ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ
- ನ್ಯಾಯಾಲಯದ ಆದೇಶ ಪಾಲನೆ ಮಾಡುವುದಕ್ಕಾಗಿ ಈ ಬಾರಿ ತೃತೀಯ ಭಾಷೆಗೆ ಅಂಕಗಳನ್ನೇ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು
- ಸಭೆಯಲ್ಲಿ ಅಡ್ವೋಕೇಟ್ ಜನರಲ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಸಹ ಪಾಲ್ಗೊಂಡಿದ್ದರು.
- ಕೃಪಾಂಕ ನೀಡುವ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗುತ್ತದೆ.
ಬೆಂಗಳೂರು: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಗೆ ನ್ಯಾಯಾಲಯದ ಆದೇಶದಂತೆ ಗ್ರೇಡ್ ಬದಲಾಗಿ ಅಂಕಗಳನ್ನೇ ಪರಿಗಣಿಸಿ ಗುರುವಾರ ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ನ್ಯಾಯಾಲಯದ ಆದೇಶ ಪಾಲನೆ ಕುರಿತಂತೆ ಬುಧವಾರ ಸಂಜೆ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನ್ಯಾಯಾಲಯದ ಆದೇಶ ಮತ್ತು ಇಲಾಖೆಯ ನಿರ್ಧಾರ ಎರಡನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಸಭೆಯಲ್ಲಿ ಅಡ್ವೋಕೇಟ್ ಜನರಲ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಸಹ ಪಾಲ್ಗೊಂಡಿದ್ದರು. ನ್ಯಾಯಾಲಯದ ಆದೇಶ ಪಾಲನೆ ಮಾಡುವುದಕ್ಕಾಗಿ ಈ ಬಾರಿ ತೃತೀಯ ಭಾಷೆಗೆ ಅಂಕಗಳನ್ನೇ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಸ್ಪಷ್ಟಪಡಿಸಿದರು.
ಕೃಪಾಂಕ ಇಂದು ನಿರ್ಧಾರ
ಗ್ರೇಡ್ ನೀಡುವುದಾಗಿ ಹೇಳಿದ್ದರಿಂದ ಹೆಚ್ಚಿನ ಮಕ್ಕಳು ಪರೀಕ್ಷೆಗೆ ಗಮನ ಹರಿಸಿಲ್ಲ. ನೆಪಮಾತ್ರಕ್ಕೆ ಮಾತ್ರ ಹಾಜರಾಗಿದ್ದರು. ಈಗ ಅಂಕ ನೀಡಬೇಕಿರುವ ಕಾರಣ, ಅಂತಹ ಮಕ್ಕಳಿಗೆ ಕೃಪಾಂಕವನ್ನು ನೀಡುವಿರಾ ಎಂಬ ಮಾಧ್ಯಮ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕೃಪಾಂಕ ನೀಡುವ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗುತ್ತದೆ. ಸದ್ಯಕ್ಕೆ ಇಲ್ಲಿ ಯಾವುದೇ ವಿಷಯವನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.