ಹನೂರು ಸಮೀಪದ ಆನಾಪುರ ಗ್ರಾಮದಲ್ಲಿ ಶ್ರೀ ಕೋಣನ ಮಾರಮ್ಮ ಹಾಗೂ ಬೀರು ದೇವರುಗಳ ಉತ್ಸವ ಮೂರ್ತಿಯ ಮೆರವಣಿಗೆಯು ವಿಜೃಂಭಣೆಯಿಂದ ನೆರವೇರಿತು.
ಹನೂರು: ತಾಲೂಕಿನ ಮಂಗಲ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಆದಿಶಕ್ತಿ ಶ್ರೀ ಕೋಣನ ಮಾರಮ್ಮನ ಹಬ್ಬದ ಪ್ರಯುಕ್ತ ಮಂಗಳವಾರ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆಯು ಕಣ್ಣೂರು, ಆನಾಪುರ ಹಾಗೂ ಮಂಗಲ ಗ್ರಾಮಗಳಲ್ಲಿ ವಿಜೃಂಭಣೆಯಿಂದ ನೆರವೇರಿತು.
ಹಬ್ಬದ ಅಂಗವಾಗಿ ದೇಗುಲವನ್ನು ತಳಿರು, ತೋರಣ, ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮುಖ್ಯ ರಸ್ತೆ ಸೇರಿದಂತೆ ಬಡಾವಣೆಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು. ಸೋಮವಾರ ಬೆಳಗ್ಗೆ ಗ್ರಾಮದ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ಅರ್ಚಕರು, ನೂರಾರು ಭಕ್ತರು ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯ ಮೇಳದೊಂದಿಗೆ ದೇವಿಯ ಉತ್ಸವ ಮೂರ್ತಿಯನ್ನು ಸುಮಾರು 12 ಕಿ.ಮೀ ಅಂತರವಿರುವ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಗುಂಡಾಲ್ ಜಲಾಶಯದಲ್ಲಿನ ಕಲ್ಲುಕಟ್ಟೆಗೆ ಕಾಲ್ನಡಿಗೆಯಲ್ಲಿ ಕೊಂಡೋಯ್ದು ನೂರೊಂದು ಪೂಜೆಯೊಂದಿಗೆ ವಿಶೇಷ ಧಾರ್ಮಿಕ ವಿಧಿ ನೆರವೇರಿಸಲಾಯಿತು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ವಿಶೇಷ ಪಂಚಾಮೃತ ಅಭಿಷೇಕ ವಿತರಿಸಲಾಯಿತು.
ಬಳಿಕ ದೇವಿಯ ಉತ್ಸವ ಮೂರ್ತಿಯನ್ನು ಮೋಡಹಳ್ಳಿ ಗ್ರಾಮದ ಬ್ರಹ್ಮೇಶ್ವರ ದೇವಾಲಯಕ್ಕೆ ತರಲಾಯಿತು. ಇಲ್ಲಿಯೇ ವಾಸ್ತವ್ಯ ಹೂಡಲಾಯಿತು. ಮಂಗಳವಾರ ಬೆಳಗ್ಗೆ ವಿವಿಧ ಪುಷ್ಪಗಳಿಂದ ಸಿಂಗರಿಸಿದ ದೇವಿಯ ಉತ್ಸವ ಮೂರ್ತಿ ಹಾಗೂ ಬೀರು ದೇವರುಗಳನ್ನು ಕಣ್ಣೂರು, ಆನಾಪುರ ಹಾಗೂ ಮಂಗಲ ಗ್ರಾಮದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು.
ಈ ವೇಳೆ ವಿವಿಧ ದೇಗುಲದ ಅರ್ಚಕರು ಭಕ್ತಿ ಪರವಶವಾಗಿ ವಾದ್ಯದ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಭಕ್ತರು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು. ಯುವಕರು ಪಟಾಕಿ ಸಿಡಿಸುತ್ತಾ ವಾದ್ಯದ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಬುಧವಾರ ತಂಪುಜ್ಯೋತಿ ಸೇವೆ ನಡೆಯಲಿದ್ದು, ಮಹಿಳೆಯರು, ಹೆಣ್ಣು ಮಕ್ಕಳು ಕೋಣನ ಮಾರಮ್ಮ ಹಾಗೂ ದೊಡ್ಡಮ್ಮತಾಯಿ ದೇಗುಲಕ್ಕೆ ತಂಪುಜ್ಯೋತಿ ಅರ್ಪಿಸಲಿದ್ದಾರೆ.