High court 
ರಾಜ್ಯ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗ ಅಪರಾಧವಲ್ಲ| High court

ಪ್ರಮುಖ ಮುಖ್ಯಾಂಶಗಳು

  • ನಿಗದಿತ ಮಿತಿ ದಾಟಿದರೆ ಮಾತ್ರ ನಿರ್ಲಕ್ಷ್ಯದ ಚಾಲನೆ
  • ಅಪಘಾತ ಪ್ರಕರಣದಲ್ಲಿ ಚಾಲಕನ ಖುಲಾಸೆಗೊಳಿಸಿದ ಹೈಕೋರ್ಟ್​
ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತಿವೇಗವಾಗಿ ವಾಹನ ಚಾಲನೆ ಮಾಡುವುದನ್ನು ಅಪರಾಧ ಅಥವಾ ನಿರ್ಲಕ್ಷ್ಯದ ಚಾಲನೆ ಎಂದು ನೇರವವಾಗಿ ಪರಿಗಣಿಸಲು ಸಾಧ್ಯವಿಲ್ಲ. ಸುರಕ್ಷತಾ ಮಿತಿಯನ್ನು ಮೀರಿ ವಾಹನ ಚಲಾಯಿಸಲಾಗಿದೆ ಎಂಬುದನ್ನು ಪ್ರಾಸಿಕ್ಯೂಷನ್​ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಸಾಬೀತುಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್​, ಅಪಘಾತ ಪ್ರಕರಣವೊಂದರಲ್ಲಿ ಕಾರು ಚಾಲಕರೊಬ್ಬರಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿದೆ.
2013ರ ಫೆ.10ರಂದು ಬೆಂಗಳೂರು-ಮೈಸೂರು ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದರು. ಪಶ್ಚಿಮ ಬಂಗಾಳ ಮೂಲದ ಪ್ರಯಾಣಿಕರಿದ್ದ ಟಾಟಾ ಸುಮೋ ಕಾರು ಹೊಸೂರು ಗೇಟ್​ ಬಳಿ ಡಿವೈಡರ್​ಗೆ ತಾಕಿ, ಕೆಎಸ್​ಆರ್​ಟಿಸಿ ಬಸ್​ಗೆ ಡಿಕ್ಕಿಯಾಗಿತ್ತು. ಈ ಪ್ರಕರಣದಲ್ಲಿ ಟಾಟಾ ಸುಮೋ ಚಾಲಕ ಮಹೇಶ್​ ಎಂಬವರ ವಿರುದ್ಧ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತಕ್ಕೆ ಕಾರಣವಾದ ಬಗ್ಗೆ ಬಸ್​ ಚಾಲಕನ ದೂರು ಆಧರಿಸಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ ಕಾರು ಚಾಲಕನ್ನು ದೋಷಿ ಎಂದು ತೀರ್ಪು ನೀಡಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್​. ವಿಶ್ವಜಿತ್​ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆರೊಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. 
ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರು ಸೇರಿ ಪ್ರತ್ಯಕ್ಷದರ್ಶಿಗಳು ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡುತ್ತಿದ್ದ ಬಗ್ಗೆ ದೂರಿಲ್ಲ. ವಾಹನವು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ಕೇವಲ ಅದು ಅತಿವೇಗದಲ್ಲಿದೆ ಎಂಬ ಕಾರಣಕ್ಕೆ ಅದು ನಿರ್ಲಕ್ಷ್ಯದ ಚಾಲನೆ ಎಂದು ಹೇಳಲಾಗದು. ಅದು ಸುರಕ್ಷತಾ ಮಿತಿಯನ್ನು ಮೀರಿ ಅಪಘಾತಕ್ಕೆ ಕಾರಣವಾಗಿದೆ ಎಂಬುದನ್ನು ಪ್ರಾಸಿಕ್ಯೂಷನ್​ ಸಾಬೀತುಪಡಿಸಿಲ್ಲ. ಕಾರಿನ ಹಿಂಬದಿಯ ಚಕ್ರವು ಸ್ಪೋಟಗೊಂಡ ಕಾರಣ ಚಾಲಕ ನಿಯಂತ್ರಣ ಕಳೆದುಕೊಂದಿದ್ದಾನೆ ಎಂಬ ವಾದವನ್ನು ತಳ್ಳಿಹಾಕಲು ಸಾದ್ಯವಿಲ್ಲ ಎಂದು ನ್ಯಾಯಪೀಠ ಸಾಕ್ಷಿಗಳನ್ನು ಪರಿಶೀಲಿಸಿ ಆದೇಶ ನೀಡಿದೆ.