ಸೇಡಂನಲ್ಲಿ ಸರ್ಕಾರಿ ನೌಕರರ ಸ್ನೇಹ ಬಳಗದಿಂದ ಆಯೋಜಿಸಿದ್ದ ಬ್ಯಾಡ್ಮಿಂಟನ್ ಟೂರ್ನಿಗೆ ಚಾಲನೆ ನೀಡಿ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್ ಊಡಗಿ ಮಾತನಾಡಿದರು. ಸಂಗಮನಾಥ ಹಿರೇಮಠ, ಮಹಾದೇವ ದಿಡ್ಡಿಮನಿ, ಮಾರುತಿ ಹುಜರತಿ ಇದ್ದರು.
- ಬಸವರಾಜ ಪಾಟೀಲ್ ಊಡಗಿ ಅನಿಸಿಕೆ
- ಸರ್ಕಾರಿ ನೌಕರರಿಗಾಗಿ ಬ್ಯಾಡ್ಮಿಂಟನ್ ಟೂರ್ನಿ
ಸೇಡಂ: ಇಂದು ಮಾನವನ ನಿತ್ಯದ ಜೀವನ ಬಹುತೇಕ ಒತ್ತಡದಿಂದ ಕೂಡಿದ್ದು, ಸಮಯ ಸಿಕ್ಕಾಗ ಕ್ರೀಡೆಗಳಲ್ಲಿ ಭಾಗವಹಿಸಿದರೆ ಆರೋಗ್ಯಯುತ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್ ಊಡಗಿ ಹೇಳಿದರು.
ಒಳ ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರ ಸ್ನೇಹ ಬಳಗದಿಂದ ನೌಕರರಿಗಾಗಿ ಭಾನುವಾರ ಆಯೋಜಿಸಿದ್ದ ಬ್ಯಾಡ್ಮಿಂಟನ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿ, ಸಮಯ ಸಿಕ್ಕಾಗ ಕ್ರೀಡಾಕೂಟದಲ್ಲಿ ಭಾಗವಹಿಸುವ ಕೆಲಸ ಮಾಡಬೇಕು. ಇತ್ತೀಚಿನ ಬೆಳವಣಿಗೆ ಗಮನಿಸಿದಾಗ ಮನುಷ್ಯ ಮೊಬೈಲ್ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾನೆ. ಆದರೆ ನಮ್ಮ ಜೀವನಕ್ಕೆ ಅದು ಹಾನಿಕಾರಕ ಎನ್ನುವ ಅರಿವು ನಮಗಿರಬೇಕು. ವಾರಕ್ಕೊಮ್ಮೆಯಾದರು ದೈಹಿಕ ಕಸರತ್ತಿನ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಡಿವೈಎಸ್ಪಿ ಸಂಗಮನಾಥ ಹಿರೇಮಠ ಮಾತನಾಡಿ, ಬೇರೆ ತಾಲೂಕುಗಳನ್ನು ಗಮನಿಸಿದಾಗ ಇಲ್ಲಿ ಉತ್ತಮವಾದ ಕ್ರೀಡಾಂಗಣವಿದೆ. ಇದರಿಂದಾಗಿ ಸೇಡಂ ಜನತೆಗೆ ಆಟೋಟಗಳನ್ನು ಆಯೋಜಿಸಲು ಅನುಕೂಲವಾಗಲಿದೆ. ಇಂತಹ ಚಟುವಟಿಕೆ ನಿರಂತರ ನಡೆಯಬೇಕು ಎಂದರು.
ತಾಪಂ ಇಒ ಮಹ್ಮದ ಸೈಯದ್ ಪಟೇಲ್, ಸಿಪಿಐ ಮಹಾದೇವ ದಿಡ್ಡಿಮನಿ, ಬಿಇಒ ಮಾರುತಿ ಹುಜರತಿ, ತಾಪಂ ಮಾಜಿ ಸದಸ್ಯ ಜೈಭೀಮ ಊಡಗಿ, ಪುರಸಭೆ ಮಾಜಿ ಉಪಾಧ್ಯಕ್ಷ ಜಗನ್ನಾಥ ಚಿಂತಪಳ್ಳಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಉಮಾಪತಿರಾಜು, ಶಿಕ್ಷಣಾಧಿಕಾರಿಗಳ ಸಂದ ತಾಲೂಕು ಅಧ್ಯಕ್ಷ ಅಶೋಕರೆಡ್ಡಿ ಚಿಲುಮೆ, ಪ್ರಾಥಮಿಕ ಶಾಲಾ ಮುಖ್ಯಗುರುಗಳ ಸಂದ ತಾಲೂಕು ಅಧ್ಯಕ್ಷ ಉಮಾಕಾಂತ ರಾಂಪೂರ, ಪ್ರಮುಖರಾದ ಬಂಡೆಪ್ಪ ಪೂಜಾರಿ, ಅಂಬರೀಶ ಸಂಗಾವಿ, ನದೀಮ ಪಟೇಲ್, ಶರಣಪ್ಪ ಕಾಳರ್, ರಾಜಶೇಖರ ರುದ್ನೂರ, ಹಣಮಂತ ಮೇತ್ರೆ, ದೇವಿಂದ್ರ ದಿಗ್ಗಾಂವ್, ಕೇಶವರೆಡ್ಡಿ ಇತರರಿದ್ದರು.
ಶಿಕ್ಷಕರಾದ ಶಿವಲಿಂಗಪ್ಪ ಹಾದಿಮನಿ ಸ್ವಾಗತಿಸಿದರು. ದೇವರಾಜ ಕೋರಿ ನಿರೂಪಣೆ ಮಾಡಿದರು. ರವಿರಾಜ್ ಅವಂಟಿ ವಂದಿಸಿದರು. ಒಟ್ಟು 22ತಂಡಗಳು ಭಾಗವಹಿಸಿದ್ದವು. ಪೊಲೀಸ್ ತಂಡ ಪ್ರಥಮ ಸ್ಥಾನ, ಶಿಕ್ಷಣ ಇಲಾಖೆ ನೌಕರರು ದ್ವೀತಿಯ, ಅರಣ್ಯ ಇಲಾಖೆಯ ನೌಕರರು ತೃತೀಯ ಸ್ಥಾನ ಪಡೆದರು.