ವಿಜಯಪುರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಿ.ಎಂ. ಪಾಟೀಲ ಗುರೂಜಿ ಮಾತನಾಡಿದರು. ರವೀಂದ್ರ ಬೆಳ್ಳಿ, ಮಹಾದೇವಯ್ಯ ಗಚ್ಚಿನಮಠ, ಗೀತಾ ದೇಸಾಯಿ ಮತ್ತಿತರರಿದ್ದಾರೆ. 
ರಾಜ್ಯ

23ರಂದು ಸೋಮನಾಥ ಜ್ಯೋತಿರ್ಲಿಂಗ ಯಾತ್ರೆ ಆಗಮನ

ಪ್ರಮುಖ ಮುಖ್ಯಾಂಶಗಳು

  • ಆರ್ಟ್ ಆಫ್ ಲಿವಿಂಗ್‌ನ ಬಿ.ಎಂ. ಪಾಟೀಲ ಗುರೂಜಿ ಹೇಳಿಕೆ
  • ರುದ್ರಪೂಜೆ ಸಂಕಲ್ಪ, ಸತ್ಸಂಗ ಆಯೋಜನೆ
ವಿಜಯಪುರ: ಸಾವಿರಾರು ವರ್ಷಗಳ ಪುರಾತನ ಐತಿಹ್ಯ ಹೊಂದಿರುವ ಸೋಮನಾಥ ಜ್ಯೋತಿರ್ಲಿಂಗ ಯಾತ್ರೆಯು ಏ. 23ರಂದು ವಿಜಯಪುರ ನಗರಕ್ಕೆ ಆಗಮಿಸಲಿದೆ ಎಂದು ಆರ್ಟ್ ಆಫ್ ಲಿವಿಂಗ್‌ನ ಬಿ.ಎಂ. ಪಾಟೀಲ ಗುರೂಜಿ ಹೇಳಿದರು.
12 ಜ್ಯೋತಿರ್ಲಿಂಗಗಳಲ್ಲಿ ಪ್ರಥಮ ಎನಿಸಿಕೊಂಡ ಸೋಮನಾಥ ಜ್ಯೋತಿರ್ಲಿಂಗ ಯಾತ್ರೆಯು ಏ. 23, 24ರಂದು ಎರಡು ದಿನಗಳ ಕಾಲ ಯಾತ್ರೆಯ ನಗರದಲ್ಲಿ ಸಂಚರಿಸಲಿದೆ. ಅಲ್ಲದೇ, ವಿಶೇಷವಾಗಿ ರುದ್ರಪೂಜೆ ಸಂಕಲ್ಪ ಮತ್ತು ಸತ್ಸಂಗ ಹಮ್ಮಿಕೊಳ್ಳುವ ಜತೆಗೆ ಸಾರ್ವಜನಿಕರಿಗೆ ಉಚಿತವಾಗಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಾರ್ವಜನಿಕರು ಈ ಪವಿತ್ರ ಕಾರ್ಯದಲ್ಲಿ ಭಾಗಿಯಾಗಿ ಶಿವಲಿಂಗದ ದರ್ಶನ ಪಡೆದುಕೊಳ್ಳಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಶ್ರೀಗಳು ತಿಳಿಸಿದರು.
ಏ.23ರಂದು ಬೆಳಗ್ಗೆ 7 ಗಂಟೆಗೆ ಜಲನಗರದ ಸಂತೋಷಿ ಮಾತಾ ದೇವಸ್ಥಾನದಿಂದ ಹೇಮರಡ್ಡಿ ಮಲ್ಲಮ ದೇವಸ್ಥಾನದ ಮೆರವಣಿಗೆಯ ಮೂಲಕ ಯಾತ್ರೆಯನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು. ನಂತರ ದೇವಸ್ಥಾನಲ್ಲಿ ಪೂಜಾ ವಿಧಿ-ವಿಧಾನಗಳು ನಡೆದು ಭಕ್ತಾದಿಗಳಿಗೆ ಜ್ಯೋತಿರ್ಲಿಂಗದ ದರ್ಶನ ಜರುಗಲಿದೆ. ಅಂದೇ ಸಂಜೆ 6.30ಕ್ಕೆ ಇಲ್ಲಿನ ಗಾಂಧಿ ವೃತ್ತದಿಂದ ಸಿದ್ಧೇಶ್ವರ ದೇವಸ್ಥಾನದವರೆಗೆ ಯಾತ್ರೆಯ ಮೆರವಣಿಗೆ ಆಯೋಜಿಸಲಾಗಿದ್ದು, ಬಳಿಕ ದೇವಸ್ಥಾನದಲ್ಲಿ ಪೂಜಾ-ವಿಧಾನಗಳು ಜರುಗಲಿವೆ ಎಂದು ಗುರೂಜಿ ಮಾಹಿತಿ ನೀಡಿದರು.
