ಕಲಬುರಗಿ ಸಿಯುಕೆ ಸಾಫ್ಟ್​ ಸ್ಕಿಲ್ಸ್​ ಡೆವಲಪ್​ಮೆಂಟ್​ ಸೆಂಟರ್​ ಗುರುವಾರ ಆಯೋಜಿಸಿದ್ದ ಮೃದು ಕೌಶಲ ಅಭಿವೃದ್ಧಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಶುಷ್ಮಾ ಎಚ್​, ಪ್ರೊ.ಅಮರೇಂದ್ರ ಮತ್ಸ, ಡಾ.ಪರಮೇಶ ಇದ್ದರು. 
ರಾಜ್ಯ

ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಕೌಶಲ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿಕೆ
  • ಸಿಯುಕೆನಲ್ಲಿ ಮೃದು ಕೌಶಲ ಅಭಿವೃದ್ಧಿ ಕಾರ್ಯಾಗಾರ
ಕಲಬುರಗಿ: ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಮೃದು ಕೌಶಲ ತುಂಬಾ ಪ್ರಮುಖ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ವಿಶ್ವವಿದ್ಯಾಲಯದ ಸಾಫ್ಟ್​ ಸ್ಕಿಲ್ಸ್​ ಡೆವಲಪ್​ಮೆಂಟ್​ ಸೆಂಟರ್​, ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗಾಗಿ ಗುರುವಾರ ಆಯೋಜಿಸಿದ್ದ ರೀಇಂಜಿನಿಯರಿಂಗ್​ ಇಂಜಿನಿಯರ್ಸ್​ ಸಾಫ್ಟ್​ ಸ್ಕಿಲ್ಸ್​ ಎಂಬ ಒಂದು ದಿನದ ಮೃದು ಕೌಶಲ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಲು ಒಂದೇ ಪದವಿ ಸಾಕಾಗುವುದಿಲ್ಲ. ತಾಂತ್ರಿಕ ಕೌಶಲ ಮೀರಿ ಇಂಜಿನಿಯರಿಂಗ್​ ವಿದ್ಯಾರ್ಥಿಗಳು ಯಶಸ್ವಿಯಾಗಲು ಆತ್ಮವಿಶ್ವಾಸ, ಸಾರ್ವಜನಿಕ ಭಾಷಣ, ಬಲವಾದ ಸಂವಹನ ಕೌಶಲ, ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಣಾತ್ಮಕ ಚಿಂತನೆ, ತಂಡದ ಕೆಲಸ ಸೇರಿ ಇತರೆ ಮೃದು ಕೌಶಲ ಅತ್ಯಗತ್ಯ ಎಂದು ಹೇಳಿದರು.
ಸಿಯುಕೆಯ ಸಾಫ್ಟ್​ ಸ್ಕಿಲ್ಸ್​ ಡೆವಲಪ್​ಮೆಂಟ್​ ಸೆಂಟರ್​ನ ನಿರ್ದೇಶಕಿ ಮತ್ತು ಸಂಪನ್ಮೂಲ ವ್ಯಕ್ತಿ ಡಾ.ಶುಷ್ಮಾ ಎಚ್​ ಮಾತನಾಡಿ, ಲಿಂಕ್ಡ್​ಇನ್​ನ ಇತ್ತೀಚಿನ ಸಂಶೋಧನೆಯ ಪ್ರಕಾರ ಸ್ಪೇಸ್​ಎಕ್ಸ್​ ಉಡಾವಣೆಗಳಾಗಲಿ ಅಥವಾ ಇಸ್ರೋ ಕಾರ್ಯಾಚರಣೆಗಳಾಗಲಿ ಶೇ.85 ಉದ್ಯೋಗದ ಯಶಸ್ಸು ಮೃದು ಕೌಶಲಗಳಿಂದಲೇ ಬರುತ್ತದೆ. ಐಐಟಿಗಳು ನಡೆಸಿದ ಮತ್ತೊಂದು ಸಂಶೋಧನೆಯು ಇಂಜಿನಿಯರ್​ಗಳಲ್ಲಿ, ಹೆಚ್ಚಿನ ಭಾವನಾತ್ಮಕ ಬುದ್ಧಿವಂತಿಕೆ ಹೊಂದಿರುವ ತಂಡಗಳು ಇತರರಿಗಿಂತ ಶೇ.20ರಷ್ಟು ವೇಗದಲ್ಲಿ ಹೊಸ ಮಾದರಿ ವಸ್ತುಗಳನ್ನು ತಯ್ಯಾರಿಸುತ್ತಾರೆ. ಈ ಎಐ ಯುಗದಲ್ಲಿ ತಂತ್ರಜ್ಞಾನದ ಪ್ರವೇಶದೊಂದಿಗೆ ಎಲ್ಲರೂ ತಾಂತ್ರಿಕವಾಗಿ ಸಮಾನವಾಗಿದ್ದಾರೆ. ಮೃದು ಕೌಶಲ್ಯಗಳು ಮಾತ್ರ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಅಂಚನ್ನು ನೀಡುವ ನಿರ್ಣಾಯಕ ವ್ಯತ್ಯಾಸವಾಗಬಹುದು. ಇದು ಎಂಜಿನಿಯರ್​ಗಳಿಗೆ ಮೃದು ಕೌಶಲಗಳು ಬಹಳ ಮುಖ್ಯ ಎಂದು ತೋರಿಸುತ್ತದೆ ಎಂದರು.
ಐಕ್ಯೂಎಸಿ ನಿರ್ದೇಶಕ ಪ್ರೊ.ಅಮರೇಂದ್ರ ಮತ್ಸ ಮಾತನಾಡಿ, ಕೃತಕ ಬುದ್ಧಿಮತ್ತೆಯ ಯುಗದಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನದೊಂದಿಗೆ ವಿಕಸನಗೊಳ್ಳಬೇಕು. ಕೃತಕ ಬುದ್ಧಿಮತ್ತೆಯು ಪುನರಾವರ್ತಿತ ಕೆಲಸ ಅರ್ಥ ಮಾಡಿಕೊಳ್ಳಬಹುದು ಮತ್ತು ಮಾಡಬಹುದು. ಆದರೆ ಮನುಷ್ಯರನ್ನು ಅರ್ಥಮಾಡಿಕೊಳ್ಳಲು ಮತ್ತು ಬದಲಾಯಿಸಲು ಸಾಧ್ಯವಿಲ್ಲ. ಈ ರೀತಿಯ ಕಾರ್ಯಾಗಾರಗಳು ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಸಿದ್ಧಗೊಳಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಇಂಜಿನಿಯರಿಂಗ್​ ನಿಕಾಯದ ಡೀನ್​ ಡಾ.ಪರಮೇಶ, ಪ್ರೊ.ವೀರೇಶ ಕಸಬೇಗೌಡರ, ಡಾ.ಎಂ.ಜೋಹೈರ್​, ಪ್ರೊ.ವಿಜಯಕುಮಾರ, ಪ್ಲೇಸ್ಮೆಂಟ್​ ಅಧಿಕಾರಿ ಡಾ.ಪರಮೇಶ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
"

ಮೃದು ಕೌಶಲ ಅಭಿವೃದ್ಧಿ ಕೇಂದ್ರವು ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಲ್ಲಿ ಈ ಕೌಶಲ ಹೆಚ್ಚಿಸಲು ಸಮರ್ಪಿತವಾಗಿ ಕಾರ್ಯನಿರ್ವಹಿಸುತ್ತಿದೆ. ಮೊದಲ ಹಂತದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿ ನೀಡುತ್ತೇವೆ. ಎರಡನೇ ಹಂತದಲ್ಲಿ ಉದ್ಯಮದ ಅವಶ್ಯಕತೆಗಳಿಗೆ ಅನುಗುಣವಾಗಿ ತರಬೇತಿ ನೀಡಲು ವಿಭಾಗಗಳ ರ್ನಿದಿಷ್ಟ ಉದ್ಯಮದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ.

ಪ್ರೊ.ಶುಷ್ಮಾ ಎಚ್​,

ನಿರ್ದೇಶಕಿ, ಸಾಫ್ಟ್​ ಸ್ಕಿಲ್ಸ್​ ಡೆವಲಪ್​ಮೆಂಟ್​ ಸೆಂಟರ್​, ಸಿಯುಕೆ.