- ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವುದು ನಿಷೇಧ
- ಕಲಬುರಗಿ ಶಾಲಾ ಶಿಕ್ಷಣ ಇಲಾಖೆ ಭರದ ಸಿದ್ಧತೆ
ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾರ್ಚ್ 18ರಂದು ಶುರುವಾಗಲಿದ್ದು, ಇದಕ್ಕಾಗಿ ಶಾಲಾ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 141 ಪರೀಕ್ಷಾ ಕೇಂದ್ರ ರಚಿಸಲಾಗಿದ್ದು, 49327 ಮಕ್ಕಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರತಿ ವರ್ಷ ಕೊನೆ ರ್ಯಾಂಕಿಂಗ್ನಲ್ಲಿರುತ್ತಿದ್ದ ಕಲ್ಯಾಣದ ಜಿಲ್ಲೆಗಳಲ್ಲಿನ ಆಡಳಿತ ಗ್ರೇಡ್ ಹೆಚ್ಚಳಕ್ಕೆ ಶತಪ್ರಯತ್ನ ಮಾಡುತ್ತಿದೆ. ಇನ್ನೇನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬೆರಳೆಣಿಕೆ ದಿನ ಬಾಕಿ ಇದ್ದು, ಮೂರೂ ಪರೀಕ್ಷೆಗಳಲ್ಲಿ ಫಲಿತಾಂಶ ವೃದ್ಧಿಸಿಕೊಳ್ಳಲು ಸಾಕಷ್ಟು ಶ್ರಮ ಹಾಕಲಾಗಿದೆ.
ಅಫಜಲಪುರ ತಾಲೂಕಿನಲ್ಲಿ ಪರೀಕ್ಷಾ ಕೇಂದ್ರ 12, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು 4543, ಆಳಂದ ಪರೀಕ್ಷಾ ಕೇಂದ್ರ 18, ವಿದ್ಯಾರ್ಥಿಗಳು 6001, ಚಿಂಚೋಳಿ ಪರೀಕ್ಷಾ ಕೇಂದ್ರ 10, ವಿದ್ಯಾರ್ಥಿಗಳು 3771, ಚಿತ್ತಾಪುರ ಪರೀಕ್ಷಾ ಕೇಂದ್ರ 21, ವಿದ್ಯಾರ್ಥಿಗಳು 6942, ಕಲಬುರಗಿ ಉತ್ತರ ಪರೀಕ್ಷಾ ಕೇಂದ್ರ 30, ವಿದ್ಯಾರ್ಥಿಗಳು 12005, ಕಲಬುರಗಿ ದಕ್ಷಿಣ ಪರೀಕ್ಷಾ ಕೇಂದ್ರ 23, ವಿದ್ಯಾರ್ಥಿಗಳು 7869, ಜೇವರ್ಗಿ ತಾಲೂಕು ಪರೀಕ್ಷಾ ಕೇಂದ್ರ 17, ವಿದ್ಯಾರ್ಥಿಗಳು 5081, ಸೇಡಂ ತಾಲೂಕು ಪರೀಕ್ಷಾ ಕೇಂದ್ರ 10, ವಿದ್ಯಾರ್ಥಿಗಳು 3115 ಪರೀಕ್ಷೆಗೆ ಹಾಜರಾಗಲಿದ್ದಾರೆ.
40ಪ್ಲಸ್ ಮಿಷನ್ ಕಾರ್ಯಾಗಾರ ಅನುಷ್ಠಾನಗೊಳಿಸಲಾಗುತ್ತಿದೆ. ಇದನ್ನು ಶಾಲಾ ಹಂತದಲ್ಲಿ ಅಳವಡಿಸಿಕೊಳ್ಳಲು ವಿಷಯ ಶಿಕ್ಷಕರ, ಮುಖ್ಯ ಶಿಕ್ಷಕರ ಕಾರ್ಯಾಗಾರ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಮಾಡಲಾಗಿದೆ. ಶಾಲಾ ಹಂತದಲ್ಲಿ ಮಿಷನ್ ಟ್ರಾಕಿಂಗ್ ಮಾಡುತ್ತಿದ್ದು, ದತ್ತು ಅಧಿಕಾರಿಯನ್ನಾಗಿ ಡಯಟ್ ಉಪನ್ಯಾಸಕರು, ಬಿಆರ್ಸಿ, ವಿಷಯ ಪರಿವೀಕ್ಷಕರು, ಇಲಾಖೆ ಅಧಿಕಾರಿಗಳಿಗೆ ಮೇಲ್ವಿಚಾರಣೆಗಾಗಿ ನೇಮಿಸಲಾಗಿದೆ. ಶಾಲಾ ಶಿಕ್ಷಕರು ಮಕ್ಕಳನ್ನು ದತ್ತು ನೀಡಲಾಗಿದೆ.
