ಸಾಂದರ್ಭಿಕ ಚಿತ್ರ  
ರಾಜ್ಯ

ಸುಲಭವಾಗಿ ಒಡೆದುಹೋಗುವಂತಹದು ಭಂಗುರ

ನಿರುಪಾದಿ ಬ್ಯಾಡಗಿ

ಈ ದೃಷ್ಟಿಯಿಂದ ಇಂಗ್ಲಿಷ್​ನ brittle ಸಂಸ್ಕೃತದಲ್ಲಷ್ಟೇ ಅಲ್ಲ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳೆಲ್ಲದರಲ್ಲೂ ‘ಭಂಗುರ’ ಆಗಬಲ್ಲದು. ಏರ್-ಇಂಡಿಯಾ ವಿಮಾನಯಾನ ಸಂಸ್ಥೆಯು ಪ್ರಯಾಣಿಕರ ಸಾಮಾನು ಸರಂಜಾಮುಗಳ ಪೈಕಿ ಒಡೆದು ಹೋಗಬಹುದಾದ ವಸ್ತುಗಳನ್ನು ಸೂಚಿಸಲಿಕ್ಕೆ ಫಲಕಗಳಲ್ಲಿ ಹಿಂದಿ ಭಾಷೆಯಲ್ಲಿ ಭಂಗುರ ಪದವನ್ನೇ ಬಳಸಿದೆ. ಕನ್ನಡದ ಆದಿಕವಿ ಪಂಪನೂ ‘ತುಂಗ ತರಂಗ ಭಂಗುರ ಪಯೋಧಿ ಪರೀತ...’ ಎಂದು ಈ ಪದವನ್ನು ಬಳಸಿದ್ದಾನೆ, ಎತ್ತರದ ಅಲೆಗಳ ಅಸ್ಥಿರ ಸಮುದ್ರದಿಂದ ಸುತ್ತುವರಿದ ಭೂಭಾಗವನ್ನು ಬಣ್ಣಿಸುವಾಗ. ಸ್ವಾರಸ್ಯವೆಂದರೆ brittle ಇಂಗ್ಲಿಷ್​ಗೆ ಬಂದದ್ದು ಜರ್ಮನ್​ನ brutila ಪದದಿಂದ, ಮತ್ತು ಅದರ ಮೂಲವೂ ಪೋ›ಟೊ ಇಂಡೊ ಯುರೋಪಿಯನ್ ಕೊಂಡಿಯಿಂದಾಗಿ ಸಂಸ್ಕೃತದ ಭಂಜ್ ಧಾತುವಿನ ದಾಯಾದಿಯೇ ಎನ್ನಲಾಗಿದೆ. ‘ಭಂಗುರ’ ಪದವನ್ನು ಸೂಚಿಸಿರುವವರು: ಯಮನಪ್ಪ ಕೋಟ್ನಿಕಲ್, ಗೋಪಿನಾಥ್ ಭರಮಸಾಗರ, ಎಚ್.ಎಸ್ ಮಂಜುನಾಥ, ಕೆ.ಎ ಭಟ್, ರೂಪಕಲ ಸದಾನಂದ, ಸಿ.ನರೇಂದ್ರ, ಉಮೇಶ ಪ್ರಭು, ಮಾನಸ ಎಂ, ರಘುಪತಿ ಚಿಕ್ಕಬಳ್ಳಾಪುರ, ಶೋಭಾ ಪಿ.ಭಟ್ಟ, ಅಂಜಲಿ ಬರ್ವೆ, ಸುಜಯ ಬಿ.ಜಿ, ಮಮತಾ ಕುಂದಾಪುರ ಮತ್ತಿತರರು. ‘ಭಿದುರ’ ಎಂಬ ಇನ್ನೊಂದು ಪದ, ಸಂಸ್ಕೃತ ಮೂಲದ್ದೇ, ಕನ್ನಡ ನಿಘಂಟುಗಳಲ್ಲೂ ಇರುವುದನ್ನು ಸೂಚಿಸಿದವರು: ಎನ್.ವಿ ಶಂಕರ್, ಯಶೋದಾ ಎಂ.ಗೋಪಿ, ಗೋಪಾಲಕೃಷ್ಣ ಹೆಮ್ಮಿಗೆ ಮುಂತಾದವರು. ಭಿದುರ ಎಂದರೆ ಸಂಸ್ಕೃತದಲ್ಲಿ ಇಂದ್ರನ ವಜ್ರಾಯುಧ ಮತ್ತು ಬಸುರಿ ಮರ ಎಂಬ ಇನ್ನೆರಡು ಅರ್ಥಗಳೂ ಇವೆ. ಸುಲಭವಾಗಿ ಒಡೆಯುವಂತಹದು ಅಥವಾ ಭಂಗುರವಾದುದು ಎಂಬ ಅರ್ಥವಿರುವುದೂ ಹೌದು.

