ಅರೆಕಡುವಿನ ದೊಡ್ಡಿಯಲ್ಲಿ ಮಹಿಳೆಯರು ಬೈಲೂರು ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಸಿದರು. 
ರಾಜ್ಯ

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ
  • ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಡುವಿನ ದೊಡ್ಡಿ ಮಹಿಳೆಯರು
ಹನೂರು: ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ತಾಲೂಕಿನ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಡುವಿನ ದೊಡ್ಡಿ ಮಹಿಳೆಯರು ಬುಧವಾರ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಹೆಚ್ಚು ಬಡ ಕುಟುಂಬಗಳಿದ್ದು, ಕೂಲಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ ತೊಂಬೆಗಳಿಗೆ ಸಮರ್ಪಕ ನೀರು ಪೂರೈಸದ ಪರಿಣಾಮ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇದರಿಂದ ಒಂದು ಬಿಂದಿಗೆ ನೀರಿಗೂ ಸಹ ಕಷ್ಟ ಪಡಬೇಕಾದ ಸ್ಥಿತಿ ಇದೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳ ಗಮನಕ್ಕೂ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತು ಗ್ರಾಪಂಗೆ ಆಗಮಿಸಿದ್ದೇವೆ. ಆದ್ದರಿಂದ ಕೂಡಲೇ ಗಮನಹರಿಸಿ ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಪಿಡಿಒ ಶಿವಣ್ಣ ಅವರು ರಜೆ ಇದ್ದ ಕಾರಣ ೆನ್ ಮೂಲಕ ಮಾತನಾಡಿ, ಗ್ರಾಮದಲ್ಲಿ ಅಂತರ್ಜಲ ಮಟ್ಟ ಕುಸಿದಿರುವ ಕಾರಣ ನೀರಿನ ಸಮಸ್ಯೆಯಾಗಿದೆ. ರೀ ಬೋರ್ ಕೊರೆಸಲು ಈಗಾಗಲೇ ತಾಪಂ ಇಒ ಅವರ ಗಮನಕ್ಕೆ ತರಲಾಗಿದ್ದು, ಅಗತ್ಯ ಕ್ರಮವಹಿಸಲಾಗಿದೆ. ಅಲ್ಲಿಯ ತನಕ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಅಂತ್ಯವಾಯಿತು.
ಇದೇ ಗ್ರಾಪಂ ವ್ಯಾಪ್ತಿಯ ಅರ್ಧನಾರಿಪುರ ಸೋಲಿಗರ ಗ್ರಾಮದಲ್ಲಿ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಸಮಸ್ಯೆ ಬಗೆಹರಿಸುವಂತೆ ಬುಧವಾರ ಗ್ರಾಮದ ಮಹಿಳೆಯರು ಒತ್ತಾಯಿಸಿದರು.
ಗ್ರಾಮದ ಮಾದಮ್ಮ ಮಾತನಾಡಿ, ತೊಂಬೆಗಳಿಗೆ ಕಳೆದ ಒಂದು ತಿಂಗಳಿನಿಂದಲೂ ಸಮರ್ಪಕವಾಗಿ ಕುಡಿಯುವ ನೀರು ಬಿಡುತ್ತಿಲ್ಲ. ಇದರಿಂದ ನೀರಿಗೆ ತೀವ್ರ ಸಮಸ್ಯೆಯಾಗಿದೆ. ಪ್ರತಿ ಮನೆಯವರು 300 ರೂ. ನೀಡಿ ಟ್ಯಾಂಕರ್ ಮೂಲಕ ನೀರನ್ನು ಪಡೆಯುತ್ತಿದ್ದಾರೆ. ಇತ್ತ ಸ್ನಾನ ಮಾಡಬೇಕಾದರೆ ಸಮೀಪದ ಹಳ್ಳಕ್ಕೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಗ್ರಾಪಂಗೆ ಹಲವು ಬಾರಿ ತಿಳಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕುಡಿವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು.