ಯಾದಗಿರಿಯಲ್ಲಿ ಗುರುವಾರ ಹಮ್ಮಿಕೊಂಡ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಉದ್ಘಾಟಿಸಿದರು. ಎಂಎಲ್ಸಿ ಜಗದೇವ ಗುತ್ತೇದಾರ್, ಸೋಲೂರು ಮಠದ ಶ್ರೀ ವಿಖ್ಯಾತನಂದ ಸ್ವಾಮೀಜಿ, ಮಂಜುನಾಥ ಪೂಜಾರಿ ಇತರರಿದ್ದರು. 
ರಾಜ್ಯ

ಸಮಾಜ ಸುಧಾರಕ ನಾರಾಯಣಗುರು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ಪಾಟೀಲï ತುನ್ನೂರ ಬಣ್ಣನೆ
  • ಯಾದಗಿರಿಯಲ್ಲಿ ಜಯಂತಿ ಕಾರ್ಯಕ್ರಮ
ಯಾದಗಿರಿ: ಬ್ರಹ್ಮಶ್ರೀ ನಾರಾಯಣಗುರುಗಳು ಮಹಾನ್ ಸಂತ, ದಾರ್ಶನಿಕ ಹಾಗೂ ಸಮಾಜ ಸುಧಾರಕರಾಗಿದ್ದರು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.
ನಗರದ ಪದವಿ ಮಹಾ ವಿದ್ಯಾಲಯದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಸಮಿತಿ ಹಾಗೂ ವಿವಿಧ ಇಲಾಖೆ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಕೇರಳ ರಾಜ್ಯದ ಜಂಬಜಾತಿ ಎಂಬ ಗ್ರಾಮದಲ್ಲಿ ಜನಸಿದ ನಾರಾಯಣಗುರುಗಳು, ಸಮಾಜ ಸುಧಾರಣೆಯಲ್ಲಿ ಶ್ರಮಿಸಿದ್ದಾರೆ ಎಂದರು.
ಒಂದೇ ಜಾತಿ, ಮತ, ದೇವರು ಮಾನವನಿಗೆ ಎಂಬುದು ಅವರ ಪ್ರಸಿದ್ಧ ಸಂದೇಶವಾಗಿತ್ತು. ೧೮೮೮ರಲ್ಲಿ ಅರುವಿಪ್ಪುರಂನಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಕೆಳ ವರ್ಗದವರೂ ದೇವಸ್ಥಾನ ಪ್ರವೇಶಿಸಬಹುದು ಮತ್ತು ಪೂಜೆ ಮಾಡಬಹುದು ಎಂಬುದು ಸಾರಿದ್ದಾರೆ ಎಂದರು.
ಸಮಾಜದ ಉದ್ಧಾರಕ್ಕಾಗಿ ಶ್ರೀ ನಾರಾಯಣ ಗುರುಗಳು ಹಗಲಿರುಳು ಶ್ರಮಿಸಿದ್ದರು. ಶಿಕ್ಷಣದ ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಶಾಲಿಯಾಗಿರಿ ಎಂದು ಜನರಿಗೆ ಬೋದಿಸಿ ಮಹಾನ್ ವ್ಯಕ್ತಿ ಎಂದು ತಿಳಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಜಗತ್ತಿನ ಶ್ರೇಷ್ಠ ದಾರ್ಶನಿಕರಲ್ಲಿ ನಾರಾಯಣಗುರು ಒಬ್ಬರು. ಸಮಾನತೆ, ಮಹಿಳಾ ಸಬಲೀಕರಣಕ್ಕೆ ಅಂದಿನ ಕಾಲದಲ್ಲಿಯೇ ಶ್ರಮಿಸಿದ್ದರು ಎಂದರು.
ವಿಧಾನಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರು ಮಾನವರೆಲ್ಲ ಒಂದೇ ಎಂಬ ಸಂದೇಶ ಸಾರಿದ್ದರು. ಮೂಢನಂಬಿಕೆ, ಕಂದಾಚಾರದ ವಿರುದ್ಧ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಿದ್ದರು. ಅವರ ಆದರ್ಶ ನಾವು ಮೈಗೂಡಿಸಿಕೊಳ್ಳಬೇಕು ಎಂದರು.
ಡಾ.ಸುಭಾಷಚAದ್ರ ಕೌಲಗಿ ವಿಶೇಷ ಉಪನ್ಯಾಸ ನೀಡಿದರು. ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಸೋಲೂರು ಸಂಸ್ಥಾನದ ಮಠ ಸ್ವಾಮಿಜಿ ವಿಖ್ಯಾತನಂದ ಸ್ವಾಮೀಜಿ, ಸುಮಾರು ೧೦೦ ವರ್ಷಗಳ ಹಿಂದೆ, ಬ್ರಹ್ಮಶ್ರೀ ನಾರಾಯಾಣ ಗುರುಗಳು ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಅವರ ಬದುಕು, ಕ್ರಾಂತಿಕಾರಿ ವಿಚಾರಗಳು ಎಂದಿಗೂ ಅಮರವಾಗಿರುತ್ತವೆ ಎಂದರು.
ಅಪರ ಜಿಲ್ಲಾಧಿಕಾರಿ ರಮೇಶ ಕೊಲಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಾಕ್ಷ ರಾಘವೇಂದ್ರ ಅಳ್ಳಿಳಿ, ಈಡಿಗ ಸಮಾಜದ ಜಿಲ್ಲಾಧ್ಯಾಕ್ಷ ಮಹೇಂದ್ರ ಕುಮಾರ ಅನಪೂರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ ಅತಿಥಿಗಳಾಗಿ ಭಾಗವಹಿಸಿದ್ದರು.
ಇಶಾ ಪಡಿಶೆಟ್ಟಿ ಅವರ ಭರತನಾಟ್ಯ ಗಮನ ಸೆಳೆಯಿತು. ಮಾರುತಿ ಕಲಾಲ್ ಸ್ವಾಗತಿಸಿದರು. ಡಾ.ಗುರುಪ್ರಸಾದ ವೈದ್ಯ ನಿರೂಪಿಸಿದರು, ಹನುಮಯ್ಯ ನೀಡಜಂತಿ ವಂದಿಸಿದರು.