Sri Neeru for 12 villages!
ಚಿಕ್ಕನಾಯಕನಹಳ್ಳಿ: ತಾಲೂಕಿನ ಬೋರನಕಣಿವೆ ಜಲಾಶಯದ ಅಚ್ಚುಕಟ್ಟು ಪ್ರದೇಶದ 12 ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಅಂತರ್ಜಲ ವೃದ್ಧಿಗೆ ಜಲಾಶಯದಿಂದ ನೀರು ಹೊರಬಿಡುವ ಕುರಿತು ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ಸಪ್ತಶ್ರೀ ಅಧ್ಯಕ್ಷತೆಯಲ್ಲಿ ಬುಧವಾರ ನೀರಿನ ಸಲಹಾ ಸಮಿತಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ಸಪ್ತಶ್ರೀ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 2,423.50 ಎಂಸಿಎಫ್ಟಿ. ಆದರೆ, ಪ್ರಸ್ತುತ 605.88 ಎಂಸಿಎಫ್ಟಿ ನೀರು ಮಾತ್ರ ಲಭ್ಯವಿದೆ. ಇಲಾಖೆಯ ಇಂಜಿನಿಯರ್ಗಳಿಂದ ಮೇ 2 ರೊಳಗೆ ತಾಂತ್ರಿಕ ವರದಿ ತರಿಸಿಕೊಳ್ಳಲಾಗುವುದು. ವರದಿ ಬಂದ ನಂತರ 15 ದಿನ ನೀರು ಬಿಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು. ತಹಸೀಲ್ದಾರ್ ಎಂ. ಮಮತಾ ಮಾತನಾಡಿ, ನೀರು ಬಿಡುವ ಸಂದರ್ಭದಲ್ಲಿ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.
ಸಭೆಯಲ್ಲಿದ್ದ ಅಚ್ಚುಕಟ್ಟು ಪ್ರದೇಶದ ರೈತರು ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿದರು. ಬಿಸಿಲ ಬೇಗೆಯಿಂದ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಕೊಳವೆಬಾವಿಗಳು ಬತ್ತಿ ಹೋಗುತ್ತಿದೆ. ಜಲಾಶಯದಿಂದ ನೀರು ಬಿಟ್ಟರೆ ಮಾತ್ರ ಪಶುಸಂಗೋಪನೆ ಮತ್ತು ಕೃಷಿ ನಂಬಿದ ಕುಟುಂಬಗಳಿಗೆ ನೆಮ್ಮದಿ ಸಿಗಲು ಸಾಧ್ಯ. ಶೀಘ್ರ ನೀರು ಹರಿಸುವಂತೆ ಮನವಿ ಮಾಡಿದರು.