- ಡ್ರಗ್ಸ್ ವಿರೋಧಿ ದಿನಾಚರಣೆ ನಿಮಿತ್ತ ಸಂವಾದ
- ಕೋರ್ಟ್‌ನಲ್ಲಿ ಎನ್‌ಡಿಪಿಎಸ್ 12 ಸಾವಿರ ಪ್ರಕರಣ ಬಾಕಿ
ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಹಾವಳಿ ತಡೆಗಟ್ಟಲು ಪೊಲೀಸ್ ಇಲಾಖೆವೊಂದರಿಂದ ಸಾಧ್ಯವಿಲ್ಲ, ಸಾರ್ವಜನಿಕರ ಪಾತ್ರ ಬಹಳ ಮುಖ್ಯವಾಗಿದೆ. ಬೆಂಗಳೂರಿನ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಹೈಡ್ರೋಗಾಂಜಾ ಬೆಳೆಯುತ್ತಿದ್ದಾರೆ. ಇದರ ಮಾಹಿತಿ ಪೊಲೀಸರಿಗೆ ಸಿಗುವುದು ಕಷ್ಟಸಾಧ್ಯ. ಆದ್ದರಿಂದ ಜನಸಾಮಾನ್ಯರ ಸಹಕಾರ ಅತ್ಯಗತ್ಯವಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಎಎನ್‌ಟಿಎ್ ಎಡಿಜಿಪಿ ಆರ್.ಹಿತೇಂದ್ರ ತಮ್ಮಅಭಿಪ್ರಾಯ ವ್ಯಕ್ತಪಡಿಸಿದರು.
ಡ್ರಗ್ಸ್ ವಿರೋಧಿ ದಿನಾಚರಣೆ ನಿಮಿತ್ತ ‘ವಿಜಯವಾಣಿ’ ಕಚೇರಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾದಕ ವಸ್ತು ಮಾರಾಟ ಸಾಗಣೆ ಕರ್ನಾಟಕ ರಾಜ್ಯವೊಂದೆ ಅಲ್ಲ, ಹಲವು ದೇಶ, ರಾಜ್ಯಗಳಲ್ಲಿ ಈ ದಂಧೆ ನಡೆಯುತ್ತಿದೆ. ಆದರೆ, ಇತ್ತೀಚೆಗೆ ಡ್ರಗ್ಸ್ ವ್ಯಸನಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಾ ಹೋಗುತ್ತಿದೆ.
ನಿಷೇಧಿತ ಮಾದಕ ವಸ್ತು ಕಡಿವಾಣಕ್ಕೆ ಪೊಲೀಸ್ ಇಲಾಖೆ ಜತೆಗೆ ಶಿಕ್ಷಣ, ಆರೋಗ್ಯ, ವೈದ್ಯಕೀಯ ಶಿಕ್ಷಣ, ಖಾಸಗಿ ಕಂಪನಿ, ಕಾರ್ಖಾನೆಗಳು ಕೈ ಜೋಡಿಸಿದಾಗ ಮಾತ್ರ ಡ್ರಗ್ಸ್ ವ್ಯಸನ ಮುಕ್ತ ರಾಜ್ಯವನ್ನಾಗಿಸಲು ಸಾಧ್ಯವಿದೆ.
ನಗರಮಟ್ಟದಲ್ಲಿ ಸೀಮಿತವಾಗಿದ್ದ ಡ್ರಗ್ಸ್ ಈಗ ಗ್ರಾಮೀಣ ಪ್ರದೇಶದವರೆಗೂ ವಿಸ್ತರಣೆಗೊಂಡಿದೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ದೊಡ್ಡ ಮಟ್ಟದ ಅಧ್ಯಯನ ಸರ್ಕಾರ ಮಟ್ಟದಲ್ಲಿ ನಡೆಯಬೇಕು. ಯಾವ ಕಾರಣಕ್ಕೆ ಯುವಕರು, ವಿದ್ಯಾರ್ಥಿಗಳು ಮಾದಕ ವಸ್ತು ವ್ಯವಸನಿಗಳಾಗುತ್ತಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಸರ್ವೇ ನಡೆಯಬೇಕಾಗಿರುವುದು ಅವಶ್ಯಕತೆ ಇದೆ.
