ಕೆಂಭಾವಿ ಸಮೀಪ ಯಕ್ತಾಪುರ ಗುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ದೇವಸ್ಥಾನ ಅಭಿವೃದ್ಧಿ ಕಾರ್ಯ ಮತ್ತು ವಿವಿಧ ಗ್ರಾಮಗಳ ಕುಡಿಯುವ ನೀರು ಹಾಗೂ ಸಿಸಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಶಾಸಕ ಶರಣಬಸಪ್ಪ ದರ್ಶನಾಪೂರ ಅಡಿಗಲ್ಲು ನೆರವೇರಿಸಿದರು. ಹಣಮಂತ್ರಾಯ, ಸ್ಫೂರ್ತಿ, ಬಾಪುಗೌಡ, ಶಿವಮಹಾಂತ ಇದ್ದರು.
- ಶಾಸಕ ಶರಣಬಸಪ್ಪ ದರ್ಶನಾಪುರ ಭರವಸೆ
- ಯಕ್ತಾಪುರದಲ್ಲಿ ವಿವಿಧ ಕಾಮಗಾರಿಗೆ ಅಡಿಗಲ್ಲು
ಕೆಂಭಾವಿ: ಯಕ್ತಾಪುರ ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಸಿಸಿ ರಸ್ತೆಗಳ ಸಮಸ್ಯೆ ಎದುರಾಗಿದ್ದು ಅವುಗಳನ್ನು ಹಂತ ಹಂತವಾಗಿ ಬಗೆಹರಿಸುವ ಕಾರ್ಯ ಮಾಡಲಾಗುವುದು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.
ಯಕ್ತಾಪುರ ಗ್ರಾಮದ ಗುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ದೇವಸ್ಥಾನ ಅಭಿವೃದ್ಧಿ ಕಾರ್ಯ ಮತ್ತು ವಿವಿಧ ಗ್ರಾಮಗಳ ಕುಡಿಯುವ ನೀರು ಹಾಗೂ ಸಿಸಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ಯಕ್ತಾಪುರ, ಚಿಂಚೋಳಿ, ಆಲ್ಹಾಳ, ಐನಾಪುರ, ಹೂವಿನಹಳ್ಳಿ, ತಳ್ಳಳ್ಳಿ, ಬೊಮ್ಮನಹಳ್ಳಿ ಸೇರಿ ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳ ಮೂಲಭೂತ ಸೌಲಭ್ಯಕ್ಕೆ ಆದ್ಯತೆ ನೀಡಲಾಗಿದೆ. ಕೆಕೆಆರ್ಡಿಬಿ ಯೋಜನೆಯಡಿಯಲ್ಲಿ ಗ್ರಾಮಕ್ಕೆ ಕುಡಿಯುವ ಸರಬರಾಜು ಯೋಜನೆ, ಆಶ್ರಯ ಕಾಲನಿಗೆ ಕಿರು ನೀರು ಸರಬರಾಜು, ಗುತ್ತಿ ಬಸವಣ್ಣ ದೇವಸ್ಥಾನದ ಅಭಿವೃದ್ಧಿಗೆ ರೂ. 60 ಲಕ್ಷ ಸೇರಿ ಹಲವು ಅಭಿವೃದ್ಧಿ ಕಾರ್ಯಕ್ಕೆ ಟೆಂಡರ್ ಕರೆಯಲಾಗಿದೆ ಎಂದರು.
ಸುರಪುರ&ಹುನಗುಂದ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಐದು ಗ್ರಾಮಗಳಲ್ಲಿ ಬಸ್ ಶೆಲ್ಟರ್ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದ್ದು ಶ್ರೀ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಕೆಲವೆ ದಿನಗಳಲ್ಲಿ ಈ ಎಲ್ಲ ಕಾಮಗಾರಿ ಮುಗಿದು ಜನತೆಗೆ ಶುದ್ಧ ಕುಡಿಯುವ ನೀರು ಮತ್ತು ಸುಸಜ್ಜಿತ ದೇವಸ್ಥಾನ ನಿರ್ಮಾಣವಾಗಲಿದೆ ಎಂದು ಹೇಳಿದರು.
