ನೆಲಮಂಗಲದ ವೀರಾಂಜನೇಯಸ್ವಾಮಿ ದೇವಾಲಯಕ್ಕೆ ಶಾಸಕ ಎನ್​.ಶ್ರೀನಿವಾಸ್​ ಭೇಟಿ ನೀಡಿ ದರ್ಶನ ಪಡೆದರು. 
ರಾಜ್ಯ

ಶ್ರೀರಾಮ, ಹನುಮನ ದೇಗುಲದಲ್ಲಿ ವಿಶೇಷ ಪೂಜೆ / NELAMANGAL

ನೆಲಮಂಗಲ : ಹನುಮ ವ್ರತಾಚರಣೆ ಪ್ರಯುಕ್ತ ತಾಲೂಕಿನಾದ್ಯಂತ ಶ್ರೀರಾಮ, ಹನುಮನ ದೇಗುಲದಲ್ಲಿ ವಿಶೇಷ ಪೂಜೆ ನಡೆದವು. ಆಂಜನೇಯಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹಾಗಣಪತಿ ಪೂಜೆ, ಅಭಿಷೇಕ, ವಿಶೇಷ ಅಲಂಕಾರ, ಗಣಹೋಮ, ರಾಮತಾರಕ ಹೋಮ, ಪ್ರಧಾನ ಹೋಮ ಹಾಗೂ ವಿವಿಧ ಹೋಮ ಮತ್ತು ಪೂರ್ಣಾಹುತಿ ನೆರವೇರಿಸಲಾಯಿತು.
ನಗರದ ಅಡೇಪೇಟೆಯ ಉತ್ತರಘಟ್ಟ ಆಂಜನೇಯ, ಹಿಪ್ಪೆ ಆಂಜನೇಯ, ತಿಮ್ಮಶೆಟ್ಟಪ್ಪ ಬಡಾವಣೆ, ಚನ್ನಪ್ಪಬಡಾವಣೆ ಶ್ರೀ ರಾಮಾಂಜನೇಯ, ಬಸವನಹಳ್ಳಿ, ಬೈರಶೆಟ್ಟಿಹಳ್ಳಿಯ ಬೈಲಾಂಜನೇಯಸ್ವಾಮಿ ಸೇರಿ ಹಲವು ಕಡೆ ರಾಮಧೂನನ ಆರಾಧನೆ ನೆರವೇರಿತು.
ಬೆಳಗ್ಗೆಯಿಂದ ದೇವರ ದರ್ಶನಕ್ಕೆ ಜನರು ಸಾಲುಗಟ್ಟಿದ್ದರು. ದೇಗುಲವನ್ನು ಹೂಗಳಿಂದ ಅಲಂಕರಿಸಲಾಗಿತ್ತು. ದೇಗುಲದ ಹೊರಭಾಗ ಮತ್ತು ಒಳಭಾಗದಲ್ಲಿ ಮಾಡಿದ್ದ ಅಲಂಕಾರ ಗಮನ ಸೆಳೆಯಿತು. ನಗರದ ಉತ್ತರಘಟ್ಟ ಆಂಜನೇಯ ಸ್ವಾಮಿ ದೇಗುಲದಲ್ಲಿ ಹನುಮ ಜಯಂತಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯದ ಜತೆಗೆ ಉದ್ಯಮಿ ಮಂಜುನಾಥ್​ ಅವರ ಸಹಕಾರದೊಂದಿಗೆ 10 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಲಡ್ಡು ವಿತರಣೆ : ಹಿಪ್ಪೆ ಆಂಜನೇಯಸ್ವಾಮಿ ದೇವಾಲಯದಲ್ಲಿ ದೇವಾಲಯ ಸಮಿತಿ ಹಾಗೂ ನಗರಸಭೆ ಸದಸ್ಯ ಗಂಗಾಧರ್​ರಾವ್​ ಸಹಕಾರದಲ್ಲಿ 10 ಸಾವಿರಕ್ಕೂ ಹೆಚ್ಚು ಲಡ್ಡುಗಳನ್ನು ವಿತರಿಸಲಾಯಿತು. ಶಾಸಕ ಎನ್​.ಶ್ರೀನಿವಾಸ್​, ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಉಪಾಧ್ಯಕ್ಷ ಆನಂದ್​, ಸದಸ್ಯ ಸಿ.ಪ್ರದಿಪ್​, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ಹೇಮಂತ್​ಕುಮಾರ್​, ಉದ್ಯಮಿ ನಾಗೇಶ್​, ರವಿಕುಮಾರ್​ ಹಾಗೂ ವಿವಿಧ ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.