Special puja from Karave for rain 
ರಾಜ್ಯ

ಮಳೆಗಾಗಿ ಕರವೇಯಿಂದ ವಿಶೇಷ ಪೂಜೆ

ತುಮಕೂರು ಡೆಸ್ಕ್
ಹುಳಿಯಾರು: ಜಲಮೂಲಗಳು ಬತ್ತಿ ಹೋಗಿದ್ದು, ರೈತಾಪಿ ವರ್ಗ ಸೇರಿದಂತೆ ಜೀವರಾಶಿಗಳು ಮಳೆಯಿಲ್ಲದೆ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆ ಮಳೆಯಾಗಲಿ ಎಂದು ಕೋರಿ ಕರ್ನಾಟಕ ರಕ್ಷಣಾ ವೇದಿಕೆ ಹುಳಿಯಾರು ಘಟಕದಿಂದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಕರವೇ ಚಿಕ್ಕನಾಯಕನಹಳ್ಳಿ ತಾಲೂಕು ಅಧ್ಯಕ್ಷ ಬೇಕರಿ ಪ್ರಕಾಶ್​ ಮಾತನಾಡಿ, ಮಳೆಯಿಲ್ಲದೆ ಜೀವರಾಶಿ ಸಂಕಷ್ಟಕ್ಕೆ ಸಿಲುಕಿದೆ. ಹಿಂಗಾರಿನ ಬಿತ್ತನೆಗೆ ರೈತ ಸಜ್ಜಾಗಿದ್ದಾನೆ. ಆದರೆ ಮಳೆಯ ಮನ್ಸೂಚನೆ ಕಾಣುತ್ತಿಲ್ಲ. ದೇಶದ ಬೆನ್ನೆಲುಬಾದ ರೈತರು ಚೆನ್ನಾಗಿದ್ದರೆ ಮಾತ್ರ ನಾವೆಲ್ಲರೂ ಚೆನ್ನಾಗಿರಲು ಸಾಧ್ಯ. ರೈತರ ಕಣ್ಣೀರು ಒರೆಸಲು ಮತ್ತು ನಾಡಿನ ಬರಗಾಲ ನೀಗಿಸಲು ಈ ದಿನ ಸಾಮೂಹಿಕ ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.
ಹುಳಿಯಾರು ಕರವೇ ಅಧ್ಯಕ್ಷ ಗವಿರಂಗನಾಥಗೌಡ ಮಾತನಾಡಿ, ಮಳೆಯಿಲ್ಲದೆ ಕೆರೆ&ಕಟ್ಟೆಗಳು ಒಣಗುತ್ತಿವೆ. ಕೊಳವೆಬಾವಿಗಳಲ್ಲಿ ನೀರು ಬತ್ತಿಹೋಗುತ್ತಿದೆ. ಮಳೆಯನ್ನೇ ನಂಬಿ ಬದುಕುವ ರೈತರ ಬದುಕು ದುಸ್ತರವಾಗಿದೆ. ಮಾನವನ ಶಕ್ತಿಯನ್ನು ಮೀರಿದ ಇಂತಹ ಸಂದರ್ಭದಲ್ಲಿ ದೇವರೆ ನಮಗೆ ದಾರಿದೀಪ. ತಾಯಿ ದುರ್ಗಾಪರಮೇಶ್ವರಿ, ಆಂಜನೇಯ ಹಾಗೂ ವರುಣದೇವನು ಶೀಘ್ರದಲ್ಲೇ ಕೃಪೆ ತೋರಿ ನಾಡನ್ನು ಸುಭಿಕ್ಷವಾಗಿಸಲಿ ಎಂದು ವಿಶೇಷ ಪೂಜೆ, ಅಭಿಷೇಕ ನೆರವೇರಿಸಿದ್ದೇವೆ ಎಂದರು. ದುರ್ಗಣ್ಣ, ಶ್ರೀನಿವಾಸ್​, ಪೂಜಾರ್​ ಗಣೇಶ್​, ಬಸವರಾಜು, ಯೋಗೀಶ್​, ಮನು, ರಂಗಮ್ಮ, ರಘು, ಪಡಿಯಪ್ಪ, ಪೂಜಾರ್​ ಭೈರೇಶ್​, ಆಚಾರ್​ ರಮೇಶ್​ ಇದ್ದರು.