ರಾಜ್ಯ

ಮದರಿ ಗ್ರಾಮಕ್ಕೆ ಸೋಲಾರ್​ ಘಟಕ ಸ್ಥಳಾಂತರ

ಕಲಬುರಗಿ: ನದಿಸಿನ್ನೂರ್​ ಮತ್ತು ಕಿರಣಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ 100 ಮೆಗಾ ವ್ಯಾಟ್​ ಸಾಮರ್ಥ್ಯದ ಸೌರ ಘಟಕವನ್ನು ಜೇವರ್ಗಿ ತಾಲೂಕಿನ ಮದರಿ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್​ ಹೇಳಿದರು. ಅಧಿವೇಶನದಲ್ಲಿ ವಿಧಾನ ಪರಿಷತ್​ ಸದಸ್ಯ ಸುನೀಲ್​ ವಲ್ಲಾಪುರೆ ಅವರ ಪ್ರಶ್ನೆಗೆ ಉತ್ತರಿಸಿ, ಮದರಿ ಗ್ರಾಮದಲ್ಲಿ ಖಾಸಗಿ ಜಮೀನು ಗುರುತಿಸಲಾಗಿದ್ದು, ಈ ಜಮೀನು ಸೋಲಾರ್​ ಘಟಕ ಸ್ಥಾಪನೆಗೆ ಗುತ್ತಿಗೆಗೆ ನೀಡಲು ಜಮೀನು ಮಾಲಿಕರು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಸೋಲಾರ್​ ಯೋಜನೆಗೆ ಭೂ ಮಾಲೀಕರಿಂದ ಒಪ್ಪಿಗೆ ಪತ್ರ ಪಡೆದ ನಂತರ ಜಿಲ್ಲಾಧಿಕಾರಿಗಳು ನಿಗದಿಪಡಿಸುವ ಗುತ್ತಿಗೆ ದರದ ಆಧಾರದ ಮೇಲೆ ಕೆಆರ್​ಇಡಿಎಲ್​ ಸಂಸ್ಥೆ ಭೂ ಮಾಲೀಕರಿಂದ ಜಮೀನು ಗುತ್ತಿಗೆ ಪಡೆದು ಜೆಎಸ್​ಡಬ್ಲೂ ನಿಯೋ ಎನರ್ಜಿ ಲಿಮಿಟೆಡ್​ ಸಂಸ್ಥೆಗೆ ಉಪ ಗುತ್ತಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು. ನದಿಸಿನ್ನೂರ್​, ಕಿರಣಗಿ ಗ್ರಾಮಗಳ ವ್ಯಾಪ್ತಿಯ ಸೋಲಾರ್​ ಘಟಕ ಸ್ಥಾಪನೆ ಪ್ರಸ್ತಾಪಿತ ಸ್ಥಳದಿಂದ 3 ಕಿ.ಮೀ ಅಂತರದಲ್ಲಿ ಸಿಮೆಂಟ್​ ಕಾರ್ಖಾನೆಗಳು ಸ್ಥಾಪನೆಯಾಗುತ್ತಿರುವುದರಿಂದ ಈ ಸ್ಥಳದಲ್ಲಿ ಸೋಲಾರ್​ ಘಟಕ ಸ್ಥಾಪಿಸುವುದು ತಾಂತ್ರಿಕವಾಗಿ ಕಾರ್ಯಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಯೋಜನೆ ಸ್ಥಳ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.