‘ಗೇರ್ ಫಾರ್ ಗೋಲ್ಡ್’ ಯೋಜನೆಯ ಭಾಗವಾಗಿ ಕ್ರೀಡಾ ಪ್ರಾಯೋಜಕತ್ವ ಒದಗಿಸಿದ ಇನ್ಫೋಸಿಸ್ ಮತ್ತು ಗೋ ಸ್ಪೋರ್ಟ್ಸ್ ಫೌಂಡೇಷನ್ 
ರಾಜ್ಯ

‘ಗೇರ್ ಫಾರ್ ಗೋಲ್ಡ್’ ಯೋಜನೆಯ ಭಾಗವಾಗಿ ಕ್ರೀಡಾ ಪ್ರಾಯೋಜಕತ್ವ ಒದಗಿಸಿದ ಇನ್ಫೋಸಿಸ್ ಮತ್ತು ಗೋ ಸ್ಪೋರ್ಟ್ಸ್ ಫೌಂಡೇಷನ್

ಬೆಂಗಳೂರು: ಇನ್ಫೋಸಿಸ್ ಕಂಪನಿಯ ಸಮಾಜಸೇವೆ ಮತ್ತು ಸಿಎಸ್ಆರ್ ಅಂಗವಾದ ಇನ್ಫೋಸಿಸ್ ಫೌಂಡೇಷನ್, ಇಂದು ಗೋಸ್ಪೋರ್ಟ್ಸ್ ಫೌಂಡೇಷನ್‌ ಜೊತೆಗಿನ ತನ್ನ ಸಹಯೋಗವನ್ನು ವಿಸ್ತರಿಸಿಕೊಂಡಿರುವುದಾಗಿ ಘೋಷಿಸಿದೆ. ಈ ಸಹಯೋಗದ ಭಾಗವಾಗಿ ದೇಶದ ಹಲವು ಕ್ರೀಡಾ ಅಕಾಡೆಮಿಗಳಿಗೆ ಪ್ರಾಯೋಜಕತ್ವ ಒದಗಿಸುತ್ತಿದೆ. ಈ ಎರಡೂ ಸಂಸ್ಥೆಗಳು ಈಗಾಗಲೇ ಜಾರಿಯಲ್ಲಿರುವ ‘ಗರ್ಲ್ಸ್ ಫಾರ್ ಗೋಲ್ಡ್’ ಯೋಜನೆಯನ್ನು ಎಲ್ಲರನ್ನೂ ಒಳಗೊಳ್ಳುವ ‘ಗೇರ್ ಫಾರ್ ಗೋಲ್ಡ್’ ಯೋಜನೆಯನ್ನಾಗಿ ಬದಲಿಸಿದ್ದು, ಈ ಯೋಜನೆಯ ಮೂಲಕ ಪುರುಷ, ಮಹಿಳೆ ಮತ್ತು ವಿಕಲಚೇತನ ಕ್ರೀಡಾಪಟುಗಳು ಸೇರಿದಂತೆ ಪ್ರತಿಭಾವಂತ ಕ್ರೀಡಾಪಟುಗಳಿಗೆ ನೆರವು ಒದಗಿಸಲಿದೆ. ಜೊತೆಗೆ ದೇಶದ ಪ್ರಮುಖ ಕ್ರೀಡಾ ಅಕಾಡೆಮಿಗಳ ಜೊತೆಗಿನ ಸಹಯೋಗದ ಮೂಲಕ ಕ್ರೀಡಾ ಪ್ರತಿಭೆಗಳನ್ನು ಬೆಳೆಸಲು ಒಂದು ಸಮಗ್ರ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ.
