ಭೈರನತ್ತ ಗ್ರಾಮದ ಹೊಸ ಬಡಾವಣೆಯಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಮಹಿಳೆಯರು ಪ್ರತಿಭಟನೆ ನಡೆಸಿದರು. ಬೋರಮ್ಮ, ರಾಜಮ್ಮ, ವಿಶಾಲಾಕ್ಷಿ, ಪುಟ್ಟದೇವಮ್ಮ ಇತರರಿದ್ದರು 
ರಾಜ್ಯ

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಹೊಸ ಬಡಾವಣೆಯಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ
  • ಭೈರನತ್ತ ಗ್ರಾಮ

ಹನೂರು:

ಹೊಸ ಬಡಾವಣೆಯಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಬುಧವಾರ ತಾಲೂಕಿನ ಭೈರನತ್ತ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದರು.

ಈ ವೇಳೆ ನಿವಾಸಿಗಳಾದ ರಾಜಮ್ಮ, ಬೋರಮ್ಮ ಹಾಗೂ ವಿಶಾಲಾಕ್ಷಿ ಅವರು ಖಾಲಿ ಬಿಂದಿಗೆ ಪ್ರದರ್ಶಿಸಿ ಮಾತನಾಡಿ, ಬಡಾವಣೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳಿವೆ. ಕಳೆದ 7 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಇದೀಗ ತೀವ್ರವಾಗಿದೆ. ನಲ್ಲಿ ಹಾಗೂ ತೊಂಬೆಗಳಿಗೆ ನೀರು ಪೂರೈಕೆಯಾಗದ ಪರಿಣಾಮ ಮುಖ್ಯ ಕೊಳವೆಯೊಂದರಲ್ಲಿ ರಾತ್ರಿ ವೇಳೆ ನೀರು ಬಿಡಲಾಗುತ್ತಿದ್ದು, ನಿದ್ರೆಗೆಟ್ಟು ಕಾದು ನಿಂತರೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಟ್ಯಾಂಕರ್ ಮೂಲಕ ಪೂರೈಕೆಯಾಗುತ್ತಿರುವ ನೀರು ಜನಸಂಖ್ಯೆಗೆ ಅನುಗುಣವಾಗಿ ಸಾಲುತ್ತಿಲ್ಲ. ಕುಡಿಯಲು ಯೋಗ್ಯವಾಗಿಲ್ಲ.
ಇತ್ತ ಜಮೀನಿಗೆ ಅಲೆದಾಟ ನಡೆಸಿದರೂ ಪಂಪ್‌ಸೆಟ್‌ನಿಂದಲೂ ನೀರು ಸಿಗುತ್ತಿಲ್ಲ. ಇದರಿಂದ ಬಡಾವಣೆಯಲ್ಲಿ ನೀರಿನದ್ದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬಿಂದಿಗೆ ನೀರಿಗೂ ಪಡುಬಾರದ ಕಷ್ಟ ಪಡುತ್ತಿದ್ದೇವೆ. ಜಾನುವಾರುಗಳಿಗೂ ನೀರಿನ ಸಮಸ್ಯೆ ಎದುರಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬಿಂದಿಗೆ ಹಿಡಿದು ಬೀದಿಯಲ್ಲಿ ನಿಲ್ಲುವಂತಹ ಸ್ಥಿತಿ ಎದುರಾಗಿದೆ. ಆದ್ದರಿಂದ ಶಾಸಕರು ಇತ್ತ ಗಮನಹರಿಸಿ ಬೋರ್ ಕೊರೆಸುವ ಮೂಲಕ ಬಡಾವಣೆಯಲ್ಲಿ ತಲೆದೋರಿರುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು.
ನಿವಾಸಿಗಳಾದ ನಂಜಮಣಿ, ರತ್ನಮ್ಮ, ಗುರುಮಲ್ಲಮ್ಮ, ಅನ್ನಪೂರ್ಣ, ಪುಟ್ಟದೇವಮ್ಮ, ಪಾರ್ವತಮ್ಮ ಇತರರಿದ್ದರು.
ಈ ಸಂಬಂಧ ಪಿಡಿಒ ರಾಮು ವಿಜಯವಾಣಿಯೊಂದಿಗೆ ಮಾತನಾಡಿ, ಮುಖ್ಯ ಕೊಳವೆ ಹಾಗೂ ಟ್ಯಾಂಕರ್ ಮೂಲಕ ಬಡಾವಣೆಯ ಜನರಿಗೆ ನೀರು ಪೂರೈಸಲಾಗುತ್ತಿದೆ. ಆದರೆ ಸಾಲುತ್ತಿಲ್ಲ. 3 ಬೋರ್ ಕೊರೆಯಿಸಿದರೂ ಅಂತರ್ಜಲ ಮಟ್ಟ ಕುಸಿತದಿಂದ ವಿಫಲವಾಗಿದೆ. ಸದ್ಯ ರೀ ಬೋರ್ ಮಾಡಿರುವ ಕೊಳವೆಗೆ 6 ಪೈಪ್ ಬಿಡಿಸಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.