ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಈಶಾನ್ಯ ವಲಯ ಪೊಲೀಸ್ ಉಪಮಹಾನಿರೀಕ್ಷಕ ಶಾಂತನು ಸಿನ್ಹಾ, ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು, ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ‌, ಬೀದರ್ ಎಸ್ಪಿ ಪ್ರದೀಪ ಗುಂಟೆ ಇದ್ದರು. 
ರಾಜ್ಯ

ಕೌಟುಂಬಿಕ ಸಂಕಷ್ಟದಲ್ಲಿರುವ ಮದ್ಯ ವ್ಯಸನಿಗಳ ನೆರವಿಗೆ ವಿಶೇಷ ಒತ್ತು: ಅರುಣ ಚಕ್ರವರ್ತಿ

ಕಲಬುರಗಿ: ಮದ್ಯಪಾನವು ಕೇವಲ ವ್ಯಕ್ತಿಯ ಆರೋಗ್ಯವನ್ನು ಹಾಳುಗೆಡವುದಲ್ಲದೆ, ಇಡೀ ಕುಟುಂಬದ ನೆಮ್ಮದಿಯನ್ನೇ ಕಸಿದುಕೊಳ್ಳುತ್ತದೆ. ಮದ್ಯದ ವ್ಯಸನಕ್ಕೆ ದಾಸರಾಗುವ ಬದಲು, ಆ ಅಭ್ಯಾಸದಿಂದ ಹೊರಬಂದು ಪತ್ನಿ-ಮಕ್ಕಳೊಂದಿಗೆ ಗೌರವಯುತ, ಆರೋಗ್ಯಕರ ಜೀವನ ನಡೆಸಲು ಸಂಕಲ್ಪ ಮಾಡಿ ಎಂದು ರಾಜ್ಯ ಪೊಲೀಸ್​ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಡಿಜಿಪಿ ಅರುಣ ಚಕ್ರವರ್ತಿ ಅವರು ಹೇಳಿದರು.
ಬುಧವಾರ ನಗರದ ಪೊಲೀಸ್ ಆಯುಕ್ತಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಮದ್ಯಪಾನ ಒಂದು ಸಾಮಾಜಿಕ ಕಳಂಕ ಅಥವಾ ಶಿಸ್ತು ಉಲ್ಲಂಘನೆಯಾಗಿ ನೋಡುವ ಬದಲು, ಅದನ್ನು ಗುಣಪಡಿಸಬಹುದಾದ ಒಂದು ‘ಕಾಯಿಲೆ’ ಎಂದು ಪರಿಗಣಿಸುವುದು ಅಗತ್ಯವಾಗಿದೆ.
1956ರಲ್ಲೇ ವಿಶ್ವ ಆರೋಗ್ಯ ಸಂಸ್ಥೆಯು (WHO) ಮದ್ಯಪಾನ ವ್ಯಸನವನ್ನು ಒಂದು ಕಾಯಿಲೆ ಎಂದು ವರ್ಗೀಕರಿಸಿದೆ ಎಂದು ಹೇಳಿದರು.
ಮಧುಮೇಹ ಅಥವಾ ರಕ್ತದೊತ್ತಡ ಇರುವವರನ್ನು ಸಮಾಜ ಹೇಗೆ ಕೀಳಾಗಿ ನೋಡುವುದಿಲ್ಲವೋ, ಹಾಗೆಯೇ ಮದ್ಯವ್ಯಸನಿಗಳನ್ನು ಬಹಿಷ್ಕರಿಸಬಾರದು. ಅವರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಹಾಗೂ ಮಾನಸಿಕ ಸ್ಥೈರ್ಯ ತುಂಬುವ ಮೂಲಕ ಈ ಸುಳಿಯಿಂದ ಹೊರತರುವ ಪ್ರಯತ್ನ ಮಾಡಬೇಕು. ಮದ್ಯಪಾನ ಆರೋಗ್ಯಕ್ಕೆ ಎಂದಿಗೂ ಒಳಿತಲ್ಲ ಎಂದು ಎಚ್ಚರಿಸಿದರು.
ಪೊಲೀಸ್ ಇಲಾಖೆಯ ಕರ್ತವ್ಯದ ಒತ್ತಡದ ಬಗ್ಗೆ ಮಾತನಾಡಿದ ಅವರು, ಸಿಬ್ಬಂದಿಗಳ ಮಾನಸಿಕ ಆರೋಗ್ಯ ಕಾಪಾಡಲು ಇಲಾಖೆಯಲ್ಲಿ 'ವೆಲ್ ಬೀಯಿಂಗ್ ಆಫೀಸರ್ಸ್' (Well-being Officers) ಎಂಬ ಹೊಸ ಪರಿಕಲ್ಪನೆಯನ್ನು ತರಲಾಗಿದೆ. ಅಧಿಕಾರಿಗಳು ಒತ್ತಡದ ಕಾರಣಕ್ಕೆ ಮದ್ಯದ ದಾಸರಾಗಬಾರದು. ಅದಕ್ಕಾಗಿ ಕೌನ್ಸೆಲಿಂಗ್ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ಪ್ರತಿಯೊಬ್ಬ ಸಿಬ್ಬಂದಿಯೂ ತನ್ನ ಕುಟುಂಬದ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಆಲ್ಕೋಹಾಲಿಕ್ಸ್ ಅನಾಲಿಮಸ್ ವಿಶ್ವದ 168ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯವಾಗಿರುವ 'ಆಲ್ಕೋಹಾಲಿಕ್ಸ್ ಅನಾಲಿಮಸ್' ಸಂಸ್ಥೆಯ ಕಾರ್ಯವೈಖರಿಯನ್ನು ವಿವರಿಸಿದ ಅವರು, ಇದೊಂದು ವಿಶಿಷ್ಟ ಸ್ವಯಂ ಸೇವಾ ಕಾರ್ಯಕ್ರಮ. ಇಲ್ಲಿ ಒಬ್ಬ ಮದ್ಯವ್ಯಸನಿಯು ತನ್ನಂತೆಯೇ ಸಂಕಷ್ಟದಲ್ಲಿರುವ ಇನ್ನೊಬ್ಬ ವ್ಯಸನಿಗೆ ಈ ಅಭ್ಯಾಸದಿಂದ ಮುಕ್ತಿ ಪಡೆಯಲು ಬೆಂಬಲ ನೀಡುತ್ತಾನೆ. ಪರಸ್ಪರರ ಅನುಭವಗಳ ಹಂಚಿಕೆಯಿಂದ ಅನೇಕರು ಈಗಾಗಲೇ ಮದ್ಯಪಾನ ತ್ಯಜಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇದು ಸಂಪೂರ್ಣ ಉಚಿತ ಮತ್ತು ಗೌಪ್ಯವಾಗಿ ನಡೆಯುವ ಸೇವೆಯಾಗಿದೆ ಎಂದರು.
ಮದ್ಯಪಾನದಂತಹ ವ್ಯಸನಗಳಿಂದ ಮುಕ್ತರಾಗಿ ಸಮಾಜದಲ್ಲಿ ಘನತೆಯಿಂದ ಬದುಕುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅರುಣ್ ಚಕ್ರವರ್ತಿ ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ.,
ಈಶಾನ್ಯ ವಲಯ ಪೊಲೀಸ್ ಉಪಮಹಾನಿರೀಕ್ಷಕ ಶಾಂತನು ಸಿನ್ಹಾ, ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು, ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ‌, ಬೀದರ್ ಎಸ್ಪಿ ಪ್ರದೀಪ ಗುಂಟೆ ಇದ್ದರು.