2025&26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದ್ದು, ಮಾರ್ಚ್ 18ರಂದು ಪ್ರಥಮ ಭಾಷೆ (ಕನ್ನಡ, ಹಿಂದಿ ಇತರೆ), 23ರಂದು ಕೋರ್ ವಿಷಯ (ವಿಜ್ಞಾನ ಇತರೆ), 25ರಂದು ದ್ವೀತಿಯ ಭಾಷೆ (ಇಂಗ್ಲಿಷ, ಕನ್ನಡ), 28ರಂದು ಗಣಿತ, 30ರಂದು ತೃತೀಯ ಭಾಷೆ (ಕನ್ನಡ, ಹಿಂದಿ, ಸಂಸತ, ಇಂಗ್ಲಿಷ ಇತರೆ), ಏಪ್ರಿಲ್ 1ರಂದು ಜೆಟಿಎಸ್ ವಿಷಯ, ಅರ್ಥಶಾಸ, ಏಪ್ರಿಲ್ 2ರಂದು ಕೋರ್ ವಿಷಯ ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಪ್ರೌಢ ಶಾಲೆಗಳು 1594, ಅನುದಾನಿತ ಶಾಲೆ 509 ಮತ್ತು ಅನುದಾನ ರಹಿತ ಶಾಲೆ 1797 ಸೇರಿ ಒಟ್ಟು 3900 ಶಾಲೆಗಳಿವೆ.
ಕಲಬುರಗಿ ಜಿಲ್ಲಾ ಉಪ ನಿರ್ದೇಶಕರ ಕಚೇರಿ ಮೂರು ಜಾಗೃತದಳ ತಂಡ ರಚಿಸಿದರೆ, ಡಯಟ್ ಕಚೇರಿಯಿಂದ ಒಂದು ತಂಡ ರಚಿಸಲಾಗಿದೆ. 141 ಅಧಿಕಾರಿಗಳ ಸ್ಥಾನಿಕ ಜಾಗೃತದಳ ತಂಡ ರಚಿಸಲಾಗಿದೆ. ಗ್ರೂಪ್ ಎ ಮತ್ತು ಬಿ ವೃಂದದ ಅಧಿಕಾರಿಗಳು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಕಾರ್ಯನಿರ್ವಹಿಸಲಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಆಸನ ವ್ಯವಸ್ಥೆ ಕಡ್ಡಾಯವಾಗಿ ಮಾಡುವುದು, ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಒಳಗಡೆ ಕೊಠಡಿ ಮೇಲ್ವಿಚಾರಕರು ನಕಲು ಮಾಡಲು ಆಸ್ಪದ ನೀಡುವಂತಿಲ್ಲ. ಹೊರಗಡೆಯಿಂದ ಬರುವ ನಕಲು ತಡೆಯಲು ಪರೀಕ್ಷಾ ಸಿಬ್ಬಂದಿಗೆ ಸೂಚಿಸಲಾಗಿದೆ.
ಸಿಸಿಟಿವಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾ ಹಂತದಲ್ಲಿ 25 ತಂಡ ರಚಿಸಲಾಗಿದೆ. ಪ್ರತಿ ಆರು ಕೇಂದ್ರಗಳಿಗೆ ಒಬ್ಬರಂತೆ ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಯ ವಿಸಿ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು, ಮೇಲ್ವಿಚಾರಕರು ಪರೀಕ್ಷೆ ಸಂದರ್ಭದಲ್ಲಿ ಮೊಬೈಲ್ ಬಳಕೆಗೆ ಅವಕಾಶವಿಲ್ಲ. ಪರೀಕ್ಷಾ ಕೇಂದ್ರದ ಒಳಗಡೆ ವಿದ್ಯಾರ್ಥಿಗಳನ್ನು ಬಿಡುವಾಗ ಭೌತಿಕವಾಗಿ ಪರಿಶೀಲನೆ ಮಾಡುವುದು, ಇದಕ್ಕಾಗಿ ಒಬ್ಬ ಪುರುಷ, ಒಬ್ಬ ಮಹಿಳಾ ಶಿಕ್ಷಕರನ್ನು ನಿಯೋಜಿಸಲು ಯೋಜಿಸಲಾಗಿದೆ.
ಯಾವುದೇ ಅಕ್ರಮ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರದ ಸುತ್ತಲೂ 144 ಕಲಂ ಜಾರಿಗಳಿಸಲಾಗುತ್ತಿದೆ. ಪ್ರತಿ ಕೇಂದ್ರಕ್ಕೆ ಒಬ್ಬರಂತೆ ಒಟ್ಟು 141 ಮೊಬೈಲ್ ಸ್ವಾಧಿನಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 53 ಜನ ಮಾರ್ಗ ಅಧಿಕಾರಿಳನ್ನಾಗಿ ನೇಮಕ ಮಾಡಲಾಗಿದೆ. ಪ್ರತಿ ಕೇಂದ್ರಕ್ಕೆ ಒಬ್ಬರಂತೆ 141 ಜನರನ್ನು ಪ್ರಶ್ನೆ ಪತ್ರಿಕೆ ಅಭಿರಕ್ಷಕರನ್ನಾಗಿ ನೇಮಕ ಮಾಡಲಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ&1ರ ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೂಲಸೌಲಭ್ಯ, ಜಾಗೃತದಳ ತಂಡ ರಚನೆ, ವೆಬ್ಕಾಸ್ಟಿಂಗ್ ಸೇರಿ ಅಗತ್ಯ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಹಂತದಲ್ಲೂ ಅಕ್ರಮಕ್ಕೆ ಅವಕಾಶವಿಲ್ಲ. ಪರೀಕ್ಷೆ ಶಾಂತ, ಸುಸೂತ್ರ ಜರುಗಿಸುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.