ಡ್ರಗ್ಸ್ ಪೂರೈಕೆ ಹಾಗೂ ಮೌಲ್ಯ ಕಡಿಮೆಗೆ ಕ್ರಮ:
ದೇಶ, ವಿದೇಶಗಳಲ್ಲಿ ಉತ್ಪಾದನೆ ಮಾಡಲಾಗುತ್ತಿರುವ ಗಾಂಜಾ, ಎಂಡಿಎಂಎ, ಎಕ್ಸ್‌ಟ್ಟಸ್ಸಿ ಪೀಲ್ಸ್ ಸೇರಿ ಸಿಂಥೆಟಿಕ್ಸ್ ಡ್ರಗ್ಸ್ ಪೂರೈಕೆ ಹಾಗೂ ಅದರ ಮೌಲ್ಯವನ್ನು ಕಡಿಮೆ ಮಾಡಬೇಕಾಗಿದೆ. ಅದಕ್ಕಾಗಿ ಸಾರ್ವಜನಿಕವಾಗಿ ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಕಳೆದ ಒಂದೇರಡು ವರ್ಷದಲ್ಲಿ ರಾಜ್ಯದ ವಿವಿಧ ಶಾಲಾ-ಕಾಲೇಜು, ಮೆಡಿಕಲ್ ವಿದ್ಯಾರ್ಥಿಗಳು ಒಳಗೊಂಡಂತೆ 5 ಲಕ್ಷ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸೇವನೆಯಿಂದಾಗುವ ದುಷ್ಪರಿಣಾಮ, ಕೌಟುಂಬಿಕವಾಗಿ ಮತ್ತು ಶಾರೀರಿಕ ಪರಿಣಾಮಗಳ ಬಗ್ಗೆ ಜಾಗೃತಿ ಅಭಿಯಾನ ನಡೆಸಲಾಗಿದೆ.
ಆನ್‌ಲೈನ್, ವಿದೇಶಿ ಕೋರಿಯರ್, ಅಂಚೆ ಇಲಾಖೆ ಮೂಲಕ ಬರುತ್ತಿರುವ ವಸ್ತುಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಏರ್‌ಪೋರ್ಟ್‌ಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಿರಂತರ ತಪಾಸಣೆ ಕಾರ್ಯದಲ್ಲಿ ತೋಡಗಿದ್ದಾರೆ. ಕೆಲವು ಬಾರಿ ಒಂದೆ ಸಮಯದಲ್ಲಿ ವಿದೇಶಿ ಕೋರಿಯರ್‌ಗಳು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಕೆಲವು ಬಾಕ್ಸ್, ಪಾರ್ಸೆಲ್ ವಸ್ತುಗಳು ತಪಾಸಣೆ ಮಾಡಲಾಗುವುದಿಲ್ಲ. ಅಧಿಕಾರಿಗಳ ಕಣ್ಣು ತಪ್ಪಿ ಹೋಗುತ್ತಿವೆ. ಇನ್ನೂ ಕೆಲವು ಕೋರಿಯರ್‌ಗಳು ಅನಾಮಧೇಯ, ವಿಳಾಸವಿಲ್ಲದವರ ಹೆಸರಿನಲ್ಲಿ ಬರುತ್ತಿವೆ. ಅವುಗಳನ್ನು ದಂಧೆಕೋರರು ತಡವಾಗಿ ಬಂದು ಸ್ವೀಕರಿಸಿಕೊಂಡು ಹೋಗುತ್ತಿರುವ ಸಂಗತಿಗಳು ನಡೆಯುತ್ತಿವೆ.
