ಯಾದಗಿರಿ ನಗರಸಭೆಯಲ್ಲಿನ ಸಾಮಾನು ಜಿಲ್ಲಾ ನ್ಯಾಯಾಲಯ ಜಪ್ತಿ ಮಾಡಿದ ಹಿನ್ನೆಲೆಯಲ್ಲಿ ಬುಧವಾರ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ ನೆಲದ ಮೇಲೆ ಕುಳಿತಿರುವುದು.
- ಕಚೇರಿಗೆ ಬಂದ ಸಾರ್ವಜನಿಕರು ಪರೇಶ್ಯಾನ್
- ಜಿಲ್ಲಾ ನ್ಯಾಯಾಲಯ ನಗರಸಭೆ ಸಾಮಾನು ಜಪ್ತಿ
ಯಾದಗಿರಿ: ಜಾಗ ಕಳೆದುಕೊಂಡ ಸಂತ್ರಸ್ತೆಗೆ ನ್ಯಾಯಾಲಯ ನಿಗದಿ ಮಾಡಿದ ಪರಿಹಾರ ನೀಡದ ಕಾರಣ ಇಲ್ಲಿನ ನಗರಸಭೆ ಕಚೇರಿಯಲ್ಲಿನ ವಿವಿಧ ವಸ್ತುಗಳನ್ನು ಮಂಗಳವಾರ ಜಿಲ್ಲಾ ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿದ ಹಿನ್ನೆಲೆಯಲ್ಲಿ ಬುಧವಾರ ಕರ್ತವ್ಯಕ್ಕೆ ಹಾಜರಾದ ಬಹುತೇಕ ಸಿಬ್ಬಂದಿ ನೆಲದ ಮೇಲೆ ಕುಳಿತು ಕೆಲಸ ಮಾಡಿದರು.
ಇನ್ನೂ ಅನೇಕರು ಇಡೀದಿನ ಕುಳಿತುಕೊಳ್ಳಲು ಆಸನವಿಲ್ಲದೆ ನಗರಸಭೆ ಕಟ್ಟಡದ ಕೆಳಮಹಡಿ ಬಯಲು ಆವರಣದಲ್ಲಿ ನಿಂತುಕೊAಡೆ ಇದ್ದದ್ದು ಕಂಡು ಬಂತು. ಈ ಘಟನೆ ಗೊತ್ತಿರದ ಸಾರ್ವಜನಿಕರು ಎಂದಿನAತೆ ನಗರಸಭೆಗೆ ಬಂದು ತಮಗೆ ಬೇಕಾದ ವಿಭಾಗಗಳಿಗೆ ಹೋಗಿ ನೋಡಿದರೆ ಅಲ್ಲಿ ಕಂಪ್ಯೂಟರ್, ಟೇಬಲ್, ಕುರ್ಚಿ ಇಲ್ಲದ್ದು ಕಂಡು ಗಾಬರಿಗೊಂಡು ಏನಾಗಿದೆ ಎಂದು ಕೇಳಿ ಹೌಹಾರಿದರು.
ಈಗ ಏನು ಮಾಡುವುದು, ಎಲ್ಲಿಗೆ ಹೋಗಬೇಕು, ಯಾರಿಗೆ ಕೇಳಬೇಕು ಎಂದು ಅಲ್ಲಿದ್ದ ಸಿಬ್ಬಂದಿಗೆ ಪ್ರಶ್ನಿಸಿದರು. ಸದ್ಯ ಯಾವ ಕೆಲಸವೂ ಆಗುವುದಿಲ್ಲ. ನಂತರ ಬನ್ನಿ ಎಂದು ಹೇಳಿ ಕಳುಹಿಸಿದರು.
ಅನೇಕರು ಪೌರಾಯುಕ್ತರಿಗೆ ಭೇಟಿ ಮಾಡಬೇಕೆಂದು ಅವರ ಕಚೇರಿಗೆ ಹೋದರೆ ಅಲ್ಲಿ ಅವರು ಕುಳಿತುಕೊಳ್ಳುವ ಕುರ್ಚಿಯೇ ಇರಲಿಲ್ಲ. ಇದರಿಂದ ಗಲಿಬಿಲಿಗೊಂಡ ಅನೇಕರು ಹೊರಗೆ ಬಂದು ವಿಚಾರಿಸಿದಾಗಿ ವಿಷಯ ತಿಳಿದು ಮರಳಿದರು.