ನೆಲಮಂಗಲ ಕವಾಡಿ ಮಠದ ಶ್ರೀ ವೀರಭದ್ರೇಶ್ವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ನೆಲಮಂಗಲ : ನಗರದ ಪುರಾಣ ಪ್ರಸಿದ್ಧ ಕವಾಡಿ ಮಠದ ಶ್ರೀ ವೀರಭದ್ರೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ನಗರದ ಮುಖ್ಯರಸ್ತೆಯಲ್ಲಿರುವ ಕವಾಡಿಮಠದ ವೀರಭದ್ರೇಶ್ವರ ದೇವಾಲಯದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಯಿತು. ಬುಧವಾರ ಮಧ್ಯಾಹ್ನದ ಮಿಥುನ ಲಗ್ನದಲ್ಲಿ ನೆರೆದಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ಫಲಪುಷ್ಪಾಲಂಕಾರಗಳಿಂದ ಮಾಡಿದ ರಥವನ್ನು ಎಳೆದು ಸಂಭ್ರಮಿಸಿದರು. ಜಾನಪದ ಕಲಾತಂಡಗಳಾದ ವೀರಗಾಸೆ ನಂದಿಧ್ವಜ ಕುಣಿತಗಳು ಭಕ್ತರ ಗಮನಸೆಳೆದವು.
ಜಾತ್ರೆ ಪ್ರಯುಕ್ತ ಮಂಗಳವಾರ ರಾತ್ರಿ ನಗರದ ಪ್ರಮುಖ ಬೀದಿಗಳಲ್ಲಿ ವೀರಭದ್ರೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು. ನಂತರ ದೇವಾಲಯದ ಆವರಣದಲ್ಲಿ ಬೃಹತ್ ಅಗ್ನಿಕುಂಡದಲ್ಲಿ ವೀರಭದ್ರ ದೇವರು ಪ್ರವೇಶ ಮಾಡುತ್ತಿದ್ದಂತೆ ಹಿಂಬದಿಯಿಂದ ಸಹಸ್ರಾರು ಸಂಖ್ಯೆಯ ಭಕ್ತರು ಅಗ್ನಿಕುಂಡ ಪ್ರವೇಶ ಮಾಡಿ ತಮ್ಮ ಹರಕೆಗಳನ್ನು ತೀರಿಸಿದರು.
ದಾಸೋಹ ವ್ಯವಸ್ಥೆ: ಸೋಮವಾರದಿಂದಲೂ ನಗರದ ಕವಾಡಿ ಮಠದಲ್ಲಿ ಜಾತ್ರ ಮಹೋತ್ಸವ ನಡೆದಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಎಲ್ಲ ಸದ್ಭಕ್ತರಿಗೂ ದೇವಾಲಯ ಸಮಿತಿಯಿಂದ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು. ಬ್ರಹ್ಮತರೋತ್ಸವದ ದಿನದಂದು ನಗರದ ರುದ್ರೇಶ್ವರ ಸೇವಾಸಮತಿ, ಯುವಕ ಸಂದಿಂದ ಅರವಂಟಿಕೆಗಳನ್ನು ಹಾಕಿದ್ದು, ನರೆದಿದ್ದ ಭಕ್ತರಿಗೆ ಮಜ್ಜಿಗೆ ಪಾನಕ ಕೋಸಂಬರಿ ನೀಡಿ ಬಿರುಬಿಸಿಲನ ದಣಿವಾರಿಸಿದರು.
ರಥೋತ್ಸವದ ಅಂಗವಾಗಿ ಶಾಸಕ ಎನ್. ಶ್ರೀನಿವಾಸ್, ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ನಾಗರಾಜು, ನಗರಸಭೆ ಮಾಜಿ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಸದಸ್ಯ ಸಿ. ಪ್ರದಿಪ್, ವೀರಶೈವ ಸಮಾಜದ ಮುಖಂಡರಾದ ಎನ್.ಎಸ್. ನಟರಾಜು, ದಯಶಂಕರ್, ಜಗದೀಶ್, ಎನ್.ಎಸ್. ರಾಜು, ರುದ್ರಮೂರ್ತಿ, ಶಾಂತಕುಮಾರ್, ವೀರಶೈವಮಹಾಸಭಾ ತಾಲೂಕು ಅಧ್ಯಕ್ಷ ಎನ್. ರಾಜಶೇಖರ್, ಟೌನ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್. ಚೆನ್ನಬಸವರಾಜು, ನಿರ್ದೇಶಕ ಕಾರ್ತಿಕ್, ಬಸವೇಶ್ವರ ಯುವಕ ಸಮಿತಿ ಅಧ್ಯಕ್ಷ ಎನ್.ಎಸ್. ಗಣೇಶ್ ಇದ್ದರು.