‘ಗೇರ್ ಫಾರ್ ಗೋಲ್ಡ್’ ಯೋಜನೆಯು ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ವೇಯ್ಟ್ ಲಿಫ್ಟಿಂಗ್, ಬಾಕ್ಸಿಂಗ್, ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ಸೇರಿದಂತೆ ಒಟ್ಟು ಆರು ಕ್ರೀಡಾ ವಿಭಾಗಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಅಕಾಡೆಮಿ-ಫಸ್ಟ್ ವಿಧಾನದ ಮೂಲಕ ಮೂಲಸೌಕರ್ಯ ಅಭಿವೃದ್ಧಿ, ಆಧುನಿಕ ಕ್ರೀಡಾ ವಿಜ್ಞಾನ ಅಳವಡಿಕೆ ಮತ್ತು ಅತ್ಯಾಧುನಿಕ ಸಲಕರಣೆ-ತಂತ್ರಜ್ಞಾನಗಳನ್ನು ಒದಗಿಸುವುದು ಇತ್ಯಾದಿ ಕಾರ್ಯ ನಡೆಸಲಾಗುವುದು. ಈ ಅಕಾಡೆಮಿಗಳಲ್ಲಿ ತರಬೇತಿ ಪಡೆಯುವ ಕ್ರೀಡಾಪಟುಗಳಿಗೆ ವಿದ್ಯಾರ್ಥಿವೇತನ, ಉನ್ನತ ತರಬೇತಿ, ಸ್ಪರ್ಧೆಗಳಲ್ಲಿ ಭಾಗವಹಿಸಲು ನೆರವು, ಪೌಷ್ಟಿಕಾಹಾರ ಮತ್ತು ಗಾಯ ನಿರ್ವಹಣೆ ಮಾರ್ಗದರ್ಶನ ಸಿಗಲಿದೆ. ಕಾರ್ಯಾಗಾರಗಳು, ಪ್ರಮಾಣಪತ್ರ ಕೋರ್ಸ್‌ಗಳು ಮತ್ತು ಅಂತಾರಾಷ್ಟ್ರೀಯ ವೇದಿಕೆ ಅವಕಾಶಗಳ ಮೂಲಕ ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಿಬ್ಬಂದಿಗಳ ಸಾಮರ್ಥ್ಯ ವೃದ್ಧಿಗೆ ಅನುವು ಮಾಡಿಕೊಡಲಾಗುವುದು.
ಜೊತೆಗೆ, ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲು ಉತ್ತಮ ಮಾನಿಟರಿಂಗ್ ವ್ಯವಸ್ಥೆ, ವರದಿ ಒದಗಿಸುವಿಕೆ ಮತ್ತು ಉತ್ತಮ ಪರಿಶೀಲನಾ ವ್ಯವಸ್ಥೆಯನ್ನು ರೂಪಿಸಲಾಗುವುದು.
2022ರಿಂದ ಸಹಭಾಗಿತ್ವ ಆರಂಭಿಸಿದಾಗಿನಿಂದಲೂ ಇನ್ಫೋಸಿಸ್ ಫೌಂಡೇಷನ್ ಮತ್ತು ಗೋಸ್ಪೋರ್ಟ್ಸ್ ಫೌಂಡೇಷನ್ ಸಂಸ್ಥೆಗಳು ಲಕ್ಷ್ಯ ಶೂಟಿಂಗ್ ಕ್ಲಬ್, ಮೇರಿ ಕೋಮ್ ರೀಜನಲ್ ಬಾಕ್ಸಿಂಗ್ ಫೌಂಡೇಷನ್, ರಮಣ್ ಟಿಟಿ ಹೈ ಪರ್ಫಾರ್ಮೆನ್ಸ್ ಸೆಂಟರ್, ಸತೀಶ್ ಶಿವಲಿಂಗಂ ಸ್ಪೋರ್ಟ್ಸ್ ಫೌಂಡೇಷನ್ (ವೇಯ್ಟ್ ಲಿಫ್ಟಿಂಗ್) ಮತ್ತು ಯಾದವ್ ಪ್ರೊ ಬ್ಯಾಡ್ಮಿಂಟನ್ ಅಕಾಡೆಮಿ ಸೇರಿದಂತೆ ಭಾರತದ ವಿವಿಧ ಭಾಗಗಳ ಐದು ಅಕಾಡೆಮಿಗಳಿಗೆ ಬೆಂಬಲ ನೀಡಿವೆ.