ಅಚ್ಚಕನ್ನಡದ ‘ಪೆಡಸು’ ಕೂಡ ಭಂಗುರತೆ ಎಂಬ ಅರ್ಥವುಳ್ಳದ್ದೇ. ಇದನ್ನು ಸೂಚಿಸಿ ಬಹಳಷ್ಟು ಪ್ರವೇಶಿಕೆಗಳು ಬಂದಿವೆ. ನಳಿನಿ ಜಿ. ಭಟ್, ರಾಜೇಶ್ವರಿ ಶಿವಮೊಗ್ಗ, ಸೂರಿ ಲಿಂಗದಹಳ್ಳಿ, ಲೋಕೇಶಪ್ಪ ಹಿತ್ಲಮನೆ, ಸೀತಾ ವ್ಯಾಸಮುದ್ರಿ, ವಿಶ್ವಜ್ಯೋತಿ ಶಿವಮೊಗ್ಗ, ವಿಜಯಕುಮಾರ ಪಿ. ಕುಲಕರ್ಣಿ, ರವಿಶಂಕರ್ ಮೈಸೂರು, ಗೋಪಾಲ ಜೋಶಿ, ವೀರೇಶ ವಾಲಿ, ವಿಜಯಲಕ್ಷಿ ್ಮ ಎಸ್. ಭಟ್, ಜಿ.ಎಚ್. ಸಂಕಪ್ಪ, ಕೆ.ಎಂ ಮಧ್ವರಾಯ, ಮಂಜುನಾಥ ಜಾಲವಾದಿ, ಶ್ರೀನಾಥ್ ಕೆ.ಟಿ, ಮಂಜುಳಾ ಸಳುಖೆ, ಕೆ.ಅಮರ್ ಬೆಂಗಳೂರು, ಆನಂದರಾಮ ಮಡಿ, ಸುರೇಂದ್ರ ಪೈ, ನಿಹಾರಿಕಾ ನಯನ, ಡಾ.ಸಂಗಮೇಶ ಸುರಭಿ, ಪದ್ಮಾ ಬದರಿನಾಥ್, ಜಯಲಕ್ಷ್ಮಿಅಡಿಗ, ಎಂ.ಕೆ ರಮೇಶ್, ಶಶಿಕಲಾ ನರೇಂದ್ರನಾಥ್, ಡಾ.ಪ್ರಕಾಶ ತೇರಣಿ, ಸುಜಾತ ಕುರ್ಪಾಡ್, ಕಂಪಲಾಪುರ ಶ್ರೀನಿವಾಸ್ ಮತ್ತಿತರರು. ಕ್ಷಣಾರ್ಧದಲ್ಲಿ ಮುರಿಯುವಂಥದನ್ನು ಉತ್ತರ ಕರ್ನಾಟಕದ ಕಡೆ ‘ಪಳ್ಳು’ ಎನ್ನುತ್ತೇವೆಂದು ಸವದತ್ತಿಯಿಂದ ಸಿದ್ದನಗೌಡ ಮುದಿಗೌಡ್ರ ಬರೆದಿದ್ದಾರೆ. ಮಲೆನಾಡಿನಲ್ಲಿ ‘ಸೂಬ್ರ’ (ಪಾಯ್ಸದ್ ಗಡ್ಗಿ ಭಾರಿ ಸೂಬ್ರ ನಿದಾನಕ್ ಎತ್ ಇಳ್ಸಿ) ಎನ್ನುತ್ತೇವೆಂದು ಕಡೂರು ದೇವೇಂದ್ರ ಬರೆದಿದ್ದಾರೆ. ಬೆಂಗಳೂರಿನ ಸಿಂಧು ರಾವ್ ಸೂಚಿಸಿದ ‘ಗಟ್ಟಿಮುರಿ’ (ಉದಾಹರಣೆ- ಗಟ್ಟಿಮುರಿ ಮೈಸೂರುಪಾಕ್) ಸಹ ಸೂಕ್ತವೆನಿಸುತ್ತದೆ. ಮೈಸೂರಿನ ಪಿ.ಜೆ ರಾಘವೇಂದ್ರ ಸೂಚಿಸಿದ ‘ಸುಭಗ್ನ’ (ಸುಭಗ್ನ ಸಾವಧಾನ...) ಕಿರುನಗೆ ಮೂಡಿಸುತ್ತದೆ.