110 ವಿದ್ಯುತ್ ಕೇಂದ್ರ ಉದ್ಘಾಟನೆ
ಆಲ್ಹಾಳ ಗ್ರಾಮದಲ್ಲಿ 21.54 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾದ 110 ಕೆವಿ ವಿದ್ಯುತ್ ಕೇಂದ್ರವನ್ನು ಸೋಮವಾರ ಶಾಸಕ ಶರಣಬಸಪ್ಪ ದರ್ಶಪುರ ಲೋಕಾರ್ಪಣೆಗೊಳಿಸಿದರು. ಮೊದಲು ವಿದ್ಯುತ್ ಕೇಂದ್ರಗಳಿಗೆ 5 ಎಂವಿಎ ಸಾಮರ್ಥ್ಯದ ಟಿಸಿ ಅಳವಡಿಸಲಾಗುತ್ತಿತ್ತು. ಆದರೆ ಈಗ 20 ಎಂವಿಎ (ಮೆಗಾ ವೋಲ್ಟ್ ಎಂಪಿಯರ್) ಸಾಮರ್ಥ್ಯದ ನಾಲ್ಕು ಬೃಹತ್ ಟಿಸಿಗಳು ಈ ವಿದ್ಯುತ್ ಕೇಂದ್ರದಲ್ಲಿ ಚಾಲನೆ ನೀಡಲಾಗಿದ್ದು ಇದು ಮುಂದಿನ ಐವತ್ತು ವರ್ಷಗಳವರೆಗೆ ಈ ಭಾಗದಲ್ಲಿ ಯಾವುದೇ ವಿದ್ಯುತ್ ಸಮಸ್ಯೆ ಎದುರಾಗದಂತೆ ಈ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ದರ್ಶನಾಪುರ ಹೇಳಿದರು.
ತಹಸೀಲ್ದಾರ್ ಎಚ್.ಎ.ಸರಕಾವಸ್, ಕೆಪಿಟಿಸಿಎಲ್ ಅಧಿಕಾರಿಗಳಾದ ರಾಮಚಂದ್ರ ಎಸ್.ಜಿ.ರಾಜೇಶ ಹಿಪ್ಪರಗಿ, ಮಲ್ಲಿಕಾರ್ಜುನ ಗುಂಡಗೋಳ, ದಯಾನಂದ, ಸುಲ್ತಾನ್ ಸಾಹೇಬ್, ಜೆಸ್ಕಾಂ ಇಇ ರಾಜಶೇಖರ, ಶಂಕರ ಗುತ್ತಿ, ಗ್ರಾಮೀಣ ಕುಡಿಯುವ ನೀರು ಸರಬರಾಜ ಇಲಾಖೆಯ ಎಇಇ ಹಣಮಂತ್ರಾಯ, ಎಇ ಸ್ಫೂರ್ತಿ, ನಿರ್ಮಿತಿ ಕೇಂದ್ರದ ಬಾಪುಗೌಡ ಪಾಟೀಲ್, ಶಹಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಹಾಂತ ಚಂದಾಪುರ ಸೇರಿ ಅನೇಕರು ಇದ್ದರು. ಹಿರಿಯ ಮುತ್ಸದ್ದಿ ಕೆಂಭಾವಿ ತಾಲೂಕಾ ಹೋರಾಟ ಸಮಿತಿಯ ಅಧ್ಯಕ್ಷ ಲಿಂಗನಗೌಡ ದೇಸಾಯಿ ಹದನೂರ ಅವರ ನಿಧನದಿಂದ ಎರಡೂ ಕಾರ್ಯಕ್ರಮಗಳು ಸಂಪ್ತ ರೀತಿಯಲ್ಲಿ ನೆರವೇರಿದವು.