ದೊಡ್ಡಬಳ್ಳಾಪುರದ ಡಾ.ರಾಜ್​ಕುಮಾರ್​ ಪುತ್ಥಳಿ ಮುಂದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೀಲಮ್ಮ ನಿನ್ನ ಗಂಡ ಯಾರಮ್ಮ ಪುಸ್ತಕ ಬಿಡುಗಡೆ ಮಾಡಲಾಯಿತು. ನಗರಸಭೆ ಅಧ್ಯಕ್ಷೆ ಪ್ರಭಾನಾಗರಾಜ್​, ಮಾಜಿ ಅಧ್ಯಕ್ಷ ತ.ನ. ಪ್ರಭುದೇವ್​, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವನಾಯಕ್​, ಡಾ.ರಾಜ್​ ಕುಮಾರ್​ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ಪರಮೇಶ್​ ಇತರರು ಇದ್ದರು. 
ರಾಜ್ಯ

ಅಭಿಜಾತ ಕಲಾವಿದರ ಅಪಪ್ರಚಾರ ಸಲ್ಲ / DODABALLAPUR

ದೊಡ್ಡಬಳ್ಳಾಪುರ :

ಡಾ.ರಾಜ್​ಕುಮಾರ್​ ವೃತ್ತಿ ಬದುಕಿನಲ್ಲಿ ಮಾದರಿ ವ್ಯಕ್ತಿತ್ವ ರೂಢಿಸಿಕೊಂಡವರು. ಅವರ ಸಾಮಾಜಿಕ ಮತ್ತು ವೈಯಕ್ತಿಕ ಬದುಕು ಪ್ರತಿಯೊಬ್ಬರಿಗೂ ಮಾದರಿ ಎಂದು ಡಾ.ರಾಜ್​ಕುಮಾರ್​ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ ಹೇಳಿದರು.

ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿರುವ ಡಾ.ರಾಜ್​ಕುಮಾರ್​ ಪುತ್ಥಳಿ ಮುಂದೆ ವಿವಿಧ ಕನ್ನಡ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದಎನ್​.ಆರ್​.ರಮೇಶ್​ ಅವರ "ಲೀಲಮ್ಮ ನಿನ್ನ ಗಂಡ ಯಾರಮ್ಮ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಳಿ ಸುದ್ದಿಗಳು ಆಗಾಗ್ಗೆ ಅವರ ಕುರಿತಾಗಿ ತಪ್ಪು ಮಾಹಿತಿ ಹರಡುವ ಪ್ರಯತ್ನ ನಡೆದಿದ್ದವು. ಅವುಗಳಿಗೆ ಈ ಪುಸ್ತಕದಲ್ಲಿ ಉತ್ತರವಿದೆ. ಡಾ.ರಾಜ್​ಕುಮಾರ್​ ರೀತಿಯಲ್ಲೇ ಲೀಲಾವತಿ ಅವರೂ ಅಪ್ರತಿಮ ಕಲಾವಿದೆ. ಅಭಿಜಾತ ಮಾದರಿಯಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿ ಮೆಚ್ಚುಗೆ ಪಡೆದವರು. ಇಡೀ ಬದುಕಿನಲ್ಲಿ ಡಾ.ರಾಜ್​ಕುಮಾರ್​ ಅವರಾಗಲೀ, ಲೀಲಾವತಿ ಅವರಾಗಲಿ ಎಂದಿಗೂ ಪರಸ್ಪರ ಅಗೌರವದಿಂದ ನಡೆದುಕೊಂಡವರಲ್ಲ. ಅದೇ ರೀತಿ ಯಾವುದೇ ಆರೋಪ-, ಪ್ರತ್ಯಾರೋಪಗಳನ್ನೂ ಮಾಡಿದವರೂ ಅಲ್ಲ. ಆದರೆ, ಒಬ್ಬ ಮೇರುನಟನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ, ಅನಗತ್ಯವಾಗಿ ಅವರ ಹೆಸರಿಗೆ ಮಸಿ ಬಳೆಯುವ ಕೆಲಸ ಮಾಡುತ್ತಿರುವುದು ವಿಷಾದನೀಯ ಎಂದರು.

ಡಿ.ಪಿ.ಆಂಜನೇಯ, ಶಿವರಾಜ್​ ಕುಮಾರ್​ ಅಭಿಮಾನಿಗಳ ಸಂಘದ ಅಧ್ಯಕ್ಷ ಜೆ.ಆರ್​.ರಮೇಶ್​, ಗೌರವಾಧ್ಯಕ್ಷ ನಾರಾಯಣಸ್ವಾಮಿ, ಸಂಜೀವ, ಕರವೇ ಅಧ್ಯಕ್ಷ ಮರುಳಾರಾಧ್ಯ, ಕನ್ನಡ ಪಕ್ಷದ ವೆಂಕಟೇಶ್​, ಮುನಿಪಾಪಯ್ಯ ಇದ್ದರು.