ವಿಧಾನಸೌಧ 
ರಾಜ್ಯ

ವಿದ್ಯಾರ್ಥಿ ನಿಲಯಕ್ಕೆ ಸೋಲಾರ್ ವಿದ್ಯುತ್

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಇರುವ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯುತ್ ಬಿಲ್ ಉಳಿಸಲು ಸೌರ ವಿದ್ಯುತ್ ಮೊರೆ ಹೋಗುತ್ತಿದೆ. ಇದರಿಂದ ಪ್ರತಿ ತಿಂಗಳು 82 ಲಕ್ಷ ರೂ. ಇಲಾಖೆಗೆ ಉಳಿತಾಯವಾಗಲಿದೆ.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 2659 ವಿದ್ಯಾರ್ಥಿ ನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಈ ನಿಲಯಗಳಲ್ಲಿ 2,50,641 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರಸ್ತುತ 1644 ವಿದ್ಯಾರ್ಥಿ ನಿಲಯಗಳು ಸ್ವಂತ ಕಟ್ಟಡಗಳಲ್ಲಿ 1,015 ನಿಲಯಗಳು ಬಾಡಿಗೆ ಮತ್ತು ಉಚಿತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸ್ವಂತ ಕಟ್ಟಡಗಳಲ್ಲಿ ವಿದ್ಯಾರ್ಥಿ ನಿಲಯಗಳಿಗೆ ಮಾಸಿಕ ಅಂದಾಜು 2.75 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸಲಾಗುತ್ತಿದೆ.
ಈ ಕಟ್ಟಡಗಳಲ್ಲಿ ಶೀಟ್ ರೂಫಿಂಗ್ ನೊಂದಿಗೆ ಸೋಲಾರ್ ಪ್ಯಾನಲ್‌ಗಳನ್ನು ರೆಸ್ಕೋ ಮಾದರಿಯಲ್ಲಿ ಅಳವಡಿಸಿದ್ದಲ್ಲಿ ವಿದ್ಯುತ್ ದರದಲ್ಲಿ ಶೇ.30 ಅಂದರೆ 82 ಲಕ್ಷ ಕೋಟಿ ವಿದ್ಯುತ್ ಬಿಲ್ ವೆಚ್ಚ ಕಡಿಮೆ ಆಗಲಿದೆ. ಆದರಿಂದ ಈ ಯೋಜನೆಯನ್ನು ವಿದ್ಯಾರ್ಥಿ ನಿಲಯಗಳಲ್ಲಿ ಅಳವಡಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿ ನಿಲಯಗಳ ಮೇಲೆ ಖಾಸಗಿಯವರಿಗೆ ಸ್ಥಳವನ್ನು ಸರ್ಕಾರ ಉಚಿತವಾಗಿ ನೀಡಲಿದೆ. ಆ ಜಾಗದಲ್ಲಿ ಗುತ್ತಿಗೆ ಕಂಪನಿ ಸೋಲಾರ್ ಪ್ಯಾನಲ್ ಅಳವಡಿಸಿಕೊಂಡು ಆ ಹಾಸ್ಟೆಲ್‌ಗೆ ಅಗತ್ಯ ಇರುವ ವಿದ್ಯುತ್‌ನ್ನು ಉಚಿತವಾಗಿ ನೀಡಬೇಕು. ಹೆಚ್ಚುವರಿ ವಿದ್ಯುತ್ ಉತ್ಪಾದನೆಯನ್ನು ಗುತ್ತಿಗೆ ಕಂಪನಿ ಮಾರಾಟ ಮಾಡಿಕೊಳ್ಳಬಹುದು. ಇದರಲ್ಲಿ ಸರ್ಕಾರದಿಂದ ಯಾವುದೇ ಬಂಡವಾಳ ಹೂಡಿಕೆ ಮಾಡುವುದಿಲ್ಲ. ಇದರಿಂದ ಇಲಾಖೆಗೆ 82 ಲಕ್ಷ ರೂ. ವಿದ್ಯುತ್ ಬಿಲ್ ಉಳಿತಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.