ಕೋಲಾರ:ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಪದವೀಧರರು ನೋಂದಾಯಿಸಿಕೊಂಡು ಹಕ್ಕು ಚಲಾವಣೆ ಮಾಡಬೇಕು. ಈ ಮೂಲಕ ಪದವೀಧರರ ಧ್ವನಿಯಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ತುಮಕೂರಿನ ವಿದ್ಯಾವಾಹಿನಿ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದಿಪ್ ಕುಮಾರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪದವಿ ಪಡೆದುಕೊಂಡಿವವರು ನೋಂದಣಿ ಮಾಡದಿದ್ದರೆ ಮತದಾನಕ್ಕೆ ಅರ್ಹರಾಗುವುದಿಲ್ಲ. ಅರ್ಜಿಯೊಂದಿಗೆ ಪದವಿ ಘಟಿಕೋತ್ಸವ ಪ್ರಮಾಣಪತ್ರ, ಆಧಾರ್ ಸಂಖ್ಯೆ, ಚುನಾವಣಾ ಗುರುತಿನ ಚೀಟಿ, ಭಾವಚಿತ್ರ ನೀಡಿ ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ಆಗ್ನೇಯ ಕ್ಷೇತ್ರದ ವ್ಯಾಪ್ತಿಗೆ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ ಒಳಪಟ್ಟಿದೆ. ಚುನಾವಣೆಯ ಮತದಾರರ ಪಟ್ಟಿಗೆ ಹೆಸರು ನೋಂದಣಿಗೆ ಅಕ್ಟೋಬರ್ನಲ್ಲಿ ಆರಂಭವಾಗಿದ್ದು, ನ.6 ಕಡೆಯ ದಿನವಾಗಿದೆ. ಈಗಾಗಲೇ ತುಮಕೂರು, ಚಿತ್ರದುರ್ಗ, ದಾವಣಗೆರೆಯಲ್ಲಿ ಈಗಾಗಲೇ ಕಚೇರಿ ತೆರೆದಿದ್ದು, ಕೋಲಾರದಲ್ಲಿಯೂ ಕಚೇರಿ ತೆರೆಯಲಾಗುವುದು. ಜಿಲ್ಲೆಯಲ್ಲಿ ಪದವೀಧರರ ನೋಂದಣಿ ತೀರಾ ಕಡಿಮೆ ಇದ್ದು, ಅದನ್ನು ಈ ಬಾರಿ ಹೆಚ್ಚಿಸಲು ಶ್ರಮಿಸಲಾಗುತ್ತಿದೆ. 2022ಕ್ಕಿಂತ ಮುನ್ನ ಪದವಿ ಮುಗಿಸಿದವರು ನೋಂದಣಿಗೆ ಅರ್ಹರು ಎಂದು ತಿಳಿಸಿದರು.
16 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ತುಮಕೂರಿನಲ್ಲಿ ವಿದ್ಯಾವಾಹಿನಿ ಸಮೂಹ ಸಂಸ್ಥೆ ಹೊಂದಿದ್ದು, ವಿದ್ಯಾರ್ಥಿಗಳಿಗೆ ಕೈಗಾರಿಕಾ ಕೌಶಲ ಕಲಿಸುತ್ತಿದ್ದೇನೆ. ಐದಾರು ಸಾವಿರ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿ ಹೋಗಿದ್ದು, ಉದ್ಯೋಗ ಸಂಬಂಧ ಕೌಶಲ ಕಲಿಸಬೇಕೆಂಬ ಗುರಿ ಹೊಂದಿದ್ದೇನೆ ಎಂದು ತಿಳಿಸಿದರು.
ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಮಾಜಿ ಶಾಸಕ ಕೆ.ವೈ.ನಾರಾಯಣಸ್ವಾಮಿ ಆಕಾಂಕ್ಷಿಯಾಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರದಿಪ್ ಕುಮಾರ್, ನಾರಾಯಣಸ್ವಾಮಿ ಅವರನ್ನು ಪಕ್ಷದಿಂದ ಸಂಚಾಲಕರನ್ನಾಗಿ ಮಾಡಿದ್ದಾರೆ. ಅವರು ಸ್ಪರ್ಧೆ ಮಾಡುವ ಬಗ್ಗೆ ಗೊತ್ತಿಲ್ಲ. ನಾನು ಸಕ್ರಿಯ ರಾಜಕಾರಣಕ್ಕೆ ಬರುವುದಿಲ್ಲ. ಬದಲಾಗಿ ಪದವೀಧರರ ಕ್ಷೇತ್ರಕ್ಕೆ ಸೀಮಿತವಾಗಿ ಕೆಲಸ ಮಾಡುತ್ತೇನೆ ಎಂದರು.