ಮಹಿಳಾ ಸಬಲೀಕರಣವನ್ನು ಮೂಲ ಉದ್ದೇಶವಾಗಿಟ್ಟುಕೊಂಡು ‘ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ’ 2004ರಲ್ಲಿ ಸ್ಥಾಪನೆಯಾಗಿದೆ. 2 ದಶಕಗಳಿಂದ ಗ್ರಾಮೀಣ ಮಹಿಳೆಯರ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಸಂಸ್ಥೆಯ ಹೊಸ ಅಧ್ಯಾಯವಾಗಿ ಬೆಳ್ತಂಗಡಿಯ ರೆಂಕೆದಗುತ್ತು ಎಂಬಲ್ಲಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಆರಂಭಿಸಲಾಗಿದೆ.
ಸಿರಿ ಸಂಸ್ಥೆಯಲ್ಲಿ ಗ್ರಾಮೀಣ ಮಹಿಳೆಯರಿಗೆ ಉತ್ತಮ ಗುಣಮಟ್ಟದ ಹಲವು ಗೃಹೋಪಯೋಗಿ ಉತ್ಪನ್ನ ತಯಾರಿಸಲು ವೇತನಸಹಿತ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ಸುಮಾರು 60 ಹಳ್ಳಿಗಳಲ್ಲಿ ಘಟಕ ಸ್ಥಾಪಿಸಿ, ಅಲ್ಲಿ ತಯಾರಿಸಿದ ಉತ್ಪನ್ನಗಳನ್ನು ‘ಸಿರಿ ಬ್ರ್ಯಾಂಡ್’ನಲ್ಲಿ ಮಾರಲಾಗುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಅನೇಕ ಸಮಸ್ಯೆಗಳು ಕಂಡುಬಂದ ಹಿನ್ನೆಲೆಯಲ್ಲಿ ಅವುಗಳಿಗೆ ಶಾಶ್ವತ ಪರಿಹಾರವಾಗಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಆರಂಭಗೊಂಡಿದೆ. ಹಲವು ಉತ್ಪನ್ನಗಳ ತಯಾರಿಕಾ ಘಟಕಗಳು ಒಂದೇ ಆವರಣಕ್ಕೆ ಬಂದಿವೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ. ಹೆಗ್ಗಡೆಯವರು 2023ರ ಮಾರ್ಚ್ನಲ್ಲಿ ಈ ಸುಸಜ್ಜಿತ ಪಾರ್ಕ್ಗೆ ಶಿಲಾನ್ಯಾಸ ನೆರವೇರಿಸಿದ್ದರು. ರೆಂಕೆದಗುತ್ತುವಿನಲ್ಲಿ 7 ಎಕರೆಯಲ್ಲಿ 1.5 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ನೂತನ ಕಟ್ಟಡವನ್ನು 71 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾಗಿದೆ. ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದ್ದು, ಸಂಸ್ಥೆ ಯಾವುದೇ ಬಹುರಾಷ್ಟ್ರೀಯ ಕಂಪನಿಗಳಿಗೆ ಕಡಿಮೆಯಿಲ್ಲದಂತೆ ಕಾರ್ಯಾಚರಿಸುತ್ತಿದೆ.