ಕಳೆದ ಸಲ ಕೇಳಿದ್ದ ಎರಡನೆಯ ಪದ Disposable. ಇಂಗ್ಲಿಷ್​ನಲ್ಲಿ 16ನೆಯ ಶತಮಾನದಿಂದಲೂ ಇದೆ, ಆದರೆ ಆಗೆಲ್ಲ ‘that may be done without’ ಅಂದರೆ ತೀರ ಆವಶ್ಯಕವಲ್ಲದ ವಸ್ತು ಎಂಬರ್ಥದಲ್ಲಿ ಬಳಕೆಯಿದ್ದದ್ದು. ಒಮ್ಮೆ ಉಪಯೋಗಿಸಿದ ಬಳಿಕ ಆಮೇಲೆ ಅಗತ್ಯವಾಗಲೀ ಬಳಕೆಯಾಗಲೀ ಇಲ್ಲದೆ ವಿಲೇವಾರಿ ಮಾಡಬಹುದಾದದ್ದು ಎಂಬ ಅರ್ಥದಲ್ಲಿ ಬಳಕೆಯಾಗುತ್ತಿರುವುದು 20ನೆಯ ಶತಮಾನದಿಂದ ಈಚೆಗಷ್ಟೇ. ಮುಖ್ಯವಾಗಿ ಮಕ್ಕಳಿಗೆ ಹೀರುಬಟ್ಟೆ (ಡಯಾಪರ್) ತೊಡಿಸುವುದು ಆರಂಭವಾದಾಗಿಂದ. ಈಗ ಚುಚ್ಚುಮದ್ದಿನ ಸೂಜಿ, ಕೈಗವಸುಗಳು, ಅಡಿಕೆಹಾಳೆಯ ತಟ್ಟೆಗಳು ಮುಂತಾದುವಕ್ಕೂ ಇದೇ ಪದ ಅನ್ವಯವಾಗುತ್ತದೆ. ಆದ್ದರಿಂದ ‘ಏಕೋಪಯೋಗಿ’ ಅರ್ಥಪೂರ್ಣವೆನಿಸುತ್ತದೆ. ಸೂಚಿಸಿದವರು: ರಂಗನಾಥ ಟಿ.ಕೆ, ಸಣ್ಣಪ್ಪ ನಾಯಕ್, ಬಿ.ಆರ್.ಪದ್ಮನಾಭನ್, ನಾಗೇಶ ಫಾಟಕ್, ಸಂಜೀವ ಜೋಶಿ, ಪ್ರಭಾಕರ ಅಡಿಗ, ಭೀಮರಾವ್ ಸುಬೇದಾರ್, ನಿತ್ಯಾನಂದ ಬ್ರಹ್ಮಾವರ ಮುಂತಾದವರು. ‘ತ್ಯಾಜ್ಯಯೋಗ್ಯ’ (ಗಣೇಶ ಭಟ್, ಎಂ.ಬಾಲಕೃಷ್ಣ ಭಟ್, ಪ್ರಕಾಶ ಗೋವಿಂಡ್ಯೆ, ಚಂದ್ರಕಾಂತ ಜೋಶಿ) ಸಹ ಯೋಗ್ಯವೇ. ಬಳಸಿದ ಮೇಲೆ ಎಸೆದು ಬಿಡಬಹುದಾದದ್ದು ಎಂಬರ್ಥದಲ್ಲಿ ‘ಬಳಸೊಗೆ’ (ಶ್ರೀವತ್ಸ ತೀರ್ಥಹಳ್ಳಿ, ಜ್ಯೋತಿ ಮಹಾದೇವ್, ಡಾ.ದಯಾನಂದ ಭಟ್ಟ, ಆರ್.ವಿ ಮೂರ್ತಿ) ಮತ್ತು ‘ಬಳಸೆಸೆ’ (ಗುರುಪ್ರಸಾದ್ ನಂಜೀಪುರ, ವಿದ್ಯಾ ಫಡಕೆ, ಮಂಜುನಾಥ ಡಿ.ಎಸ್, ವಿಶ್ವರಾಜ್ ಕೋಲಾರ, ನಿಶಾಂತ್ ಭಾರದ್ವಾಜ್, ಪಂಪಣ್ಣ ಗೌಡ) ಕೂಡ ಗಮನಾರ್ಹವಾಗಿವೆ. ಹಾಗೆಯೇ ‘ಏಕಬಳಕೆ’ ಎಂದು ಸೂಚಿಸಿ ಸುಮಾರಷ್ಟು ಪ್ರವೇಶಿಕೆಗಳು ಬಂದಿವೆ. ಆದರೆ ಹಿಂದೊಮ್ಮೆ ಇದೇ ಅಂಕಣದಲ್ಲಿ ತಿಳಿಸಿರುವಂತೆ ಸಂಸ್ಕೃತ-ಕನ್ನಡ ಕಲಬೆರಕೆಯಿಂದಾಗಿ ಅರಿಸಮಾಸ ಎನಿಸುವ, ವಿದ್ವಾಂಸರು ಅಷ್ಟೇನೂ ಪುರಸ್ಕರಿಸದ ಪದಗಳನ್ನು ಹೊಸದಾಗಿ ಕಟ್ಟದಿರೋಣ ಎಂಬ ಕಾರಣದಿಂದ ಅದನ್ನು ಆಯ್ದುಕೊಂಡಿಲ್ಲ.