ಬೆಂಗಳೂರಲ್ಲೇ ಹೆಚ್ಚು ಡ್ರಗ್ಸ್ ದಂಧೆ ಯಾಕೆ?:
ರಾಜಧಾನಿ ಬೆಂಗಳೂರು ನಗರದಲ್ಲಿ ಡ್ರಗ್ಸ್ ಖರೀದಿ ಮಾಡುವವರ ಸಂಖ್ಯೆ ಹೆಚ್ಚಿದೆ. ಹಲವು ರಾಜ್ಯಗಳಿಂದ ಉದ್ಯೋಗ, ವ್ಯಾಪಾರ-ವಹಿವಾಟು, ಕಾರ್ಮಿಕರು, ಉದ್ಯಮಿಗಳ ಸಂಖ್ಯೆ ಹೆಚ್ಚಿದೆ. ಆರ್ಥಿಕವಾಗಿ ಸಬಲರಾಗಿರುವವರು ಮತ್ತು ವಿದೇಶಿ ವಹಿವಾಟು ಹೆಚ್ಚಾಗಿ ಇಲ್ಲಿ ನಡೆಯುತ್ತದೆ. ಎಲ್ಲದರ ಜತೆಗೆ ಕೋಟ್ಯಂತರ ಜನಸಂಖ್ಯೆ ಹೊಂದಿರುವ ಮಹಾನಗರವಾಗಿದೆ. ಲಾಜಿಸ್ಟಿಕ್ ವ್ಯವಸ್ಥೆ ಉತ್ತಮವಾಗಿರುವ ಪರಿಣಾಮ ಡ್ರಗ್ಸ್ ಮಾರಾಟ ಮತ್ತು ಪೂರೈಕೆ ಹೆಚ್ಚಿದೆ.
ಬೆಂಗಳೂರು ಹೊರತು ಪಡಿಸಿದರೆ ಎರಡನೇ ನಗರ ಮಂಗಳೂರಾಗಿದೆ. ಮಂಗಳೂರಿನಲ್ಲೂ ಡ್ರಗ್ಸ್ ಮಾರಾಟ ಸಂಧೆ ಜೋರಾಗಿದೆ. ಆರ್ಥಿಕವಾಗಿ, ಭೌಗೊಳಿಕವಾಗಿ ಯಾವ ನಗರ ಅಭಿವೃದ್ಧಿ ಹೊಂದಿವೆ ಅಲ್ಲಿ ಮಾದಕ ಚಟುವಟಿಕೆ ಹೆಚ್ಚಳಾಗುತ್ತಿದೆ.
15-20 ರೂ.ಪ್ಯಾಕೇಟ್‌ನಲ್ಲಿ ಡ್ರಗ್ಸ್ ಮಾರಾಟ:
ಉತ್ತರ ಕರ್ನಾಟಕದ ಬೆಳಗಾವಿ, ರಾಯಚೂರು, ಬೀದರ್, ಕಲಬುರಗಿ ಭಾಗದಲ್ಲಿ 15- 20 ರೂಪಾಯಿಗೆ ಪ್ಯಾಕೆಟ್ ಗಾಂಜಾ ಲಭ್ಯವಾಗುತ್ತದೆ. ಇಷ್ಟೊಂದು ಕಡಿಮೆ ಬೆಲೆಗೆ ಗಾಂಜಾ ದೊರೆಯುತ್ತಿರುವ ಪರಿಣಾಮ ಬಹುತೇಕರು ಇದರ ವ್ಯಸನಿಗಳಾಗುತ್ತಿದ್ದಾರೆ. ಮಲೇನಾಡು, ಕರಾವಳಿ ಭಾಗದ ಅರಣ್ಯ ಪ್ರದೇಶದಲ್ಲಿ ಗಾಂಜಾವನ್ನು ಬೆಳೆಯಲಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಅಲ್ಲದೇ ಡ್ರೋನ್ ಮೂಲಕ ಸರ್ವೆಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ. ಕೆಲ ಪ್ರದೇಶಗಳಲ್ಲಿ ಎಕರೆ ಗಟ್ಟಲೇ ಜಾಗದಲ್ಲಿ ಗಾಂಜಾವನ್ನು ಹೆರಳವಾಗಿ ಬೆಳೆಯಲಾಗುತ್ತಿದೆ.
