂರು ಸಲ್ಲಿಸಿದರು. ಗ್ರಾಪಂ ವ್ಯಾಪ್ತಿಯ ಕೆಂಪಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಖುದ್ದು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು. ನಂತರ ಪುರವರ ಗ್ರಾಪಂಗೆ ಭೇಟಿ ನೀಡಿ ರಸ್ತೆ ವಿಸ್ತರಣೆ ಬಗ್ಗೆ ಪರಿಶೀಲನೆ ನಡೆಸಿದರು. ಗ್ರಾಮದ ಮನೆಗಳಲ್ಲಿ ಶೌಚಗೃಹ ನಿರ್ಮಿಸಲು ಕಾರ್ಯಾದೇಶ ಪತ್ರ ನೀಡದೇ ಇರುವುದನ್ನು ಗಮನಿಸಿ ಕೂಡಲೇ ಕಾರ್ಯಾದೇಶ ಪತ್ರ ನೀಡುವಂತೆ ಹಾಗೂ 15ನೇ ಹಣಕಾಸು ಮತ್ತು ವರ್ಗವೊಂದರ ಅನುದಾನದ ಕ್ರಿಯಾಯೋಜನೆ ಪರಿಶೀಲಿಸಿ, ತಕ್ಷಣ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಿದರು.
ಚಿಕ್ಕಮಾಲೂರು ಗ್ರಾಪಂ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳು ಪಾಠಗಳನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಓದುವ ವಿದ್ಯಾಭ್ಯಾಸ ಕ್ರಮವನ್ನು ಮಕ್ಕಳಿಗೆ ತಿಳಿಸಲಾಯಿತು.
ಮುಖ್ಯಶಿಕ್ಷಕರಿಗೆ ಮಕ್ಕಳ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಯಿತು. ಶಾಲೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲು ಸೂಕ್ತ ಕ್ರಮವಹಿಸುವಂತೆ ತಾಪಂ ಇಒಗೆ ಸೂಚಿಸಿದರು.
ನಂತರ ಹೋಬಳಿ ಕೇಂದ್ರ ಪಂಚಾಯಿತಿಗಳಾದ ಪುರವರ ಮತ್ತು ತೋವಿನಕೆರೆ ಗ್ರಾಪಂಗೆ ಭೇಟಿ ನೀಡಿ, ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ಗ್ರಾಪಂ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಕುರಿತು ನೀಲಿನಕ್ಷೆಯೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಲಾಯಿತು.