ದೊಡ್ಡಬಳ್ಳಾಪುರದ ಬಮುಲ್​ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಬಮುಲ್​ ನಿರ್ದೇಶಕ ಬಿ.ಸಿ.ಆನಂದ್​ ಕುಮಾರ್​ ಚಾಲನೆ ನೀಡಿದರು. ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಬಿ.ಟಿ.ಶ್ರೀನಿವಾಸಮೂರ್ತಿ, ಡಿ.ಸಿದ್ದರಾಮಯ್ಯ, ಸಹಕಾರ ಇಲಾಖೆಯ ರಾಮಾಂಜನೇಯ, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಆರ್​.ಸಿ.ಶಿವಕುಮಾರ, ಸಂಪನ್ಮೂಲ ವ್ಯಕ್ತಿ ಎಚ್​.ಎಸ್​.ನಾಗರಾಜಯ್ಯ ಇತರರು ಇದ್ದರು. 
ರಾಜ್ಯ

ಆರ್ಥಿಕ ಅಭಿವೃದ್ಧಿಗೆ ಕಾರ್ಯದಕ್ಷತೆ ತರಬೇತಿ ಅವಶ್ಯ / DODABALLAPUR

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೊಡ್ಡಬಳ್ಳಾಪುರ :

ಸಹಕಾರ ಸಂಘಗಳು ಅಭಿವೃದ್ಧಿ ಹೊಂದುವಲ್ಲಿ ಸಂಘದ ಮುಖ್ಯಸ್ಥರು, ಕಾರ್ಯನಿರ್ವಹಣಾಧಿಕಾರಿಗಳ ಕಾರ್ಯದಕ್ಷತೆ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಇಂತಹ ತರಬೇತಿ ಶಿಬಿರಗಳು ಅಗತ್ಯ ಎಂದು ನಿರ್ದೇಶಕ ಬಿ.ಸಿ.ಆನಂದ್​ ಕುಮಾರ್​ ಹೇಳಿದರು.

ನಗರದ ಬಮುಲ್​ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಸಹಕಾರ ಒಕ್ಕೂಟದಿಂದ ತಾಲೂಕಿನ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಜಿಲ್ಲಾಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಆಡಳಿತ ನಿರ್ವಹಣೆ, ಸಹಕಾರಿ ಸಂಘಗಳ ಚುನಾವಣೆ ಮತ್ತು ಲೆಕ್ಕ ಪತ್ರಗಳ ನಿರ್ವಹಣೆಗೆ ತರಬೇತಿ ಅನುಕೂಲವಾಗಲಿದೆ. ಸಂಘದ ಸದಸ್ಯರು, ಆಡಳಿತ ಮಂಡಳಿ, ಸಿಬ್ಬಂದಿ ಉತ್ತಮ ಸಂಬಂಧ ಕಾಯ್ದುಕೊಳ್ಳಬೇಕು. ಸಹಕಾರ ಕಾಯ್ದೆ, ಕಾನೂನು ಅರಿತುಕೊಳ್ಳಬೇಕು. ಸಂಘದಲ್ಲಿ ಸಮಸ್ಯೆ ಎದುರಾದಾಗ ಸಹಕಾರ ಇಲಾಖೆಯ ಗಮನಕ್ಕೆ ತಂದು ಪರಿಹರಿಸಿಕೊಂಡು ಸಂಘವನ್ನು ಮುನ್ನಡೆಸಬೇಕು ಎಂದು ಸಲಹೆ ನೀಡಿದರು.

ಸಂಘದ ಅಭಿವೃದ್ಧಿ ದೃಷ್ಟಿಯಿಂದ ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರಿಗೆ ಕಾನೂನು ಅರಿವು ಅಗತ್ಯ. ಹಾಗೆಯೇ ಆರ್ಥಿಕ ಅಭಿವೃದ್ಧಿಗೆ ಕಾರ್ಯದಕ್ಷತೆಯ ತರಬೇತಿ ಅವಶ್ಯ ಎಂದರು.

ಸಹಕಾರ ಸಂಘಗಳ ಸಹಾಯಕ ನಿಬಂಧಕ ರಾಮಾಂಜಿನೇಯ ಮಾತನಾಡಿ, ಇತ್ತೀಚೆಗೆ ಕಾಯ್ದೆಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಇದರಿಂದ ಹಲವು ಸಮಸ್ಯೆ ಎದುರಿಸುತ್ತಿವೆ. ಇದರಿಂದಾಗಿ ರಾಜ್ಯ ಸಹಕಾರ ಸಂಘ&ಸಂಸ್ಥೆಗಳ ಸಿಬ್ಬಂದಿಗೆ ತಜ್ಞರಿಂದ ತರಬೇತಿ ಕೊಡಿಸಲಾಗುತ್ತಿದೆ. ಎಲ್ಲ ಡೇರಿ ಸಂಘಗಳ ಪದಾಧಿಕಾರಿಗಳಿಗೆ ಪ್ರಸ್ತುತ ವಿದ್ಯಮಾನಗಳ ಕುರಿತು ತರಬೇತಿ ನೀಡಲಾಗುತ್ತಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.