ಹನೂರು ತಾಲೂಕಿನ ಮಣಗಳ್ಳಿ ಸರ್ಕಾರಿ ಪ್ರೌಢಾಲೆಯಲ್ಲಿ ಮಕ್ಕಳ ವಿಶೇಷ ಗ್ರಾಮಸಭೆ ನಡೆಸುವ ಸಂಬಂಧ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಶ್ರುತಿ, ಉಮೇಶ್, ನಾಗರಾಜಮೂರ್ತಿ, ಶಿವಶಂಕರ್, ಮುನಿಯನಾಯಕ ಇತರರು ಇದ್ದರು.  
ರಾಜ್ಯ

ನಾಳೆ ಮಕ್ಕಳ ವಿಶೇಷ ಗ್ರಾಮಸಭೆ

ಹನೂರು: ತಾಲೂಕಿನ ಐದು ಗ್ರಾಮ ಪಂಚಾಯಿತಿಗಳಲ್ಲಿ ಡಿ.24 ರಂದು ನಡೆಸಲು ನಿರ್ಧರಿಸಿರುವ ಮಕ್ಕಳ ವಿಶೇಷ ಗ್ರಾಮಸಭೆಯ ಯಶಸ್ವಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯೂ ಆದ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಶ್ರುತಿ ಸೂಚನೆ ನೀಡಿದರು. 

ಮಕ್ಕಳ ವಿಶೇಷ ಗ್ರಾಮಸಭೆ ಆಯೋಜನೆ ಹಿನ್ನಲೆ ಅಗತ್ಯ ಸಿದ್ಧತೆ ಕುರಿತು ಸೋಮವಾರ ತಾಲೂಕಿನ ಮಣಗಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. 

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ನವೆಂಬರ್‌ನಿಂದ ಜನವರಿವರೆಗೆ 10 ವಾರಗಳ ಕಾಲ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನವನ್ನು ಕೈಗೊಳ್ಳಲಾಗಿದ್ದು, ಒಂದು ದಿನ ಗ್ರಾಪಂಗಳಲ್ಲಿ ಮಕ್ಕಳ ವಿಶೇಷ ಗ್ರಾಮಸಭೆಯನ್ನು ಆಯೋಜಿಸುವುದರ ಮೂಲಕ  ಸುಸ್ಥಿರ ಗುರಿಗಳ ಸಾಧನೆಯೊಂದಿಗೆ ಮಕ್ಕಳ ಸ್ನೇಹಿ ಹಾಗೂ ಸುರಕ್ಷಿತ ಗ್ರಾಮ ಪಂಚಾಯಿತಿಯಾಗಿಸಲು ಸರ್ಕಾರ ಸೂಚಿಸಿದೆ. ಈ ಗ್ರಾಮಸಭೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ರಾಜ್ಯಾದ್ಯಂತ ಏಕಕಾಲದಲ್ಲಿ ಚಾಲನೆ ನೀಡಲಿದ್ದಾರೆ ಎಂದರು. 

ತಾಲೂಕಿನಲ್ಲಿ ಮಣಗಳ್ಳಿ ಸೇರಿದಂತೆ ಬಂಡಳ್ಳಿ, ಮಲೆಮಹದೇಶ್ವರ ಬೆಟ್ಟ, ಲೊಕ್ಕನಹಳ್ಳಿ ಹಾಗೂ ಮಂಗಲ ಗ್ರಾಪಂನ ಶಾಲೆಗಳಲ್ಲಿ ಗ್ರಾಮಸಭೆ ಆಯೋಜಿಸಲು ನಿರ್ಧರಿಸಲಾಗಿದೆ. ಮಣಗಳ್ಳಿಯಲ್ಲಿ ನಡೆಯುವ ಗ್ರಾಮಸಭೆಗೆ ಶಾಸಕರು ಚಾಲನೆ ನೀಡಲಿದ್ದಾರೆ. ಆದ್ದರಿಂದ ಆಯಾ ಗ್ರಾಪಂ ವ್ಯಾಪ್ತಿಯ ಶಾಲೆಯ ಮಕ್ಕಳು ಹೆಚ್ಚು ಭಾಗವಹಿಸುವಂತೆ ನೋಡಿಕೊಳ್ಳಬೇಕು. ಸಭೆಯಲ್ಲಿ ಮಕ್ಕಳ ಅಭಿಪ್ರಾಯಕ್ಕೆ ಆದ್ಯತೆ ನೀಡಬೇಕು. ಧ್ವನಿ ಪೆಟ್ಟಿಗೆ ಇರಿಸಬೇಕು. ಹಿಂದಿನ ಗ್ರಾಮಸಭೆಯ ಅನುಪಾಲನಾ ವರದಿಯನ್ನು ಮಂಡಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್, ಆರೋಗ್ಯ ಸೇರಿದಂತೆ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಸಭೆಯಲ್ಲಿ ತಾಂತ್ರಿಕ ವ್ಯವಸ್ಥೆ ಸಮರ್ಪಕವಾಗಿರಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಮಿಯಾನ, ಆಸನ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಒಟ್ಟಿನಲ್ಲಿ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವುದರ ಯಶಸ್ವಿ ಸಭೆಗೆ ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು. 

ಈ ಸಂದರ್ಭದಲ್ಲಿ ತಾಪಂ ಇಒ ಉಮೇಶ್, ಪಿಡಿಒ ರಾಮು, ಗ್ರಾಪಂ ಕಾರ್ಯದರ್ಶಿ ನಾಗರಾಜಮೂರ್ತಿ, ಗ್ರಾಪಂ ವ್ಯಾಪ್ತಿಯ ವಿವಿಧ ಶಾಲೆಯ ಮುಖ್ಯ ಶಿಕ್ಷಕರಾದ ಮಣಗಳ್ಳಿಯ ಶಿವಶಂಕರ್, ಮುನಿಯನಾಯಕ, ಭೈರನತ್ತದ ಮೂರ್ತಿ, ನಾಗರತ್ನಮ್ಮ, ನಾಗನತ್ತದ ಪೂರ್ಣಿಮಾ, ಅಲಗುಮೂಲೆಯ ಶಿವಕುಮಾರ್, ಚಿಂಚಳ್ಳಿಯ ರಾಜು ಇತರರು ಇದ್ದರು.