ಈ ವರ್ಷದಿಂದ ‘ಗೇರ್ ಫಾರ್ ಗೋಲ್ಡ್’ ಯೋಜನೆ ಭಾಗವಾಗಿ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್, ಕರ್ಣಂ ಮಲ್ಲೇಶ್ವರಿ ಫೌಂಡೇಷನ್ (ವೇಯ್ಟ್ ಲಿಫ್ಟಿಂಗ್) ಮತ್ತು ಮಲಿಕ್ ಬ್ಯಾಡ್ಮಿಂಟನ್ ಅಕಾಡೆಮಿ ಎಂಬ ಮೂರು ಹೊಸ ಅಕಾಡೆಮಿಗಳಿಗೆ ಬೆಂಬಲ ನೀಡಲಿದೆ. ಈ ಅಕಾಡೆಮಿಗಳ ತರಬೇತುದಾರರಿಗೆ ಮತ್ತು ಟೆಕ್ನಿಕಲ್/ ನಾನ್ ಟೆಕ್ನಿಕಲ್ ಸಿಬ್ಬಂದಿಗೆ ನಿರಂತರ ಬೆಂಬಲ, ಮೂಲಸೌಕರ್ಯ ಅಬಿವೃದ್ಧಿ ಮತ್ತು ಆಧುನಿಕ ಕ್ರೀಡಾ ವಿಜ್ಞಾನ ಅಳವಡಿಕೆ ಮುಂತಾದ ಸೌಲಭ್ಯ ಒದಗಿಸಲಾಗುತ್ತಿದ್ದು, ಈ ವಿಧಾನದಿಂದ ಯುವ ಕ್ರೀಡಾಪಟುಗಳು 15 ಅಂತಾರಾಷ್ಟ್ರೀಯ ಮತ್ತು 58 ರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ.
ಗಮನಾರ್ಹ ಸಾಧನೆ ಮಾಡಿದ ಕೆಲವು ಕ್ರೀಡಾಪಟುಗಳು:
ಓಜಸ್ವಿ ಠಾಕೂರ್: ನವದೆಹಲಿಯಲ್ಲಿ ನಡೆದ 2025ರ ಐಎಸ್ಎಸ್ಎಫ್ ಜೂನಿಯರ್ ವರ್ಲ್ಡ್ ಕಪ್ ನಲ್ಲಿ ಚಿನ್ನ ಮತ್ತು ಜರ್ಮನಿಯ ಸುಹ್ಲ್ ನಲ್ಲಿ ನಡೆದ 2025ರ ಐಎಸ್ಎಸ್ಎಫ್ ಜೂನಿಯರ್ ವರ್ಲ್ಡ್ ಕಪ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. (ಶೂಟಿಂಗ್)
ಇಶಾ ತಕ್ಸಲೆ: ನವದೆಹಲಿಯಲ್ಲಿ ನಡೆದ 2025 ಐಎಸ್ಎಸ್ಎಫ್ ಜೂನಿಯರ್ ವರ್ಲ್ಡ್ ಕಪ್ ನಲ್ಲಿ ಚಿನ್ನ (10ಮೀ ಏರ್ ರೈಫಲ್ ಮಿಕ್ಸ್ಡ್ ಟೀಮ್ ಜೂನಿಯರ್ ಕೆಟಗರಿ) ಮತ್ತು ಸ್ಪೇನ್ ನ ಗ್ರೆನೆಡಾದಲ್ಲಿ ನಡೆದ 2024ರ ಐಎಸ್ಎಸ್ಎಫ್ ಜೂನಿಯರ್ ವರ್ಲ್ಡ್ ಕಪ್ ನಲ್ಲಿ ಚಿನ್ನ ಗಳಿಸಿದ್ದಾರೆ (10ಮೀ ಏರ್ ರೈಫಲ್ ವುಮೆನ್ ಜೂನಿಯರ್ ಕೆಟಗರಿ)
ಅಹೋನಾ ರೇ: ಎರಡು ಡಬ್ಲ್ಯೂಟಿಟಿ ಯೂತ್ ಕಂಟೆಂಡರ್ ಇಂಟರ್ ನ್ಯಾಷನಲ್ ಟೇಬಲ್ ಟೆನಿಸ್ ಸ್ಪರ್ಧೆಗಳಲ್ಲಿ (ಬರ್ಲಿನ್ ಮತ್ತು ಹೆಲ್ಸಿಂಗ್‌ಬೋರ್ಗ್) ಚಿನ್ನ ಮತ್ತು ಕಂಚಿನ ಪದಕ. (ಅಂಡರ್ 13 ಹುಡುಗಿಯರ ಸಿಂಗಲ್ಸ್ ವಿಭಾಗ)
