Solve the water problem quickly 
ರಾಜ್ಯ

ನೀರಿನ ಸಮಸ್ಯೆ ತ್ವರಿತವಾಗಿ ಬಗೆಹರಿಸಿ

ಶಿಡ್ಲಘಟ್ಟ: ತಾಲೂಕಿನಲ್ಲಿ ಯಾವ ಗ್ರಾಮಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಇದೆ, ಅಥವಾ ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾಗಬಹುದು ಎಂಬುವುದರ ಪಟ್ಟಿ ನೀಡಿದಲ್ಲಿ ಸಮಸ್ಯಾತ್ಮಕ ಗ್ರಾಮಗಳಲ್ಲಿನ ನೀರಿನ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್​ ಎನ್​.ಗಗನಸಿಂಧು ತಿಳಿಸಿದರು
.
ತಾಲೂಕು ಪಂಚಾಯಿತಿಯಲ್ಲಿ ತಾಪಂ ಆಡಳಿತಾಧಿಕಾರಿ ಅಬಿದ ಸೈಯದ್​ ಸಾಹೇಬಜಾನ್​ ಅಧ್ಯಕ್ಷತೆಯಲ್ಲಿ ತಾಲೂಕಿನಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿ ಇತರ ಸಮಸ್ಯೆಗಳ ಕುರಿತು ಚರ್ಚಿಸಲು ಆಯೋಜಿಸಿದ್ದ ಟಾಸ್ಕ್​ ಫೋರ್ಸ್​ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದ ಗ್ರಾಮಗಳಿಗೆ ನೀರೊದಗಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಪ್ರತಿ ಗ್ರಾಮಕ್ಕೆ ಯಾವ ರೀತಿ ಕ್ರಮ (ಖಾಸಗಿ ಬೋರ್​ವೆಲ್​, ಟ್ಯಾಂಕರ್​, ನೀರಿನ ಕೊಳವೆಬಾವಿ ಫ್ಲಶಿಂಗ್​, ಶುದ್ಧೀಕರಣ ಟಕಗಳ ದುರಸ್ತಿ) ಅನುಕೂಲ ಎಂಬುದರ ಮಾಹಿತಿ ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಆಡಳಿತಾಧಿಕಾರಿಗೆ ಹೊಣೆ ನಿಗದಿಪಡಿಸಿ, ಸಮಸ್ಯೆ ಕಂಡುಬಂದ ಕೂಡಲೇ ಸ್ಥಳದಲ್ಲೇ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಹೆಚ್ಚು ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಅಲ್ಲಿ ಸಮಸ್ಯೆ ಬಗೆಹರಿಸಬೇಕಿದೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಇಒ ಹೇಮಾವತಿ ಮಾತನಾಡಿ, ತಾಲೂಕಿನಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಿ, ಕೊಳವೆ ಬಾವಿಗಳನ್ನು ಕೊರೆಸಲು ಅವಕಾಶವಿದ್ದರೆ ಆದ್ಯತೆ ಮೇರೆಗೆ ಜಿಲ್ಲಾ ಪಂಚಾಯಿತಿಗೆ ಅನುಮೋದನೆಗೆ ಕಳುಹಿಸಿ, ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ತಾಲೂಕಿನ ಗ್ರಾಪಂ ಹಂತದಲ್ಲಿ ಟ್ಯಾಂಕರ್​ ಮೂಲಕ ನೀರು ಸರಬರಾಜು ಮಾಡಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲೂಕು ಯೋಜನಾಧಿಕಾರಿ ಅನಿಲ್​ಕುಮಾರ್​, ತಾಲೂಕುಮಟ್ಟದ ಅಧಿಕಾರಿಗಳು, ಪಿಡಿಒಗಳು, ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು ಇದ್ದರು.