ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರಿನಲ್ಲಿ ಡ್ಯೂಪ್ಲೆಕ್ಸ್ ಮನೆಯೊಂದರಲ್ಲಿ ಒಂಟಿ ಮಹಿಳೆಯ ಅಸ್ತಿಪಂಜರ ಪತ್ತೆ: ವರ್ಷದ ಹಿಂದೆಯೇ ಮೃ*ಪಟ್ಟ ಶಂಕೆ | Woman Skeleton

ಬೆಂಗಳೂರು: ನಗರದ ಬಾಗಲಗುಂಟೆ ಪ್ರದೇಶದ ಡ್ಯೂಪ್ಲೆಕ್ಸ್​ ಮನೆಯೊಂದರಲ್ಲಿ 52 ವರ್ಷದ ಮಹಿಳೆಯ ಅಸ್ಥಿಪಂಜರ(Woman Skeleton) ಪತ್ತೆಯಾಗಿದ್ದು, ವರ್ಷದ ಹಿಂದೆಯೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಬಾಗಲಗುಂಟೆಯ ಹಾವನೂರು ಲೇಔಟ್ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ಮೃತಳನ್ನು 52 ವರ್ಷದ ದಾಕ್ಷಾಯಣಿ ಎಂದು ಗುರುತಿಸಲಾಗಿದೆ. ಇಲ್ಲಿಯವರೆಗೂ ಮನೆಯೊಳಗಿನ ಆಕೆಯ ಶವ ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ದಾಕ್ಷಾಯಣಿ ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಅವರ ಪತಿ ಉಮೇಶ್ ಸುಮಾರು 10 ವರ್ಷಗಳ ಹಿಂದೆ ನಿಧನರಾಗಿದ್ದರೆ, ಅವರ ಮಗ ನಂತರ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರು. ಇಬ್ಬರ ಸಾವಿನಿಂದ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಿಳೆ ಸುಮಾರು ಒಂದು ವರ್ಷದ ಹಿಂದೆ ಸಾವನ್ನಪ್ಪಿರಬಹುದು ಎಂದು ಶಂಕಿಸಿದ್ದಾರೆ. ಈ ಅವಧಿಯಲ್ಲಿ ಅವರ ಮಗಳು ಮತ್ತು ಅಳಿಯ ಸಹ ಮನೆಗೆ ಭೇಟಿ ನೀಡಿರಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿಗೆ ನಿಖರವಾದ ಕಾರಣ ಮತ್ತು ಸಂದರ್ಭಗಳನ್ನು ತಿಳಿಯಲು ತನಿಖೆ ಆರಂಭಿಸಿದ್ದಾರೆ (ಏಜೆನ್ಸೀಸ್).