ಹಿತೈಶ್ರೀ ಎಲ್ ರಾಜಯ್ಯ: 2025ರ ಆಲ್ ಇಂಡಿಯಾ ಸಬ್-ಜೂನಿಯರ್ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬೆಳ್ಳಿ (ಹುಡುಗಿಯರ ಸಿಂಗಲ್ಸ್)
ಅಂಜಲಿ ಪಿವಿ: ಖೇಲೋ ಇಂಡಿಯಾ ಯೂತ್ ಗೇಮ್ಸ್‌ ನ 4x100 ರಿಲೇಯಲ್ಲಿ ಕಂಚು ಮತ್ತು ಲಾಂಗ್ ಜಂಪ್‌ನಲ್ಲಿ ಆರನೇ ಸ್ಥಾನ
ಈ ಸಂದರ್ಭದಲ್ಲಿ ಮಾತನಾಡಿದ ಇನ್ಫೋಸಿಸ್ ಫೌಂಡೇಷನ್ ನ ಟ್ರಸ್ಟಿ ಸುಮೀತ್ ವಿರ್ಮಾನಿ ಅವರು, “ಗೋಸ್ಪೋರ್ಟ್ಸ್ ಫೌಂಡೇಷನ್‌ ಜೊತೆಗಿನ ನಮ್ಮ ಸಹಯೋಗವು ಭಾರತದ ಯುವ ಪ್ರತಿಭಾವಂತ ಕ್ರೀಡಾಪಟುಗಳಿಗೆ ನೆರವು ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ‘ಗೇರ್ ಫಾರ್ ಗೋಲ್ಡ್’ ಯೋಜನೆ ಮೂಲಕ ಇನ್ಫೋಸಿಸ್ ಫೌಂಡೇಷನ್ ಕ್ರೀಡಾಪಟುಗಳ ಸಮಗ್ರ ಬೆಳವಣಿಗೆಗೆ ನೆರವು ನೀಡಲು ಬದ್ಧವಾಗಿದೆ. ವಿದ್ಯಾರ್ಥಿವೇತನ, ಉನ್ನತ ತರಬೇತಿ ಮತ್ತು ವಿಶ್ವದರ್ಜೆಯ ತರಬೇತಿ ಮೂಲಸೌಕರ್ಯದ ಮೂಲಕ ಕ್ರೀಡಾ ವ್ಯವಸ್ಥೆಯನ್ನು ಬೆಳೆಸುವ ನಮ್ಮ ದೊಡ್ಡ ಉದ್ದೇಶದ ಭಾಗವಾಗಿ ಈ ಯೋಜನೆ ಮೂಡಿಬಂದಿದೆ” ಎಂದು ಹೇಳಿದರು.
ಗೋಸ್ಪೋರ್ಟ್ಸ್ ಫೌಂಡೇಷನ್ ನ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ಟ್ರಸ್ಟಿ ನಂದನ್ ಕಾಮತ್ ಅವರು ಮಾತನಾಡಿ, “ಈ ಸಹಯೋಗವನ್ನು ವಿಸ್ತರಿಸಿರುವುದು ಕ್ರೀಡಾ ಪ್ರತಿಭೆಗಳನ್ನು ಬೆಳೆಸುವ ಕಾರ್ಯದಲ್ಲಿ ಮಹತ್ವದ ಹೆಜ್ಜೆಯಾಗಿದೆ. ‘ಗೇರ್ ಫಾರ್ ಗೋಲ್ಡ್’ ಯೋಜನೆಯು ದೇಶದಾದ್ಯಂತ ಇರುವ ಉತ್ತಮ ಪ್ರತಿಭೆಗಳನ್ನು ಹುಡುಕಿ, ಅವರಿಗೆ ಸೂಕ್ತವಾದ, ಕ್ರೀಡಾ ವಿಜ್ಞಾನ ಆಧಾರಿತ ವಾತಾವರಣದಲ್ಲಿ ಉತ್ತಮ ತರಬೇತಿ ನೀಡಲು ಮತ್ತು ಅವರು ಉತ್ತಮ ಸಾಧನೆ ಮಾಡಲು ನೆರವಾಗಲು ನಮಗೆ ಅವಕಾಶ ನೀಡುತ್ತದೆ. ಇನ್ಫೋಸಿಸ್ ಫೌಂಡೇಷನ್ ಜೊತೆಗೂಡಿ ಭಾರತೀಯ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡುವುದು ನಮಗೆ ಗೌರವದ ಸಂಗತಿಯಾಗಿದೆ” ಎಂದರು.