ಕೊನೆಯದಾಗಿ Turnkey. ಇದು ಕೂಡ ಇಂಗ್ಲಿಷ್​ನಲ್ಲಿ 16ನೆಯ ಶತಮಾನದಿಂದಲೂ ಬಳಕೆಯಲ್ಲಿರುವುದು, ಮತ್ತು ಆ ಕಾಲದಲ್ಲಿ ಬೇರೆಯೇ ಅರ್ಥದಲ್ಲಿ ಬಳಕೆಯಾಗುತ್ತಿದ್ದದ್ದು. Jailer ಅಥವಾ ಸೆರೆಮನೆಯ ಬೀಗದಕೈಯ ಅಧಿಕಾರಿ ಎಂಬ ಅರ್ಥವಿದ್ದದ್ದು ಆಗ ಈ ಪದಕ್ಕೆ. ‘ಶೋಲೇ’ ಹಿಂದಿ ಚಲನಚಿತ್ರದಲ್ಲಿ ಪೋಷಕನಟ ಜಿ.ಕೆ ಅಸ್ರಾಣಿ ನಿರ್ವಹಿಸಿದ್ದ, ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದ ಪಾತ್ರವಿತ್ತಲ್ಲ ಅದೇ ಜೈಲರ್. ಆ ಅರ್ಥ ಕೂಡ ತರ್ಕಬದ್ಧವೇ ಆಗಿತ್ತು. ಕೈದಿಗಳನ್ನು ಒಮ್ಮೆ ಸೆರೆಮನೆಯ ಒಳಕ್ಕೆ ತಳ್ಳಿ ಬೀಗ ಹಾಕಿದರೆ ಆಮೇಲೆ ಪದೇ ಪದೇ ತೆಗೆಯುವ ಅಗತ್ಯ ಇಲ್ಲವಲ್ಲ! ಮತ್ತೆ ಕೆಲವು ಕಾಲ ಹಲ್ಲು ಕೀಳಲಿಕ್ಕೆ ಬಳಸುವ ವಿಶೇಷ ಉಪಕರಣವೊಂದನ್ನೂ ಟರ್ನ್ಕೀ ಎನ್ನಲಾಗುತ್ತಿತ್ತಂತೆ. ಆದರೆ ಈಗ ಇಂಗ್ಲಿಷ್​ನಲ್ಲಿ ಈ ಪದ ಬಳಕೆಯಾಗುತ್ತಿರುವುದು ‘ಯಾವುದೇ ಹೆಚ್ಚಿನ ಸಿದ್ಧತೆ ಅಥವಾ ಜೋಡಣೆ ಇಲ್ಲದೆ, ಬಳಸಲು ಅಥವಾ ಕಾರ್ಯ ನಿರ್ವಹಿಸಲು ಸಂಪೂರ್ಣವಾಗಿ ಸಿದ್ಧವಾಗಿರುವ ಉತ್ಪನ್ನ, ಯೋಜನೆ ಅಥವಾ ಸೇವೆ’ ಎಂಬ ಸಂದರ್ಭದಲ್ಲಿ. ಉದಾಹರಣೆಗೆ ಮನೆ ಕಟ್ಟಿಕೊಡುವ ಯೋಜನೆ ಅಂತಾದರೆ ಗುತ್ತಿಗೆದಾರರು ಗ್ರಾಹಕರಿಗೆ ಹಸ್ತಾಂತರಿಸುವಾಗ ಹೊಸ ಮನೆಯ ಎಲ್ಲ ಕೆಲಸಗಳೂ ಪೂರ್ಣಗೊಂಡಿರುತ್ತವೆ. ಬೀಗದ ಕೈ ಪಡೆದು ನೇರವಾಗಿ ಆ ಮನೆಯಲ್ಲಿ ವಾಸಿಸತೊಡಗಬಹುದು. ಈಗಿನ ಕಾಲದಲ್ಲಾದರೆ ಗೃಹಪ್ರವೇಶ ಸಮಾರಂಭದ ನಿರ್ವಹಣೆಯನ್ನೂ ಗುತ್ತಿಗೆಯಲ್ಲಿ ಸೇರಿಸುತ್ತಾರೇನೋ!

