ಅಲಯನ್ಸ್ ಸಾಹಿತ್ಯ ಹಬ್ಬದಲ್ಲಿ ವಿದ್ಯಾರ್ಥಿಗಳ ನೃತ್ಯ. (ಎಡಚಿತ್ರ) ಅಲಯನ್ಸ್ ಸಾಹಿತ್ಯ ಹಬ್ಬದಲ್ಲಿ ನಟಿ ವಿದ್ಯಾ ಬಾಲನ್ ಅವರನ್ನು ಸನ್ಮಾನಿಸಲಾಯಿತು.
ಆನೇಕಲ್ : ಪಟ್ಟಣದ ಅಲಯನ್ಸ್ ವಿಶ್ವ ವಿದ್ಯಾಲಯದಲ್ಲಿ ಅಲಯನ್ಸ್ ಸಾಹಿತ್ಯ ಹಬ್ಬದ ಐದನೇ ಆವೃತ್ತಿಗೆ ಬಾಲಿವುಡ್ ನಟಿ ವಿದ್ಯಾ ಬಾಲನ್ ಗುರುವಾರ ಚಾಲನೆ ನೀಡಿದರು. ಸಿನಿಮಾ ಹಾಡಿಗೆ ವಿದ್ಯಾರ್ಥಿಗಳೊಂದಿಗೆ ಭರ್ಜರಿ ಹೆಜ್ಜೆ ಹಾಕಿ ಮೆರುಗು ಹೆಚ್ಚಿಸಿದರು.
ನಂತರ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ವಿದ್ಯಾಬಾಲನ್, ಪುರುಷ ಪ್ರಾಬಲ್ಯದ ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯರ ಧೈರ್ಯ, ನೈಜತೆ ಮತ್ತು ಸೃಜನಾತ್ಮಕ ಸಾಹಸ ಕುರಿತು ಮಾತನಾಡಿದರು. ಬಾಲಿವುಡ್ ಸಿನಿಮಾದಲ್ಲಿಯ ದೀರ್ಘ ಪಯಣದ ಅನುಭವ ಹಂಚಿಕೊಂಡರು. ಫೆ.21ರವರೆಗೆ ಸಾಹಿತ್ಯ ಹಬ್ಬ ನಡೆಯಲಿದ್ದು, "ಹರ್ ಸ್ಟೋರಿ: ನಾರೀ ಶಕ್ತಿ' ವಿಷಯದಡಿ ವಿವಿಧ ವಿಚಾರ ಸಂಕಿರಣ ಆಯೋಜಿಸಲಾಗಿದೆ.
ಕಲಾವಿದೆ ಕಲ್ಕಿ ಸುಬ್ರಮಣಿಯನ್ ಅವರ ನೇತೃತ್ವದ ತೃತೀಯ ಲಿಂಗಿಗಳ ತಂಡ ನಾಟಕ ಪ್ರದರ್ಶನ ನೀಡಿತು. ಹಿರಿಯ ನೃತ್ಯಗಾರ್ತಿ, ಮಲಯಾಳಿ ನಟಿ ಶೋಭನಾ ಹಾಗೂ ತಂಡ ಭರತನಾಟ್ಯ ಪ್ರದರ್ಶನ ನೀಡಿತು. ನೇಪಾಳ, ರಷ್ಯಾ, ಜರ್ಮನಿ, ಬ್ರೆಜಿಲ್ ದೇಶದ ಕಲಾವಿದರು ಸಾಂಸತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅಲಯನ್ಸ್ ಒನ್ ಆವೃತ್ತಿಯನ್ನು "ನಮ್ಮ ಬೆಂಗಳೂರು' ವಿಷಯಕ್ಕೆ ಸಮರ್ಪಿಸಲಾಗಿದೆ. ಮಹಾನಗರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಮುಂದಿರುವ ಸವಾಲು ಮತ್ತು ಪರಿಹಾರ ಚರ್ಚೆಗೆ ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ವಿಶ್ವವಿದ್ಯಾಲಯದ ಸಹ ಕುಲಪತಿ ಅಭಯ್ ಛಬ್ಬಿ ಅಭಿಪ್ರಾಯಪಟ್ಟರು.