ಶ್ರೀರಂಗಪಟ್ಟಣದ ಚರ್ತುರ್ಥ ರಾಜಬೀದಿಗಳಲ್ಲಿ ಗುರುವಾರ ಸಹಸ್ರ ಕಳಶಾಭಿಷೇಕ ಪ್ರಯುಕ್ತ ಶ್ರೀ ಆದಿರಂಗನಾಥಸ್ವಾಮಿಯ ವಿಶೇಷ ಪಂಚಲೋಹದ ಮೂರ್ತಿಯ ಶಾಂತಿ ಉತ್ಸವವನ್ನು ವೈದಿಕರು ವಿಜೃಂಭಣೆಯಿಂದ ನೆರವೇರಿಸಿದರು. 
ರಾಜ್ಯ

ಶ್ರೀ ಆದಿರಂಗನಾಥಸ್ವಾಮಿಗೆ ವಿಶೇಷ ಶಾಂತಿ ಉತ್ಸವ

ಶ್ರೀರಂಗಪಟ್ಟಣ: ಐತಿಹಾಸಿಕ ಶ್ರೀ ಆದಿರಂಗನಾಥಸ್ವಾಮಿಗೆ ಸಹಸ್ರ ಕಳಶಾಭಿಷೇಕ ಪ್ರಯುಕ್ತ ವಿಶೇಷ ಶಾಂತಿ ಉತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಪಟ್ಟಣದ ಪುರಾತನ ದೇವಾಲಯದಲ್ಲಿ ಗುರುವಾರ 1008 ಕಳಶಗಳ ಅಭಿಷೇಕ ಹಾಗೂ ಅರಿಶಿಣದ ಅಲಂಕಾರ ನೆರವೇರಿಸಿದ್ದ ಪ್ರಧಾನ ಅರ್ಚಕ ವಿಜಯಸಾರಥಿ ಅವರು ದೇವಾಲಯದ ಮೂಲೆ ಮೂಲೆ ಸೇರಿದಂತೆ ವಿಮಾನ ಗೋಪುರಕ್ಕೆ ತೀರ್ಥಪ್ರೋಕ್ಷಣೆ ಸಲ್ಲಿಸಿ ಪೂಜಿಸಿದ್ದು, ಸಂಜೆ ಗೋಧೂಳಿ ಲಗ್ನದಲ್ಲಿ ಶ್ರೀದೇವಿ, ಭೂದೇವಿ, ಶ್ರೀರಂಗನಾಯಕಿ ಅಮ್ಮನವರ ಸಮೇತವಿರುವ ಶ್ರೀರಂಗನಾಥಸ್ವಾಮಿ ಅವರ ಪಂಚಲೋಹದ ವಿಶೇಷ ಉತ್ಸವ ಮೂರ್ತಿಗೆ ವಿವಿಧ ಬಗೆಯ ವಿಶೇಷ ಹೂವುಗಳು ಹಾಗೂ ರೇಷ್ಮೆ ವಸ್ತ್ರಗಳಿಂದ ಸರ್ವಾಲಂಕೃತಗೊಳಿಸಿ ವಿವಿಧ ರತ್ನಖಚಿತ ಆಭರಣಗಳನ್ನು ತೊಡಿಸಿ ವೈದಿಕರಿಂದ ಚರ್ತುವೇದ ಪಾರಾಯಣ, ಪ್ರಬಂದ ಸೇವೆಗಳನ್ನು ಅರ್ಪಿಸಲಾಯಿತು.
ಬಳಿಕ ದೇವರ ಉತ್ಸವ ಮೂರ್ತಿಯನ್ನು ವಿಶೇಷ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ಚರ್ತುಥ ರಾಜಬೀದಿಗಳಲ್ಲಿ ಹೊತ್ತು ಮಂಗಳವಾದ್ಯಗಳ ನಾದಸ್ವರಗಳೊಂದಿಗೆ ಮೆರವಣಿಗೆ ನಡೆಸಲಾಗಿದ್ದು ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರು ಸಹ ಪಲ್ಲಕ್ಕಿಗೆ ಹೆಗಲು ನೀಡಿ ಪುನೀತತೆ ಮೆರೆದರು.
ದೇವಾಲಯದಿಂದ ಹೊರಗೆ ಆಗಮಿಸಿದ ಉತ್ಸವ ಪಟ್ಟಣದಲ್ಲಿ ರಾತ್ರಿ 8ಕ್ಕೆ ಆರಂಭವಾಗಿ, ಪ್ರಮುಖ ಬೀದಿಗಳಲ್ಲಿ ಆಗಮಿಸಿದ ಉತ್ಸವಕ್ಕೆ ಪುರಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕರ್ಪೂರ ಬೆಳಗಿ, ಈಡುಗಾಯಿ ಅರ್ಪಿಸಿ ತಮ್ಮ ಕುಟುಂಬಗಳ ಒಳಿತಿಗೆ ಪ್ರಾರ್ಥಿಸಿದರು.