ಟರ್ನ್ಕೀಗೆ ಸಂವಾದಿಯಾಗಬಲ್ಲ ಪದ ‘ಸರ್ವಸಿದ್ಧ’ ಎಂದು ಕೆಲವರು ಸೂಚಿಸಿದ್ದಾರೆ: ಪ್ರಭುಪ್ರಸಾದ್ ನಡುತೋಟ, ವಿವೇಕ ಭಟ್, ಪೊ›.ಜಿ.ಆರ್.ಅಶ್ವತ್ಥ ಗುಜ್ಜನಹಳ್ಳಿ, ವಸಂತಕುಮಾರ್ ಕಲ್ಯಾಣಿ, ಸತೀಶ ಭಟ್ ಮುಂತಾದವರು. ಅದನ್ನೇ ಇನ್ನಷ್ಟು ಹ್ರಸ್ವಗೊಳಿಸಿ ‘ಸಂಸಿದ್ಧ’ ಎಂದಿದ್ದಾರೆ ಡಾ.ಜಿ.ಎಸ್.ಉಮೇಶಬಾಬು. ‘ಸಿದ್ಧಸ್ಥಿತಿ’ (ಡಾ.ರಂಗನಾಥ ಕಟ್ಟಿ), ‘ಪ್ರವೇಶಸಿದ್ಧ’ (ಅಂಜನಾ ತುಮಕೂರು), ‘ಪೂರ್ವಸಿದ್ಧ’ (ಗಂಗಾ ಹೆಗಡೆ, ಸುಜನಾ ನಿಟ್ಟೂರು), ‘ಸಂಪೂರ್ಣಸಿದ್ಧ’ (ನಾಗಮಣಿ ಶಾಂಪುರ್, ಪದ್ಮಾವತಿ ಅಯ್ಯರ್, ನಂದಿನಿ ಹಾಸನ, ಸರಿತಾ ಸಂಗಂ, ಕುಶಲ್ ಭಾರದ್ವಾಜ್), ‘ಸಿದ್ಧೋತ್ಪನ್ನ’ (ಸುಬ್ರಹ್ಮಣ್ಯ ಎಸ್) ಸಹ ಯೋಜನೆ/ಸೇವೆ/ಉತ್ಪನ್ನ ಎಲ್ಲ ರೀತಿಯಿಂದಲೂ ಸಿದ್ಧವಾಗಿರುವುದನ್ನು ಪ್ರತಿಬಿಂಬಿಸುತ್ತವೆ. ಬೆಂಗಳೂರಿನ ಎನ್.ಆರ್. ರಮೇಶ್ ಸೂಚಿಸಿದ ‘ಹಸ್ತಸಿದ್ಧ’ ವಿಶೇಷವಾಗಿ ಗಮನ ಸೆಳೆಯುತ್ತದೆ. ಸಿದ್ಧಹಸ್ತ ಎಂದು ಈಗಾಗಲೇ ಬಳಕೆಯಲ್ಲಿರುವ, ವ್ಯಕ್ತಿಯ ನೈಪುಣ್ಯ ಅಥವಾ ಚಾತುರ್ಯವನ್ನು ಸೂಚಿಸುವ ಪದ ಎಲ್ಲರಿಗೂ ಗೊತ್ತಿದ್ದದ್ದೇ. ಅದರಲ್ಲಿಯೇ ಪದಭಾಗಗಳ ಸ್ಥಾನಪಲ್ಲಟ ಮಾಡಿ ‘ಹಸ್ತಸಿದ್ಧ’ ಎಂದಿರುವುದು ಹೊಸ ಅರ್ಥ ನೀಡಿದೆ. ತಯಾರು ಮಾಡಿ ಕೈಗೊಪ್ಪಿಸುವುದು ಎಂಬ ಅರ್ಥವನ್ನು ಚೆನ್ನಾಗಿ ಸೂಚಿಸುವಂತಿದೆ. ಈ ರೀತಿ ತಲೆಯೋಡಿಸಿ ಹೊಸಹೊಸ ಪದಗಳನ್ನು ಕಟ್ಟುವುದರಲ್ಲಿ, ನಿಘಂಟುಗಳಲ್ಲಷ್ಟೇ ಅಡಗಿರುವ ಹಳೆಯವನ್ನು ಹುಡುಕಿ ತೆಗೆಯುವುದರಲ್ಲಿ, ಆಸಕ್ತಿಯಿಂದ ಭಾಗವಹಿಸುತ್ತಿರುವ ಓದುಗರೆಲ್ಲರಿಗೂ ವಿಶೇಷ ಅಭಿನಂದನೆಗಳು. ಕಟ್ಟಿದ/ಹುಡುಕಿದ ಪದಗಳನ್ನು ಮಾತಿನಲ್ಲಿ, ಬರೆವಣಿಗೆಯಲ್ಲಿ ಬಳಸತೊಡಗಿದರೆ ಇನ್ನೂ ಚೆನ್ನ.