ನಾರ್ಕೋಟಿಕ್ಸ್ ಪಡೆಗೆ ಪೊಲೀಸ್ ಪವರ್ ಅವಶ್ಯಕತೆ:
ರಾಜ್ಯದಲ್ಲಿ ಮಾದಕ ವಸ್ತು ಚಟುವಟಿಕೆ ನಿಯಂತ್ರಣಕ್ಕೆ ANTF ಕಾರ್ಯಪಡೆ ರಚನೆ ಮಾಡಲಾಗಿದೆ. ಇತ್ತೀಚೆಗೆ ರಚನೆ ಮಾಡಿರುವ ನಿಗ್ರಹ ಪಡೆ ಇನ್ನೂ ಮುಂದೆ ತನ್ನ ಕಾರ್ಯಾಚರಣೆ ಚುರುಕುಗೊಳಿಸಲಿದೆ. ಅಲ್ಲದೇ ಈ ಪಡೆಗೆ ಪೊಲೀಸ್ ಇಲಾಖೆಗೆ ನೀಡಿರುವ ಸೌಲಭ್ಯವನ್ನು ಸರ್ಕಾರ ಒದಗಿಸಬೇಕು. ಅಕ್ರಮ ಚಟುವಟಿಕೆ, ಆರೋಪಿಗಳ ವಿರುದ್ಧ ಸ್ವಯಂಕೃತ ಎ್ಐಆರ್ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವ ಪವರ್ ನೀಡಬೇಕು. ಶೇ. 20 ರಷ್ಟು ಸಿಬ್ಬಂದಿ ಕೊರತೆ ಇದ್ದರು ಡ್ರಗ್ಸ್ ಪ್ರಕರಣದಲ್ಲಿ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಎಡಿಜಿಪಿ ಆರ್.ಹಿತೇಂದ್ರ ಹೇಳಿದರು.
ಎನ್‌ಡಿಪಿಎಸ್ ಪ್ರಕರಣಕ್ಕಾಗಿ ಪ್ರತ್ಯೇಕ ನ್ಯಾಯಾಲಕ್ಕೆ ಪ್ರಸ್ತಾವನೆ:
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿರುವ ಎನ್‌ಡಿಪಿಎಲ್ ಕಾಯ್ದೆಯಡಿ ದಾಖಲಾಗಿರುವ ಸುಮಾರು 12 ಸಾವಿರ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ. ಅವುಗಳನ್ನು ಸಕಾಲದಲ್ಲಿ ವಿಲೇವಾರಿ ನಡೆಸಲು ಪ್ರತ್ಯೇಕ ನ್ಯಾಯಾಲಯ ರಚನೆಯಾಗಬೇಕಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಂಗಳೂರಿನಲ್ಲಿ-2, ಮಂಗಳೂರು, ಗುಲಬರ್ಗಾ, ಬೆಳಗಾವಿ ಜಿಲ್ಲೆಯಲ್ಲಿ ತಲಾ ಒಂದು ಪ್ರತ್ಯೇಕ ಕೋರ್ಟ್ ರಚನೆಯಾಗಬೇಕಿದೆ.
