ಮುಜರಾಯಿ ವಶಕ್ಕೆ ಪಡೆದ ಅರೇಹಳ್ಳಿಯ ದೇವಾಲಯ
- * ಸರ್ಕಾರಿ ಜಮೀನಿನಲ್ಲಿ ಅನಧಿಕೃತ ನಿರ್ಮಾಣ
ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿ ಅರೇಹಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ 6 ದೇವಸ್ಥಾನಗಳನ್ನು ಗುರುವಾರ ಮುಜರಾಯಿ ಇಲಾಖೆ ವಶಕ್ಕೆ ಪಡೆದುಕೊಂಡಿತು.
ಮೂಲತಃ ಸರ್ಕಾರಿ ಗೋಮಾಳದ ಈ ಜಮೀನು ಸರ್ಕಾರಿ ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಕಾಯ್ದಿರಿಸಲಾಗಿದ್ದು, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಇದನ್ನು ಅಕ್ರಮ ಒತ್ತುವರಿ ಮಾಡಿಕೊಂಡು ಸುಮಾರು 2 ಎಕರೆ 16 ಗುಂಟೆಯಲ್ಲಿ ಅನಧಿಕೃತವಾಗಿ ವಿವಿಧ ದೇವಾಲಯಗಳನ್ನು ನಿರ್ಮಿಸಿರುವುದು ದಾಖಲೆಗಳಿಂದ ತಿಳಿದುಬಂದಿದೆ.
ಈ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ದೇವಸ್ಥಾನಗಳ ಕಟ್ಟಡಗಳನ್ನು ತೆರವುಗೊಳಿಸುವುದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಲಿದೆ ಎಂಬ ಕಾರಣಕ್ಕೆ ದೇವಸ್ಥಾನಗಳನ್ನು ಯಾಥಾಸ್ಥಿತಿ ಉಳಿಸಿ, ಕೆಲ ಷರತ್ತುಗಳೊಂದಿಗೆ ಮುಜರಾಯಿ ಇಲಾಖೆ ವಶಕ್ಕೆ ಪಡೆಯಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶ್ರೀ ರಾಘವೇಂದ್ರಸ್ವಾಮಿ ದೇವಾಲಯ (1 ಎಕರೆ), ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಶ್ರೀ ಕಬ್ಬಾಳಮ್ಮ ದೇವಸ್ಥಾನ, ಶ್ರೀ ಗಣೇಶ ದೇವಸ್ಥಾನ ಹಾಗೂ ಶ್ರೀ ಲಕ್ಷ್ಮೀವೆಂಕಟೆಶ್ವರಸ್ವಾಮಿ ದೇವಸ್ಥಾನ (1.10 ಎಕರೆ) ಶ್ರೀ ಮುನೇಶ್ವರಸ್ವಾಮಿ ದೇವಾಲಯ (1 ಗುಂಟೆ), ಶ್ರೀ ಹನುಮಗಿರಿ ಬೆಟ್ಟದ ಶಿವನ ದೇವಾಲಯ (3 ಗುಂಟೆ), ಶ್ರೀ ಹನುಮಗಿರಿ ಬೆಟ್ಟದ ಆಂಜನೇಯಸ್ವಾಮಿ ದೇವಾಲಯ (1 ಗುಂಟೆ) ಹಾಗೂ ಶ್ರೀ ಹನುಮಗಿರಿ ಬೆಟ್ಟದ ಶಿಲುಬೆ (1 ಗುಂಟೆ) ಸೇರಿ ಒಟ್ಟು 2.16 ಗುಂಟೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದ್ದ ದೇವಾಲಯಗಳನ್ನು ಬೆಂಗಳೂರು ನಗರಸಭಾ ನೇತೃತ್ವದಲ್ಲಿ ಇಲಾಖೆಯ ಸಹಾಯಕ ಆಯುಕ್ತರು, ಧಾರ್ಮಿಕ ದತ್ತಿ ತಹಶೀಲ್ದಾರ್ ಹಾಗೂ ತಾಲೂಕು ನಾಡಕಚೇರಿ ಅಧಿಕಾರಿಗಳು ಮುಜರಾಯಿ ಇಲಾಖೆ ವಶಕ್ಕೆ ಪಡೆದುಕೊಳ್ಳಲಾಯಿತು.