ಹಾಲ್ದೇನಹಳ್ಳಿ ಸಂಚಾರ ಸಿಕ್ಕಿಗೆ ಶ್ರೀ ಮುಕ್ತಿ traffic jam
ಆನೇಕಲ್: ಸಮೀಪದ ಹಾಲ್ದೇನಹಳ್ಳಿ ಬಳಿ ರೈಲು ಕ್ರಾಸಿಂಗ್ನಿಂದಾಗಿ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದ್ದು, ನಿತ್ಯ ಈ ಭಾಗದಲ್ಲಿ ಸಂಚರಿಸುವವರು ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಗಿದೆ. ಹಲವು ವರ್ಷಗಳಿಂದ ಸಮಸ್ಯೆ ಇದ್ದು, ಹರಿಯಬೇಕಾದರೆ ಮೇಲ್ಸೇತುವೆ ಅನಿವಾರ್ಯ, ಈಗಾಗಲೇ ರೈಲ್ವೆ ಅಧಿಕಾರಿಗಳು ಕಾಮಗಾರಿಗೆ 70 ಕೋಟಿ ರೂ. ಆಗಲಿದೆ ಎಂದು ತಿಳಿಸಿದ್ದಾರೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು. traffic jam
ಪಟ್ಟಣದ ಹಾಲ್ದೇನಹಳ್ಳಿ ರೈಲ್ವೆ ಹಾಗೂ ಇತರೆ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ, ಆನೇಕಲ್, ಅತ್ತಿಬೆಲೆ ಮಾರ್ಗವಾಗಿ ಹಾಲ್ದೇನಹಳ್ಳಿ ಲೆವೆಲ್ ಕ್ರಾಸಿಂಗ್ ಬಳಿ ಮೇಲ್ಸೇತುವೆ ಕಾಮಗಾರಿ ತ್ವರಿತವಾಗಿ ಆಗಬೇಕಿದೆ. ಲೆವೆಲ್ ಕ್ರಾಸಿಂಗ್ ಗೇಟ್ ಮುಚ್ಚುವ ಸಂದರ್ಭದಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತಿದ್ದು, ಈ ವಿಚಾರವನ್ನು 4 ತಿಂಗಳ ಹಿಂದೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಗಮನಕ್ಕೆ ತಂದಿದ್ದು, ರಾಜ್ಯ ರೈಲ್ವೆ ಖಾತೆ ಸಚಿವರಾದ ಸೋಮಣ್ಣನವರ ಗಮನಕ್ಕೂ ಸಹ ತರಲಾಗಿದೆ ಎಂದರು.
ಈಗಾಗಲೇ ಫ್ಲಾಟ್ಫಾಮ್ರ್ ವಿಸ್ತರಣೆ ಕಾಮಗಾರಿ ಆನೇಕಲ್ ರೈಲ್ವೆ ನಿಲ್ದಾಣದಲ್ಲಿ ಪ್ರಗತಿಯಲ್ಲಿದೆ. ಕಾಮಗಾರಿ ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಪ್ರಯಾಣಿಕರಿಗೆ, ಸ್ಥಳಿಯರಿಗೆ ಹೆಚ್ಚಿನ ಉಪಯೋಗ ಆಗಲಿದೆ ಎಂದು ಹೇಳಿದರು.
ಆನೇಕಲ್ ರೈಲ್ವೆ ನಿಲ್ದಾಣದಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, 47 ಲಕ್ಷ ರೂಪಾಯಿಯಲ್ಲಿ ರಸ್ತೆ ದುರಸ್ತಿ ಮಾಡಲು ಅಧಿಕಾರಿಗಳು ಹಣ ಮೀಸಲಿಟ್ಟಿರುವ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿದ್ದು, ಮುಂದಿನ ದಿನಗಳಲ್ಲಿ ಈ ಕಾಮಗಾರಿಯೂ ಆಗಲಿದೆ ಎಂದು ತಿಳಿಸಿದರು.
ಹೊಸೂರು&ಬೆಂಗಳೂರು ಮುಖ್ಯರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಕಾಮಗಾರಿಯ ವೇಗ ಹೆಚ್ಚಿಸಲು ಸೂಚಿಸಿದ್ದೇನೆ. ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಎಸ್ಟಿಆರ್ ರಸ್ತೆ ಕಾಮಗಾರಿ ಮುಗಿದು ವಾಹನ ಸಂಚಾರಕ್ಕೆ ಮುಕ್ತ ಆಗಲಿದೆ ಎಂದರು.
ಕೇಂದ್ರ ಮಾಜಿ ಸಚಿವ ನಾರಾಯಣಸ್ವಾಮಿ ಮಾತನಾಡಿ, ತಾಲೂಕಿನ ವಿವಿಧ ರೈಲ್ವೆ ಸಂಬಂಧಿತ ಸಾರ್ವಜನಿಕ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಭಾರತೀಯ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಬಾಕಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಂಡು ಶೀಘ್ರ ಪೂರ್ಣಗೊಳಿಸಬೇಕು ಎಂದರು.
ಹಾಲ್ದೇನಹಳ್ಳಿ ತಿಮ್ಮರಾಜು, ತಿಲಕ್ ಗೌಡ, ಸುರೇಶ್ ಬಾಬು, ರಘುರಾಮ್, ರಾಧಾಕೃಷ್ಣ, ಜಗದೀಶ್, ಪತ್ರಕರ್ತ ರವಿಶಾಸ್ತ್ರೀ, ರೈಲ್ವೆ ಇಲಾಖೆ ಅಧಿಕಾರಿಗಳಾದ ಅಸಿಸ್ಟೆಂಟ್ ಡಿವಿಜನಲ್ ಇಂಜಿನಿಯರ್ ವಿ.ಪಿವಿನೋದ್, ಅಧಿಕಾರಿಗಳಾದ ಎಸ್.ಜಿ ಬ್ಯಾನರ್ಜಿ, ಮುರಳಿ ಇದ್ದರು.