ಏ.24ರಂದು ಬೆಳಗ್ಗೆ 7 ಗಂಟೆಗೆ ಸ್ಟೇಷನ್ ರಸ್ತೆಯ ಷಣ್ಮುಖಾರೂಢ ಮಠದ ಮಹಾದ್ವಾರದಿಂದ ಷಣ್ಮುಖಾರೂಢ ಮಠದ ಯಾತ್ರೆ ನಡೆಯಲಿದೆ. ನಂತರ ಮಠದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಭಕ್ತಿ ಶ್ರದ್ಧೆಯಿಂದ ಜರುಗಲಿದ್ದು, ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ದರ್ಶನ ಪಡೆದು ಪುನೀತರಾಗುವಂತೆ ಅವರು ವಿನಂತಿಸಿದರು.
17ನೇ ಶತಮಾನದಲ್ಲಿ ಮಹಮ್ಮದ ಘಜ್ನಿ ಪ್ರಥಮ ಜ್ಯೋತಿರ್ಲಿಂಗ ಸೋಮನಾಥನ ಮೇಲೆ ದಾಳಿ ನಡೆಸಿ, ಶಿವಲಿಂಗವನ್ನು ಛಿದ್ರಗೊಳಿಸುತ್ತಾನೆ. ಅಲ್ಲಿನ ಅಗ್ನಿಹೋತ್ರಿ ಪುರೋಹಿತರು ಲಿಂಗದ ಚೂರುಗಳನ್ನು ಮನೆಯಲ್ಲಿ ರಹಸ್ಯವಾಗಿ ಸಂಗ್ರಹಿಸುವ ಜತೆಗೆ ಸಣ್ಣ ಶಿವಲಿಂಗಗಳಾಗಿ ರೂಪಿಸಿ ಪೂಜೆ ಸಲ್ಲಿಸುತ್ತಾರೆ. ನಂತರ ಕೆಲ ವರ್ಷಗಳ ನಂತರ ಆದಿ ಶಂಕರಾಚಾರ್ಯರು ಅಲ್ಲಿಗೆ ಭೇಟಿ ನೀಡಿ, ಲಿಂಗಕ್ಕೆ ಮತ್ತೆ ಸಂಸ್ಕಾರ ನೀಡಿ ಪೂಜೆ ಸಲ್ಲಿಸುತ್ತಾರೆ. ಅಲ್ಲದೇ, ಅಲ್ಲಿನ ಪುರೋಹಿತರಿಗೆ ಕರ್ನಾಟಕದಿಂದ ರವಿಶಂಕರ ಎಂಬ ಸಂತರು ಬರುತ್ತಾರೆ. ಅವರಿಗೆ ಶಿವಲಿಂಗವನ್ನು ಹಸ್ತಾಂತರಿಸುವಂತೆ ಆಜ್ಞೆ ನೀಡುತ್ತಾರೆ.
ಸದ್ಯ, ಅದೇ ಪುರಾತನ ಜ್ಯೋತಿರ್ಲಿಂಗವನ್ನು ನಮ್ಮ ಗುರುಗಳಾದ ರವಿಶಂಕರ ಗುರೂಜಿ ಅವರು ರಾಜ್ಯಕ್ಕೆ ತಂದು ಪ್ರತಿಷ್ಠಾಪನೆ ಮಾಡಲು ನಿರ್ಧರಿಸಿದ್ದು, ಅದನ್ನು ರಾಜ್ಯದಲ್ಲಿಯೇ ಪ್ರತಿಷ್ಠಾಪನೆಗೆ ಮುಂದಾಗಿದ್ದು, ಪ್ರತಿಷ್ಠಾಪನೆಗೂ ಮನ್ನವೇ ರಾಜ್ಯದ ಜನತೆಗೆ ಶಿವಲಿಂಗದ ದರ್ಶನ ಮಾಡುವ ಸದುದ್ದೇಶದಿಂದ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಗುರೂಜಿ ತಿಳಿಸಿದರು.
ಆರ್ಟ್ ಆಫ್ ಲಿವಿಂಗ್‌ನ ಜಿಲ್ಲಾ ಅಭಿವೃದ್ಧಿ ಸಮಿತಿಯ ರವೀಂದ್ರ ಬೆಳ್ಳಿ, ಮಹಾದೇವಯ್ಯ ಗಚ್ಚಿನಮಠ, ಗೀತಾ ದೇಸಾಯಿ, ಎನ್.ಡಿ. ಮಸೂತಿ, ಅರವಿಂದ ಮಿಣಜಗಿ, ಸಹನಾ ಪಾಟೀಲ, ಚಂದ್ರಶೇಖರ ಸಿಂಧೂರ, ಶಿವಾನಂದ ಮಾಳಗೊಂಡ ಸುದ್ದಿಗೋಷ್ಠಿಯಲ್ಲಿದ್ದರು.