ಶ್ರೀ ಜಯತೀರ್ಥರ ಆರಾಧನೆ ನಿಮಿತ್ತ ಸೇಡಂ ತಾಲೂಕಿನ ಮಳಖೇಡದಲ್ಲಿ ಹೈದರಾಬಾದ್​ನ ಯುವಾತ್ಮ ತಂಡದ ಸದಸ್ಯರು ಕಾಗಿಣೆ ನದಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು. 
ರಾಜ್ಯ

ಆ.2ರಿಂದ ಶ್ರೀ ಜಯತೀರ್ಥರ ಆರಾಧನೆ

ಪ್ರಮುಖ ಮುಖ್ಯಾಂಶಗಳು

  • ಮಳಖೇಡದಲ್ಲಿ ಯುವಾತ್ಮ ತಂಡದಿಂದ ಸ್ವಚ್ಛತಾ ಕಾರ್ಯ
  • ಕಾಗಿಣೆ ನದಿ, ಮೂಲ ವೃಂದಾವನ ಪರಿಸರದಲ್ಲಿ ಕ್ಲಿನಿಂಗ್​
ಕಲಬುರಗಿ: ಸೇಡಂ ತಾಲೂಕಿನ ಮಳಖೇಡದಲ್ಲಿ ಆ.2ರಿಂದ 4ರವರೆಗೆ ಮೂರು ದಿನ ವಿಜೃಂಭಣೆಯಿಂದ ನಡೆಯಲಿರುವ ಶ್ರೀ ಜಯತೀರ್ಥರ ಆರಾಧನೆಗೆ ಸಿದ್ಧತೆ ಹಾಗೂ ಸ್ವಚ್ಛತೆ ಕಾರ್ಯಗಳು ಭರದಿಂದ ನಡೆಯುತ್ತಿವೆ.
ಹೈದರಾಬಾದ್​ನ ಯುವಾತ್ಮ ತಂಡದ ಸದಸ್ಯರು ಮಾರ್ಗದರ್ಶಕ ಪಂ.ವಾಸುದೇವಾಚಾರ್ಯ ಕಾನಗೋವಿ ನೇತೃತ್ವದಲ್ಲಿ ಶನಿವಾರ ಮಳಖೇಡಕ್ಕೆ ಆಗಮಿಸಿದ್ದು, ಕಾಗಿಣೆ ನದಿ ಪರಿಸರ, ವೃಂದಾವನ ಸುತ್ತ, ಮೊಗಸಾಲೆ, ಇಂದ್ರಭವನ, ರಥ ಕೋಣೆ, ಭೋಜನ ಶಾಲೆ ಸೇರಿ ವಿವಿಧೆಡೆ ಸ್ವಚ್ಚತೆ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಪಂ.ವಾಸುದೇವಾಚಾರ್ಯ ಕಾನಗೋವಿ ಮಾತನಾಡಿ, ಉತ್ತರಾದಿ ಮಠಾಧೀಶರ ಪ್ರೇರಣೆಯೇ ಯುವಕರು ಇಲ್ಲಿಗೆ ಬಂದು ಇಂತಹ ಸ್ವಚ್ಛತೆ ಕೆಲಸಗಳಲ್ಲಿ ಕೈ ಜೋಡಿಸಲು ಮೂಲ ಕಾರಣ. ಕಳೆದ 3 ವರ್ಷದಿಂದ ಹೈದರಾಬಾದ್​ನ ಯುವಾತ್ಮ ತಂಡದವರು ಇಲ್ಲಿಗೆ ಬರುತ್ತಿದ್ದಾರೆ. ತಾವೂ ಸಹ ಇವರೊಂದಿಗೆ ಬಂದು ಮಾರ್ಗದರ್ಶನ ನೀಡುತ್ತಿರುವುದಾಗಿ ಹೇಳಿದರು.
ಮಳಖೇಡ ಉತ್ತರಾದಿಮಠದ ವ್ಯವಸ್ಥಾಪಕ ಪಂ.ವೆಂಕಣ್ಣಾಚಾರ್ಯ ಪೂಜಾರ ಇತರರಿದ್ದರು.
ಎರಡು ದಿನ ಶ್ರಮ ಕಾರ್ಯ
ಮಳಖೇಡದಲ್ಲಿ ಹೈದರಾಬಾದ್​ನ ಯುವಾತ್ಮ ತಂಡದ ಸದಸ್ಯರಾದ ಪ್ರಮೋದ ಡಿಡ್ಡಿ, ಪ್ರಮೋದ ಸಗರಂ, ಅಮೋ ಗಟ್ಟು, ಋತುಪರ್ಣ ಮಣೂರು, ಪ್ರದಿಪ, ಹನುಮೇಶ, ಪ್ರಮೋದ ಹಾಗೂ ಲಾತೂರ್​ ಹಾಗೂ ಮಹಾರಾಷ್ಟ್ರದಿಂದ ಪ್ರತ್ಯೇಕವಾಗಿ 15 ಜನ ಭಕ್ತರು ಅಲ್ಲಿಯ ಮಠದ ಅಧಿಕಾರಿ ರೂತ್ತಮಾಚಾರ್ಯ ಜೋಶಿ ಅವರ ನೇತೃತ್ವದಲ್ಲಿ ಶನಿವಾರ, ಭಾನುವಾರ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.