ಉನ್ನತಾಧಿಕಾರಿಗಳ ಸಭೆ ನಡೆಸಿದ ಸಚಿವ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಸಭೆ  
ರಾಜ್ಯ

ರಾಜಧಾನಿ ಮಾಲಿನ್ಯ ನಿಯಂತ್ರಣಕ್ಕೆ ಮಾನದಂಡ

ಬೆಂಗಳೂರು:ನವದೆಹಲಿಯಂತೆ ಬೆಂಗಳೂರು ಸಹ ಮತ್ತೊಂದು ಗ್ಯಾಸ್ ಛೇಂಬರ್ ಆಗದಂತೆ ಕ್ರಮ ವಹಿಸಲು ಶೀಘ್ರವೇ ನಗರದ ಎಲ್ಲ 28 ಶಾಸಕರೊಂದಿಗೆ ಸಭೆ ನಡೆಸುವುದಾಗಿ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ಶಾಸಕ ಎಸ್. ಸುರೇಶ್‌ಕುಮಾರ್ ಕೋರಿಕೆ ಮೇರೆಗೆ ಅವರೊಂದಿಗೆ ಉನ್ನತಾಧಿಕಾರಿಗಳ ಸಭೆ ನಡೆಸಿದ ಸಚಿವರು, ಬೆಂಗಳೂರು ನಗರದಲ್ಲಿ ವಾಯುಮಾಲಿನ್ಯ, ಜಲಮಾಲಿನ್ಯ ಮತ್ತು ಶಬ್ದಮಾಲಿನ್ಯ ನಿಯಂತ್ರಣಕ್ಕೆ ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳ ಸಹಕಾರದ ಅಗತ್ಯವಿದೆ ಎಂಬ ಅಭಿಪ್ರಾಯಕ್ಕೆ ಬಂದರು.
ಈ ವೇಳೆ ಸುರೇಶ್ ಕುಮಾರ್ ಮಾತನಾಡಿ, ಬೆಂಗಳೂರು ನಗರದ ರಸ್ತೆಯಲ್ಲಿನ ಧೂಳಿನಿಂದಾಗಿ ವಾಯು ಗುಣಮಟ್ಟ ಕ್ಷೀಣಿಸುತ್ತಿದೆ. ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ವೈದ್ಯರು ಬೆಂಗಳೂರು ಹೊರವಲಯಕ್ಕೆ ಹೋಗುವಂತೆ ಸಲಹೆ ನೀಡುತ್ತಿದ್ದಾರೆ. ವಾಯು ಗುಣಮಟ್ಟ ಕಾಪಾಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಇದಕ್ಕೆ ಸ್ಪಂದಿಸಿದ ಈಶ್ವರ ಖಂಡ್ರೆ, ಈಗಾಗಲೇ ಬೆಂಗಳೂರಿನ 11 ಸ್ಥಳಗಳಲ್ಲಿ ಸ್ಥಾಪಿತ ಮತ್ತು 13 ಸಂಚಾರಿ ಘಟಕಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕದ ಮೌಲ್ಯಮಾಪನ ಮಾಡಲಾಗುತ್ತಿದೆ. ಸೂಚ್ಯಂಕ ಮೌಲ್ಯವು 100 ದಾಟಿದರೆ ಸಂಬಂಧಿತ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿ ನಿಗದಿತ ಕಾಲಮಿತಿಯಲ್ಲಿ ನಿಯಂತ್ರಿಸಲು ಸೂಚನೆ ನೀಡಬೇಕು. ಎಚ್ಚೆತ್ತುಕೊಳ್ಳದಿದ್ದರೆ ಕಾನೂನು ಪ್ರಕಾರ ಮೊಕದ್ದಮೆ ದಾಖಲಿಸಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಶೀಘ್ರವೇ ಅವರ ಅಧ್ಯಕ್ಷತೆಯಲ್ಲೇ ಬೆಂಗಳೂರು ನಗರದ ಎಲ್ಲ ಜನಪ್ರತಿನಿಧಿಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು.
ಕೆಲವೇ ದಶಕಗಳ ಹಿಂದೆ ನಿವೃತ್ತರ ಸ್ವರ್ಗ, ಹವಾನಿಯಂತ್ರಿತ ನಗರ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರಿನಲ್ಲಿ ಬಿಸಿಲ ಬೇಗೆ ಹೆಚ್ಚುತ್ತಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಇದಕ್ಕೆ ಕಾರಣವಾಗಿದ್ದರೂ, ನಗರದ ಹಸಿರು ಹೊದಿಕೆ ಹೆಚ್ಚಿಸಿ ವಾಯು ಗುಣಮಟ್ಟ ರಕ್ಷಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಖಂಡ್ರೆ ಭರವಸೆ ನೀಡಿದರು.
ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್, ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸುಲು ಮತ್ತಿತರು ಇದ್ದರು.

ತಿಂಗಳೊಳಗೆ ವರದಿಗೆ ಸೂಚನೆ

ಏಕಬಳಕೆ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ಬೆಂಗಳೂರಿನಲ್ಲಿ ವಿಪರೀತವಾಗಿದ್ದು, ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳು ಹಾಗೂ ಇನ್ನಿತರ ಇಲಾಖೆಗಳ ಸಹಯೋಗದಲ್ಲಿ ಜಾಗೃತ ದಳ ರಚಿಸಿ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಬೆಂಗಳೂರು ಸೇರಿ ರಾಜ್ಯದಲ್ಲಿ ಎಷ್ಟು ತ್ಯಾಜ್ಯ ಶುದ್ಧೀಕರಣ ಘಟಕಗಳಿವೆ. ಅವುಗಳ ಪೈಕಿ ಎಷ್ಟು ಕಾರ್ಯನಿರ್ವಹಿಸುತ್ತಿದೆ. ಸ್ಥಾಪಿತ ಸಾಮರ್ಥ್ಯ ಎಷ್ಟು ಮತ್ತು ಪ್ರಸ್ತುತ ಎಷ್ಟು ಎಂಎಲ್ಡಿ ದ್ರವ ತ್ಯಾಜ್ಯ ಸಂಸ್ಕರಣೆ ಆಗುತ್ತಿದೆ. ಎಷ್ಟು ಎಂಎಲ್ಡಿ ನೀರು ಸಂಸ್ಕರಣೆ ಆಗದೆ ಜಲಮೂಲ ಸೇರುತ್ತಿದೆ ಎಂಬ ಬಗ್ಗೆ ಪರಿಸರ ಇಲಾಖೆಯಿಂದ ಖುದ್ದು ಪರಿಶೀಲನೆ ನಡೆಸಿ, 1 ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದರು. ಪರಿಸರ ಇಲಾಖೆಯಿಂದ ನಗರದಲ್ಲಿ ಮಾಲಿನ್ಯ ನಿಯಂತ್ರಣಕ್ಕಾಗಿ ಜಲ ಕಾಯಿದೆ, ವಾಯು ಕಾಯಿದೆ ಅಡಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ.