- * ತಾಯಿ ಮತ್ತು ಮಗುವಿನ ಆರೋಗ್ಯ ಸೇವೆಗಳ ಬಲರ್ವಧನೆ ಕ್ರಮ
ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಸೇವೆಗಳ ಬಲರ್ವಧನೆ ಹಾಗೂ ತಜ್ಞ ವೈದ್ಯರ ನಿರಂತರ ಲಭ್ಯತೆ ಸಂಬಂಧ ಆರೋಗ್ಯ ಇಲಾಖೆಯು ತಜ್ಞ ವೈದ್ಯರು ತಾವು ಕಾರ್ಯನಿರ್ವಹಿಸುವ ಕೇಂದ್ರ ಸ್ಥಾನದಲ್ಲಿಯೇ ಕಡ್ಡಾಯವಾಗಿ ಕಾರ್ಯ ವಾಸಿಸಬೇಕು ಎಂದು ಆದೇಶಿಸಿದೆ.
ತುರ್ತು, ತಾಯಂದಿರ ಹಾಗೂ ನವಜಾತ ಶಿಶುಗಳ ಸೇವೆಗೆ 24 ಗಂಟೆಗಳೂ ಲಭ್ಯತೆಯನ್ನು ಖಚಿತಪಡಿಸಬೇಕು. ಇದಕ್ಕಾಗಿ ತಜ್ಞ ವೈದ್ಯರು ದೂರದ ಸ್ಥಳಗಳಿಂದ ಸಂಚಾರ ಮಾಡಬಾರದು. ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ ಮೂಲಕ ಪ್ರತಿನಿತ್ಯ ಬೆಳಿಗ್ಗೆ ಮತ್ತು ರಾತ್ರಿ ಕೇಂದ್ರ ಸ್ಥಾನದಿಂದ ಹಾಜರಾತಿ ಹಾಕಬೇಕು. ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬರು ಸ್ತ್ರೀರೋಗ ತಜ್ಞರು ಮಾತ್ರ ಕಾರ್ಯನಿರ್ವಹಿಸುತ್ತಿದ್ದರೆ, ಅವರನ್ನು ಬೇರೆಡೆಗೆ ನಡೆಯುವ ಉದರ ದರ್ಶಕ (ಟ್ಯುಬೆಕ್ಟಮಿ) ಶಿಬಿರಗಳಿಗ ನಿಯೋಜಿಸಬಾರದು ಎಂದು ಸೂಚಿಸಿದೆ.
ಪ್ರಸವ ಸೇವೆ ನೀಡುವ ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಅಗತ್ಯವಿರುವ ರಕ್ತ ಹಾಗೂ ಅದರ ಉತ್ಪನ್ನಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ತುರ್ತು ಕರ್ತವ್ಯದಲ್ಲಿರುವ ಎಲ್ಲ ತಜ್ಞ ವೈದ್ಯರು ತಮ್ಮ ಕರ್ತವ್ಯದ ಅವಧಿಯಲ್ಲಿ ಪ್ರಸವ ಕೊಠಡಿ ಮತ್ತು ಬಾಣಂತಿ ವಾರ್ಡ್‌ಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಯಾವುದೇ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರ ಹುದ್ದೆ ಖಾಲಿ ಇದ್ದಲ್ಲಿ ಕರ್ತವ್ಯದಲ್ಲಿರುವ ವೈದ್ಯರು, ಸಂಬಂಧಿತ ಜಿಲ್ಲಾ ಆಸ್ಪತ್ರೆ ಅಥವಾ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರತ ಸ್ತ್ರೀರೋಗ ತಜ್ಞರೊಂದಿಗೆ ತಕ್ಷಣ ಸಂಪರ್ಕಿಸಿ ತಜ್ಞರ ಸಲಹೆ ಪಡೆಯಬೇಕು ಎಂದು ತಿಳಿಸಿದೆ.