ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರು-ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ 
ರಾಜ್ಯ

ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರು-ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ

ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರ ಅತಿಯಾದ ದಟ್ಟಣೆಯನ್ನು ನಿಯಂತ್ರಿಸಲು ನೈರುತ್ಯ ರೈಲ್ವೆಯು (SWR) ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಘೋಷಿಸಿದೆ. ಈ ವಿಶೇಷ ರೈಲುಗಳು ಎರಡೂ ಮಾರ್ಗಗಳಲ್ಲಿ ತಲಾ ಎರಡು ಟ್ರಿಪ್‌ಗಳನ್ನು (ಪ್ರಯಾಣ) ನಡೆಸಲಿವೆ.

ಹಬ್ಬದ ಸಮಯದಲ್ಲಿ ಸಾಲು ಸಾಲು ರಜೆಗಳು ಇರುವುದರಿಂದ ರಾಜಧಾನಿ ಬೆಂಗಳೂರಿನಿಂದ ತಮ್ಮ ತಮ್ಮ ಊರಿಗೆ ತೆರಳುವ ಸಾರ್ವಜನಿಕರ ದಟ್ಟಣೆಯನ್ನು ತಗ್ಗಿಸಲು ಮತ್ತು ಸುಖಕರ ಪ್ರಯಾಣದ ಅನುಭವ ಒದಗಿಸಲು ಈ ರೈಲು ಸೇವೆ ಹೆಚ್ಚು ಅನುಕೂಲಕರವಾಗಲಿದೆ.

ರೈಲು ವೇಳಾಪಟ್ಟಿ ಮತ್ತು ವಿವರ

ರೈಲು ಸಂಖ್ಯೆ 06551 (ಎಸ್.ಎಮ್.ವಿ.ಟಿ ಬೆಂಗಳೂರು – ಬೆಳಗಾವಿ): ಈ ವಿಶೇಷ ರೈಲು ದಿನಾಂಕ 07.11.2026 ಮತ್ತು 09.11.2026 ರಂದು ಸಂಜೆ 7:00 ಗಂಟೆಗೆ (19:00 hrs) ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ (SMVT) ಹೊರಟು, ಮರುದಿನ ಬೆಳಗ್ಗೆ 8:25 ಗಂಟೆಗೆ ಬೆಳಗಾವಿ ತಲುಪಲಿದೆ.

ರೈಲು ಸಂಖ್ಯೆ 06552 (ಬೆಳಗಾವಿ – ಎಸ್.ಎಮ್.ವಿ.ಟಿ ಬೆಂಗಳೂರು): ವಾಪಾಸ್​ ಆಗುವ ಈ ರೈಲು, ದಿನಾಂಕ 08.11.2026 ಮತ್ತು 10.11.2026 ರಂದು ಸಂಜೆ 5:30 ಗಂಟೆಗೆ (17:30 hrs) ಬೆಳಗಾವಿಯಿಂದ ಹೊರಟು, ಮರುದಿನ ಬೆಳಗ್ಗೆ 5:00 ಗಂಟೆಗೆ ಎಸ್.ಎಮ್.ವಿ.ಟಿ ಬೆಂಗಳೂರು ತಲುಪಲಿದೆ.

ಎಲ್ಲೆಲ್ಲಿ ನಿಲುಗಡೆ?

ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ರೈಲುಗಳು ಎರಡೂ ಮಾರ್ಗಗಳಲ್ಲಿ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಲಿವೆ. ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್.ಎಮ್.ಎಮ್. ಹಾವೇರಿ, ಎಸ್.ಎಸ್.ಎಸ್. ಹುಬ್ಬಳ್ಳಿ, ಧಾರವಾಡ, ಅಲ್ನಾವರ, ಲೊಂಡಾ ಮತ್ತು ಖಾನಾಪುರ.

ಬೋಗಿಗಳ ಸಂಯೋಜನೆ

ಈ ವಿಶೇಷ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿರಲಿದೆ. ಇದರಲ್ಲಿ, ಎಸಿ 2-ಟೈರ್ (AC 2-Tier), ಎಸಿ 3-ಟೈರ್ (AC 3-Tier), ಸ್ಲೀಪರ್ ಕ್ಲಾಸ್ (Sleeper Class), ಜನರಲ್ ಕ್ಲಾಸ್ (General Class) ಇರಲಿವೆ. ದಿವ್ಯಾಂಗಚೇತನ ಸ್ನೇಹಿ ಹಾಗೂ ಲಗೇಜ್-ಕಮ್-ಬ್ರೇಕ್ ವ್ಯಾನ್ ಮತ್ತು ಜನರೇಟರ್ ವ್ಯಾನ್‌ಗಳು ಇರಲಿವೆ. ಹಬ್ಬದ ಸಾಲಿನಲ್ಲಿ ಪ್ರಯಾಣಿಸುವ ಸಾರ್ವಜನಿಕರು ಹಾಗೂ ಉದ್ಯೋಗಿಗಳು ಈ ವಿಶೇಷ ರೈಲು ಸೇವೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ನೈರುತ್ಯ ರೈಲ್ವೆ ತಿಳಿಸಿದೆ.