ಈ ವಾರದ ಮೂರು ಪದಗಳು:

1. Checklist: ಯಾವುದೇ ಕೆಲಸವನ್ನು ಕ್ರಮಬದ್ಧವಾಗಿ ಮಾಡಲು, ಯಾವುದನ್ನೂ ಮರೆಯದಂತೆ ತಡೆಯಲು ಮತ್ತು ಹಂತಗಳನ್ನು ಪರಿಶೀಲಿಸಲು ಒಂದು ಪಟ್ಟಿ.

2. Indicator: ಸ್ಥಿತಿ, ದಿಕ್ಕು ಅಥವಾ ಬದಲಾವಣೆಯನ್ನು ಸೂಚಿಸುವ ಸಾಧನ, ಚಿಹ್ನೆ, ಅಥವಾ ವಸ್ತು. ರಸ್ತೆಯಲ್ಲಿ ವಾಹನ ಚಲಾಯಿಸುವಾಗಲೂ ಬಳಕೆಯಾಗುತ್ತದೆ.

3. Texture: ವಸ್ತುವಿನ ಮೇಲ್ಮೈಯ ಸ್ಪರ್ಶದ ಗುಣಲಕ್ಷಣ. ತಿಂಡಿ-ತಿನಸಿನಲ್ಲೂ ರುಚಿ, ಬಣ್ಣ, ಶಾಖ, ಪರಿಮಳ ಮುಂತಾದುವಂತೆ ಇದೂ ಮುಖ್ಯವಾಗುತ್ತದೆ.

ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್​ಆಪ್ ಸಂಖ್ಯೆ: +12404010945

-(ಲೇಖಕರು ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್

ಮತ್ತು ಅಂಕಣ ಬರಹಗಾರರು)