Sports help improve health 
ರಾಜ್ಯ

ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ

ತಿಪಟೂರು: ಓದಿನ ಜತೆಗೆ ಕ್ರೀಡೆ ನಿಮ್ಮ ಜೀವನದಲ್ಲಿ ಬಹಳ ಶಿಸ್ತು, ಸಂಯಮ ಹಾಗೂ ಆರೋಗ್ಯವನ್ನು ಕಾಪಾಡುತ್ತದೆ ಎಂದು ಮಧ್ಯಪ್ರದೇಶದ ಖಾಂಡವಾ ಜಿಪಂ ಸಿಇಒ ಡಾ. ನಾಗಾರ್ಜುನ್ ಬಿ. ಗೌಡ ಹೇಳಿದರು.
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಟಿಯು ಸಹಯೋಗದೊಂದಿಗೆ ನಾಲ್ಕು ದಿನಗಳ ಕಾಲ ಆಯೋಜಿಸಿದ್ದ 27ನೇ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದ ಸಮಾರೋಪ ಮತ್ತು ಬಹುವಾನ ವಿತರಣಾ ಕಾರ್ಯಕ್ರಮದಲ್ಲಿ ವಾತನಾಡಿ, ಇಂದಿನ ನನ್ನ ಸ್ಥಾನವಾನಕ್ಕೆ ಕ್ರೀಡೆಯೇ ಸಹಕಾರಿಯಾಗಿದೆ. ಇದೇ ಸಂಸ್ಥೆಯಲ್ಲಿ ಓದಿ, ಬೆಳೆದ ನಾನು ಈ ಹಿಂದೆ ರಾಷ್ಟ್ರಮಟ್ಟದ ಖೋಖೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಲು ತುಂಬಾ ಹೆಮ್ಮೆಯಾಗುತ್ತದೆ. ಕಲ್ಪತರು ವಿದ್ಯಾಸಂಸ್ಥೆಯ ಎಲ್ಲ ಆಡಳಿತ ವರ್ಗದ ಸದಸ್ಯರು ನನ್ನ ಕುಟುಂಬವಿದ್ದಂತೆ ಎಂದರು.
ವಿಟಿಯು ದೈಹಿಕ ಶಿಕ್ಷಣ ನಿರ್ದೇಶಕ ಡಾ.ವೈ.ಎಚ್.ರಾಜೇಶ್ ಅವರು ಕ್ರೀಡಾಕೂಟದ ಸಂಕ್ಷಿಪ್ತ ವರದಿ ವಾಚಿಸಿ, ಕ್ರೀಡಾಕೂಟದಲ್ಲಿ 1236 ಪುರುಷ, 630 ಮಹಿಳಾ ಕ್ರೀಡಾಪಟುಗಳು ಸೇರಿ 1875 ಕ್ರೀಡಾಪಟುಗಳು ಭಾಗವಹಿಸಿ ಇತಿಹಾಸ ನಿರ್ಮಿಸಿದ್ದಾರೆ ಎಂದರು. ಇದೇ ವೇಳೆ ವಿಜೇತರ ಹೆಸರುಗಳನ್ನು ಪ್ರಕಟಿಸಿ ಬಹುವಾನ ವಿತರಿಸಿದರು.
ಕ್ರೀಡಾಕೂಟದಲ್ಲಿ ವೈದ್ಯರಾದ ಡಾ.ಶ್ರೀಧರ್, ಡಾ.ವಿವೇಚನಾ ಅವರು ಕ್ರೀಡಾಪಟುಗಳಿಗೆ ಅಗತ್ಯ ಚಿಕಿತ್ಸೆ ನೀಡಿ ತಮ್ಮ ಸಾರ್ಥಕ ಸೇವೆಗೆ ಸಾಕ್ಷಿಯಾದರು. ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಜಿ.ಎಸ್.ಉವಾಶಂಕರ್, ಆರ್.ಎಂ.ಸಂಗಮೇಶ್, ಟಿ.ಯು.ಜಗದೀಶಮೂರ್ತಿ, ಎಚ್.ಜಿ.ಸುಧಾಕರ್, ರಾಷ್ಟ್ರೀಯ ಕ್ರೀಡಾಪಟು ಮತ್ತು ಖಜಾಂಚಿ ಟಿ.ಎಸ್.ಶಿವಪ್ರಸಾದ್, ಕೆಐಟಿ ಪ್ರಾಂಶುಪಾಲ ಡಾ.ಎಚ್.ಸಿ.ಸತೀಶ್‌ಕುವಾರ್, ಕೆಐಟಿ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಸ್.ಜಯಂತ್ ಇತರರು ಇದ್ದರು.