ವಿದೇಶಿ ಡ್ರಗ್ಸ್ ಸೇರಿ ಸ್ಥಳೀಯ ಮಟ್ಟದಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿರುವ ಬಗ್ಗೆ 2023ರಲ್ಲಿ 6,767 ಪ್ರಕರಣ ದಾಖಲಾಗಿವೆ. 3,900 ಮಂದಿಯನ್ನು ಬಂಧಿಸಲಾಗಿದೆ. 2024ರಲ್ಲಿ 4100 ಪ್ರಕರಣ, 2000 ಮಂದಿ ಬಂಧನ, 2025ರಲ್ಲಿ 6800 ಪ್ರಕರಣ, 2500 ಮಂದಿ ಬಂಧನ ಮಾಡಲಾಗಿದೆ. ಪ್ರಸಕ್ತ 2026ರ ಮೇ ವರೆಗೆ 5000 ಪ್ರಕರಣ ದಾಖಲಾಗಿದ್ದು, 720 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ನೋಯ್ಡ, ರಾಜಸ್ಥಾನ, ಒಡಿಶಾದಿಂದ ಹೆಚ್ಚು ಗಾಂಜಾ ಸಾಗಣೆ
ಎನ್‌ಸಿಬಿ ವರದಿ ಪ್ರಕಾರ ರಾಜ್ಯಕ್ಕೆ ನೋಯ್ಡ, ರಾಜಸ್ಥಾನ, ಹರಿಯಾಣ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳಿಂದ ಹೆಚ್ಚು ಗಾಂಜಾ ಪೂರೈಕೆಯಾಗುತ್ತಿದೆ. ದಾಳಿ ವೇಳೆ ವಶಕ್ಕೆ ಪಡೆದ ಆರೋಪಿಗಳ ಮಾಹಿತಿ ತಕ್ಷಣ ಆಯಾ ರಾಜ್ಯದಿಂದ ಗಾಂಜಾ ಪೂರೈಕೆ ಮಾಡುತ್ತಿರುವವರಿಗೆ ತಲುಪತ್ತಿದೆ. ಕೆಲ ಆರೋಪಿಗಳನ್ನು ಪರಿಯಾಪಟ್ಟಣ, ಮೈಸೂರು ಭಾಗದಲ್ಲಿ ಬಂಧಿಸಿ ತನಿಖೆ ಕೈಗೊಳ್ಳಲಾಗಿತ್ತು. ಆಗ ಈ ವಿಷಯ ಬೆಳಕಿಗೆ ಬಂದಿದೆ.
ಜಿಹಾದಿ ಡ್ರಗ್ಸ್ ಸಾಗಣೆ!
ಶ್ರೀಲಂಕಾ ಮೂಲಕ ದೇಶದ ಒಳಗೆ ಜಿಹಾದಿ ಹೆಸರಿನ ಡ್ರಗ್ಸ್ ಪೂರೈಕೆಯಾಗುತ್ತಿದೆ ಎಂಬ ಆರೋಪವಿದೆ. ಶ್ರೀಲಂಕಾದ ಮೂಲಕ ಗಡಿ ಪ್ರದೇಶದ ರಾಜ್ಯಕ್ಕೆ ಹೆರಾಯಿನ್ ಬರುತ್ತಿದೆ. ಚೆನ್ನೈ, ದಕ್ಷಿಣ ಭಾರತದ ಕೆಲ ರಾಜ್ಯಗಳಿಂದ ದೇಶದ ವಿವಿಧ ಕಡೆ ಹೆರಾಯಿನ್ ಬರುತ್ತಿದೆ. ಕರ್ನಾಟಕ ಸೇರಿ ಕೋಸ್ಟಲ್ ರಾಜ್ಯಗಳಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಆನ್‌ಲೈನ್, ಸಾಮಾಜಿಕ ಜಾಲತಾನ, ಟೆಲಿಗ್ರಾಂ, ಮೇಸೆಂಜರ್ ಮೂಲಕ ಈ ದಂಧೆ ನಡೆಯುತ್ತಿದೆ. ಟೆಲಿಗ್ರಾಂ ಹೆಸರಿನಲ್ಲಿ 100ಕ್ಕೂ ಹೆಚ್ಚು ಜಾಲತಾಣಗಳು ಕಾರ್ಯನಿರ್ವಹಿಸುತ್ತಿದೆ. ಇವುಗಳ ಬಗ್ಗೆ ಕೇಂದ್ರ ಸರ್ಕಾರವೇ ಗಮನ ಹರಿಸಬೇಕಿದೆ.