ಜೇವರ್ಗಿ: ಕೋಳಕೂರ ಗ್ರಾಮದಲ್ಲಿ ಶ್ರೀ ಸಿದ್ಧಬಸವೇಶ್ವರ ಜಾತ್ರೋತ್ಸವ ಗುರುವಾರ ವೈಭವದಿಂದ ಜರುಗಲಿದೆ. ಜಾತ್ರೆ ನಿಮಿತ್ತ ಶ್ರೀ ಕೆಂಚಬಸವ ಶಿವಾಚಾರ್ಯ ಸಾನ್ನಿಧ್ಯ ಮತ್ತು ಬಸವಪಟ್ಟಣದ ಶ್ರೀ ಮರೆಪ್ಪ ಶರಣರ ಸಮ್ಮುಖದಲ್ಲಿ ಯರೆಬೂದಿಹಾಳದ ಷಂಡಾಕ್ಷರಿ ಶಾಸಿ ಹಿರೇಮಠ 14ರಿಂದ ಬುಧವಾರವರೆಗೆ ರಾತ್ರಿ 8ರಿಂದ 10ರವರೆಗೆ ಪ್ರವಚನ ನಡೆಸಿಕೊಟ್ಟರು. ಬುಧವಾರ ಬೆಳಗ್ಗೆ ಸಿದ್ಧಬಸವೇಶ್ವರ ಕತುೃರ್ ಗದ್ದುಗೆಗೆ ಮಹಾ ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ನಡೆಯಿತು. ಗುರುವಾರ ಬೆಳಗ್ಗಿನ ಜಾವ 5ಕ್ಕೆ ಶ್ರೀ ಭಾಗ್ಯವಂತಿ ದೇವಿ ಹಾಗೂ ಶ್ರೀ ಬೀರಲಿಂಗೇಶ್ವರರ ಗಂಗಾಸ್ನಾನ ನಂತರ ನೀಲಕಂಠರಾಯ ಗೌಡ ಮಾಲಿಪಾಟೀಲ ಮನೆಯಿಂದ ಕಳಸ ಹಾಗೂ ಬಸವರಾಜ ಕುಮ್ಮಾಣಿ ಮನೆಯಿಂದ ಚೌರಾ ಬರಲಿದೆ. ಬಳಿಕ ಸಿದ್ಧಬಸವೇಶ್ವರ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪುರವಂತರ ಸೇವೆ, ನಂದಿಕೋಲು, ಬಾಜಾ&ಭಜಂತ್ರಿ, ಡೊಳ್ಳು ವಾದ್ಯದೊಂದಿಗೆ ಪಲ್ಲಕ್ಕಿ ಮೆರವಣಿಗೆ ಮೂಲಕ ಭೀಮಾ ನದಿಯಲ್ಲಿ ಸಿದ್ಧಬಸವೇಶ್ವರರ ಗಂಗಾಸ್ನಾನ, ಸಂಜೆ 5ಕ್ಕೆ ಕಳಸಾರೋಹಣ ನೆರವೇರಲಿದೆ. ರಾತ್ರಿ 9ಕ್ಕೆ ಶ್ರೀ ರೇಣುಕಾದೇವಿ ಮಹಾತ್ಮೆ ಭಕ್ತಿಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ. ಜಾತ್ರೆಗೆ ಆಗಮಿಸಿದ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಶುಕ್ರವಾರ ಜಾನುವಾರು ಜಾತ್ರೆ ನಡೆಯಲಿದೆ. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ ಸಿದ್ಧಬಸವೇಶ್ವರ ಟ್ರಸ್ಟ್ ಹಾಗೂ ಸಕಲ ಸದ್ಭಕ್ತ ಮಂಡಳಿ ಮನವಿ ಮಾಡಿದೆ.