Special training for course selection
ಚಿಕ್ಕನಾಯಕನಹಳ್ಳಿ: ಇದೇ ಮೊದಲ ಬಾರಿಗೆ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಿಇಟಿಯಲ್ಲಿ ಪಡೆದ ರ್ಯಾಂಕ್ಗೆ ಯಾವ ಕಾಲೇಜಿನಲ್ಲಿ ಯಾವ ಕೋರ್ಸ್ ಆಯ್ಕೆ ಮಾಡಬೇಕು, ಎಷ್ಟು ಪರ್ಸೆಂಟ್ಗೆ ಎಲ್ಲಿ ಸರ್ಕಾರದ ಕೋಟಾದಡಿ ಸೀಟು ಸಿಗುತ್ತದೆ ಎಂಬುದರ ಬಗ್ಗೆ ವಿಶೇಷ ತರಬೇತಿ ಆಯೋಜಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ತೀನಂಶ್ರೀ ಭವನದಲ್ಲಿ ಎಸ್.ಬಿ.ಚಾರಿಟಬಲ್ ಟ್ರಸ್ಟ್ನ ಜ್ಞಾನಕಲ್ಪ ಕಾರ್ಯಕ್ರಮದಡಿಯಲ್ಲಿ ಶನಿವಾರ ಆಯೋಜಿಸಿದ್ದ ರ್ಯಾಂಕ್ ಟು ರೈಟ್ ಚಾಯ್ಸ್&ತಮ್ಮ ರ್ಯಾಂಕ್ಗೆ ಸರಿಯಾದ ಆಯ್ಕೆಯ ಮಾಹಿತಿ ಪ್ರಸರಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದೇ ಪ್ರಥಮ ಬಾರಿಗೆ ಈ ಕಾರ್ಯಗಾರವನ್ನು ಆಯೋಜಿಸಲಾಗಿದೆ. ರ್ಯಾಂಕ್ ಗಳಿಸಿರುವ ವಿದ್ಯಾರ್ಥಿಗಳಿಗೆ ಗೊಂದಲವಿದ್ದು, ಯಾವ ಕೋರ್ಸ್, ಯಾವ ಕಾಲೇಜಿನಲ್ಲಿ, ಯಾವ ರೀತಿ ಆಯ್ಕೆ ಮಾಡಬೇಕು. ನಾವು ತೆಗೆದುಕೊಂಡಿರುವ ರ್ಯಾಂಕ್ಗೆ ಅವಕಾಶಗಳು ಎಷ್ಟಿವೆ? ಕಾಲೇಜಿನಲ್ಲಿ ಕಟ್ಟುವಂತಹ ಶುಲ್ಕವೆಷ್ಟು? ಈ ಎಲ್ಲ ಮಾಹಿತಿಯನ್ನೊಳಗೊಂಡಂತೆ ಅನುಭವ ಇರುವ ಕೆಇಎಯ ಪ್ರಾಧ್ಯಾಪಕರೊಂದಿಗೆ ಚರ್ಚೆಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಈ ಬಾರಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಕೋರ್ಸ್ಗಳಿಗೆ ಹೋಗುತ್ತಾರೆ ಎಂಬ ಭರವಸೆ ಇದೆ. ಹಾಗಾಗಿ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕೆಇಎನ ಸಂಪನ್ಮೂಲ ಪ್ರಾಧ್ಯಾಪಕಿ ದಿವ್ಯಾಮೂರ್ತಿ ಮಾತನಾಡಿ, ಪ್ರತಿ ಬಾರಿ ಅನೇಕ ವಿದ್ಯಾರ್ಥಿಗಳು ಸರಿಯಾದ ಆಯ್ಕೆ ಮಾಡದೇ ಸರ್ಕಾರಿ ಸೀಟುಗಳಿಂದ ವಂಚಿತರಾಗುತ್ತಾರೆ. ಹಾಗಾಗಿ ಈ ರೀತಿಯ ಸಮಸ್ಯೆಗೆ ಶಾಸಕ ಸಿ.ಬಿ.ಸುರೇಶ್ಬಾಬು ಈ ರೀತಿಯಲ್ಲಿ ನಮ್ಮ ಮಕ್ಕಳಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಈ ಕಾರ್ಯಗಾರ ಆಯೋಜಿಸಿದ್ದಾರೆ ಎಂದರು.
ಬಿಇಒ ಕಾಂತರಾಜು ಮಾತನಾಡಿ, ಇದೇ ಪ್ರಥಮ ಬಾರಿಗೆ ಈ ರೀತಿಯ ಕಾರ್ಯಗಾರವನ್ನು ಆಯೋಜಿಸಿದ್ದು ಹೆಮ್ಮೆಪಡುವ ವಿಷಯ. ಬಹಳಷ್ಟು ನಮ್ಮ ವಿದ್ಯಾರ್ಥಿಗಳಿಗೆ ಕಾಲೇಜಿನ ಆಯ್ಕೆಯಲ್ಲಿ ತೊಂದರೆಯಾಗಿ ಅನೇಕರು ಸರಿಯಾದ ಕಾಲೇಜಿಗೆ ಸೇರುವುದೇ ಕಷ್ಟವಾಗುತ್ತದೆ. ಯಾವ ಕೋರ್ಸನ್ನು ನಮ್ಮ ಹಂತದಲ್ಲಿ ನಮ್ಮ ಆರ್ಥಿಕ ಮಟ್ಟದಲ್ಲಿ ಓದಬಹುದು ಎಂಬ ಬಗ್ಗೆಯೂ ಮಾಹಿತಿ ಪಡೆಯಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಜ್ಕುಮಾರ್, ಯೋಗಿಶ್, ಸಾಕ್ಯಗೌತಮ್ ಮಾತನಾಡಿದರು.