ವೀರಾಜಪೇಟೆಯಲ್ಲಿ ನಡೆದ ಕ್ರಿಶ್ಚಿಯನ್ ಕಪ್ ಸೀಸನ್-1 ಪ್ರಯುಕ್ತ ಜಿಲ್ಲಾ ಮಟ್ಟದ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಗೆ ರೆ.ಫಾ ಜೇಮ್ಸ್ ಡೊಮಿನಿಕ್ ಚಾಲನೆ ನೀಡಿದರು. ರೆ.ಫಾ ಮದಲೈ ಮುತ್ತು, ಲೀಲಾ ಮ್ಯಾಥ್ಯೂ, ಅನಿತಾ ಶಾಮ್, ಸಿಸ್ಟರ್ ರೋಸಿ ಡೈಸಾ, ಸಿಸ್ಟರ್ ವಂದನಾ ಲೋಬೋ, ಶಿನಿ ಇದ್ದರು. 
ರಾಜ್ಯ

ಪ್ರತಿಭಾ ಪ್ರದರ್ಶನಕ್ಕೆ ಕ್ರೀಡಾಕೂಟಗಳು ವೇದಿಕೆ

ವಿರಾಜಪೇಟೆ: ಪ್ರತಿಭಾ ಪ್ರದರ್ಶನಕ್ಕೆ ಕ್ರೀಡಾಕೂಟಗಳು ವೇದಿಕೆಗಳಾಗಿವೆ ಎಂದು ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್‌ನ ಪ್ರಧಾನ ಗುರುಗಳು ಹಾಗೂ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಜೇಮ್ಸ್ ಡೊಮಿನಿಕ್ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್‌ನ ಮಹಿಳಾ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇದೇ ಪ್ರಥಮ ಬಾರಿಗೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ಇತ್ತೀಚೆಗೆ ಕ್ರಿಶ್ಚಿಯನ್ ಕಪ್ ಸೀಸನ್-1 ಪ್ರಯುಕ್ತ ಜಿಲ್ಲಾ ಮಟ್ಟದ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ನಮ್ಮ ಧರ್ಮ ಕೇಂದ್ರದ ವತಿಯಿಂದ ಇದೇ ಪ್ರಥಮ ಬಾರಿಗೆ ಮಹಿಳೆಯರ ಥ್ರೋ ಬಾಲ್ ಪಂದ್ಯಾವಳಿಯನ್ನು ಮಹಿಳೆಯರೇ ಆಯೋಜಿಸಿದ್ದು ಗಮನಾರ್ಹವಾಗಿದೆ. ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಹೊರ ಹೊಮ್ಮಿಸಲು ಇಂತಹ ಕ್ರೀಡಾಕೂಟಗಳ ಅಗತ್ಯವಿದೆ ಎಂದು ಹೇಳಿದರು.
ಅಮ್ಮತ್ತಿಯ ಸಂತ ಅಂತೋಣಿ ಚರ್ಚ್‌ನ ಗುರುಗಳು ಹಾಗೂ ಸಂತ ಅನ್ನಮ್ಮ ಪಿಯು ಕಾಲೇಜಿನ ಪ್ರಾಂಶುಪಾಲ ರೆ. ಫಾ. ಮದಲೈಮುತ್ತು ಮಾತನಾಡಿ. ಮಹಿಳೆಯರೇ ಒಂದು ಕ್ಲಬ್ ಅನ್ನು ರಚಿಸಿ ಮೊದಲ ಬಾರಿಗೆ ಮಹಿಳಾ ಕ್ರೀಡಾಕೂಟವನ್ನು ಇಂದು ಇಲ್ಲಿ ಆಯೋಜಿಸಿರುವುದು ವಿಶೇಷವಾಗಿದೆ. ಈ ಮಹಿಳಾ ಕ್ಲಬ್ ಮತ್ತಷ್ಟು ಕಾರ್ಯಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಮಾಡಲಿ ಎಂದು ಶುಭ ಕೋರಿದರು. ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲೆ ಮಾಳೆಟೀರ ತೃಪ್ತಿ ಬೋಪಣ, ಕಾಂಗ್ರೆಸ್ ಸೇವಾದಳದ ರಾಜ್ಯ ಜಂಟಿ ಕಾರ್ಯದರ್ಶಿ ತೆರೆಸಾ ವಿಕ್ಟರ್ ಮಾತನಾಡಿದರು. ಪ.ಪಂ. ಮಾಜಿ ಅಧ್ಯಕ್ಷೆ ಮರಿಯಾ ಸಿಕ್ವೇರಾ ಮಹಿಳಾ ಸ್ಪೋರ್ಟ್ಸ್ ಕ್ಲಬ್ ಅನ್ನು ಉದ್ಘಾಟಿಸಿದರು.
ವಿರಾಜಪೇಟೆ ಮಹಿಳಾ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷೆ ಲೀಲಾ ಮ್ಯಾಥ್ಯೂ, ಉಪಾಧ್ಯಕ್ಷೆ ಅನಿತಾ ಶಾಮ್, ಸಂತ ಅನ್ನಮ್ಮ ಶಾಲೆಯ ಮುಖ್ಯ ಶಿಕ್ಷಕಿಯರಾದ ಸಿಸ್ಟರ್ ರೋಸಿ ಡೈಸಾ, ಸಿಸ್ಟರ್ ವಂದನಾ ಲೋಬೋ, ಶಿನಿ ಲೇಡೀಸ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರು, ಧರ್ಮ ಕೇಂದ್ರದವರು, ಆಟಗಾರರು ಉಪಸ್ಥಿತರಿದ್ದರು.