ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ 
ರಾಜ್ಯ

ಏ.5ರಿಂದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಆರಂಭ

ಎನ್.ಎಲ್. ಶಿವಮಾದು

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ರಾಜ್ಯಾದ್ಯಂತ ಏ.5ರಿಂದ ಏಕಕಾಲಕ್ಕೆ ಆರಂಭ
  • ಏ.2ರಂದು ಪರೀಕ್ಷೆಗಳು ಮುಕ್ತಾಯಗಾಗಲಿವೆ. ಏ.3ರಂದು ಬೆಳಗ್ಗೆ 9ಕ್ಕೆ ಮೌಲ್ಯಮಾಪನ ಕೇಂದ್ರಕ್ಕೆ ವ್ಯವಸ್ಥಾಪಕರು ಹಾಜರಾಗಬೇಕು.
  • ಏ.4ರಂದು ಬೆಳಗ್ಗೆ 10.30ಕ್ಕೆ ಜಂಟಿ ಮುಖ್ಯಮೌಲ್ಯಮಾಪಕರು ವೀಡಿಯೋ ಸಂವಾದದಲ್ಲಿ ಪಾಲ್ಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ರಾಜ್ಯಾದ್ಯಂತ ಏ.5ರಿಂದ ಏಕಕಾಲಕ್ಕೆ ಆರಂಭವಾಗಲಿದ್ದು, ಈ ಸಂಬಂಧ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕರ್ತವ್ಯ ಮತ್ತು ಮಾರ್ಗಸೂಚಿ ಬಗ್ಗೆ ಸುತ್ತೋಲೆ ಹೊರಡಿಸಿದೆ.
ಏ.2ರಂದು ಪರೀಕ್ಷೆಗಳು ಮುಕ್ತಾಯಗಾಗಲಿವೆ. ಏ.3ರಂದು ಬೆಳಗ್ಗೆ 9ಕ್ಕೆ ಮೌಲ್ಯಮಾಪನ ಕೇಂದ್ರಕ್ಕೆ ವ್ಯವಸ್ಥಾಪಕರು ಹಾಜರಾಗಬೇಕು. ಏ.4ರಂದು ಬೆಳಗ್ಗೆ 10.30ಕ್ಕೆ ಜಂಟಿ ಮುಖ್ಯಮೌಲ್ಯಮಾಪಕರು ವೀಡಿಯೋ ಸಂವಾದದಲ್ಲಿ ಪಾಲ್ಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಏ.5ರಿಂದ ಮೌಲ್ಯಮಾಪನ ಕೇಂದ್ರಗಳಿಗೆ ಉಪ ಮುಖ್ಯಮಾಪಕರು ಹಾಜರಾಗಿ ಉತ್ತರ ಪತ್ರಿಕೆಗಳ ಕೋಡಿಂಗ್, ಡೀಕೋಡಿಂಗ್ ಆರಂಭಿಸಬೇಕು. ಏ.6ರಿಂದ ಸಹಾಯಕ ಮೌಲ್ಯಮಾಪಕರು ಹಾಜರಾಗಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭಿಸಬೇಕು ಎಂದು ಸೂಚಿಸಲಾಗಿದೆ.
ಈ ಮಧ್ಯೆ, ಮೌಲ್ಯಮಾಪನದ ದಿನಗಳಲ್ಲಿ ಕೇಂದ್ರದ ಸುತ್ತಲ 200 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲು ಸಂಬಂಧಿಸಿದ ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರರಿಗೆ ಪತ್ರ ಬರೆದು ಕ್ರಮ ವಹಿಸಬೇಕು. ಮೌಲ್ಯಮಾಪನ ಕೇಂದ್ರಗಳಿಗೆ ಯಾವುದೇ ಸಂಘಟನೆಗಳ ಸದಸ್ಯರು, ರಾಜಕೀಯ ಪಕ್ಷದವರು, ಟಿವಿ ಹಾಗೂ ಪತ್ರಿಕಾ ಮಾಧ್ಯಮದವರು ಅಥವಾ ಇನ್ಯಾವುದೇ ಅನ್ಯ ವ್ಯಕ್ತಿಗಳು ಪ್ರವೇಶಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲು ಡಿಡಿಪಿಐ ಮತ್ತು ಬಿಇಒಗಳು ಕ್ರಮ ವಹಿಸಬೇಕು.
ಮೌಲ್ಯಮಾಪನ ಕೇಂದ್ರಗಳಿಗೆ ಯಾವುದೇ ಲೇಖಕ, ಪ್ರಕಾಶಕರು ಪುಕಸ್ತ ಮಾರಾಟದ ಸಲುವಾಗಿ ಬರುವುದನ್ನು ನಿಷೇಧಿಸಬೇಕು. ಮೌಲ್ಯಮಾಪಕರಿಗೆ ಕಾಫಿ/ಟೀ, ತಿಂಡಿ, ಊಟವನ್ನು ಯಾವುದೇ ಪ್ರಾಯೋಜಕರಿಂದ ಪಡೆಯುವುದನ್ನು ನಿಷೇಧಿಸಲಾಗಿದೆ.