5 ಸಾವಿರ ಕುಟುಂಬಗಳಿಗೆ ಆಶ್ರಯ: ಈ ಇಂಡಸ್ಟ್ರಿಯಲ್ ಪಾರ್ಕ್ನಲ್ಲಿ 500ಕ್ಕೂ ಅಧಿಕ ಮಹಿಳೆಯರು ದುಡಿಯುತ್ತಿದ್ದು, ಸಾವಿರ ಮಹಿಳೆಯರಿಗೆ ಉದ್ಯೋಗಾವಕಾಶ ವಿಸ್ತರಿಸುವ ಉದ್ದೇಶವಿದೆ. ಈಗಾಗಲೇ ಗ್ರಾಮೀಣ ಮಹಿಳೆಯರು ಉತ್ಪಾದಿಸುವ ಆಹಾರೋತ್ಪನ್ನ, ಗೃಹೋಪಯೋಗಿ ವಸ್ತು, ಸಿದ್ಧ ಉಡುಪು, ಅಗರಬತ್ತಿ, ಶುಚಿಕಾರಕಗಳು ಇತ್ಯಾದಿ ಉತ್ಪನ್ನಗಳನ್ನು ಸಿರಿ ಬ್ರಾಂಡ್ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 5 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಆಶ್ರಯ ಒದಗಿಸಿದೆ. ‘ಸಿರಿ’ ಉದ್ಯೋಗಿಗಳಿಗೆ ವೇತನವನ್ನು ಸರ್ಕಾರಿ ನಿಯಮಾನುಸಾರ ನೀಡಲಾಗುತ್ತಿದ್ದು, ಪಿಎಫ್ ಮತ್ತಿತರ ಸೌಲಭ್ಯವಿದೆ. ಕೇಂದ್ರ ಕಚೇರಿಗೆ ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ, ವೇಣೂರು, ಗೇರುಕಟ್ಟೆ, ಉಪ್ಪಿನಂಗಡಿ, ನಾರಾವಿ ಮುಂತಾದ ಕಡೆಯಿಂದ ಸಿಬ್ಬಂದಿಗೆ ಕರ್ತವ್ಯಕ್ಕೆ ಬಂದು ಹೋಗಲು ಉಚಿತ ಬಸ್ ಸೌಕರ್ಯ ಕಲ್ಪಿಸಲಾಗಿದೆ.
ಸ್ವಾವಲಂಬನೆಗೆ ಆದ್ಯತೆ: ಲಾಭ ಗಳಿಸುವ ಉದ್ದೇಶಕ್ಕಿಂತ ಬದಲಾಗಿ ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೆ ಆದ್ಯತೆ ನೀಡಿರುವುದು ‘ಸಿರಿ’ಯ ವಿಶೇಷ. ದಕ್ಷಿಣ ಕನ್ನಡ ಜಿಲ್ಲೆಯ 2 ಸಾವಿರ ಸ್ವಸಹಾಯ ಗುಂಪುಗಳ ಮಾಲೀಕತ್ವದಲ್ಲಿ ಸಂಸ್ಥೆಯಿದೆ. ಇದರಿಂದಾಗಿ ಆದಾಯ ತೆರಿಗೆ ಕಾಯ್ದೆಯಡಿ ತೆರಿಗೆ ವಿನಾಯಿತಿಯೂ ಇದೆ.
ಪಾರ್ಕ್ ವಿಶೇಷ: ದೂರದೂರುಗಳಿಂದ ಸಂಸ್ಥೆಗೆ ಉದ್ಯೋಗಕ್ಕೆ ಬರುವ ಮಹಿಳೆಯರಿಗೆ ಸುಸಜ್ಜಿತ ಹಾಸ್ಟೆಲ್ (ಬ್ರಾಹ್ಮಿಣಿ), ಸಂಸ್ಥೆಯಲ್ಲಿ ಶೇ. 90ರಷ್ಟು ಮಹಿಳಾ ಸಿಬ್ಬಂದಿಯೇ ಇರುವುದರಿಂದ 5 ವರ್ಷದೊಳಗಿನ ಮಕ್ಕಳಿಗೆ ಶಿಶುವಿಹಾರ, ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಮಧ್ಯಾಹ್ನದ ಊಟ (ನೈವೇದ್ಯಂ), ವ್ಯವಸ್ಥಿತ ಗೋದಾಮು ಸೌಕರ್ಯ (ಕೇಂದ್ರ ಭಂಡಾರ), ಕೇಂದ್ರ ಕಚೇರಿ ಆವರಣದಲ್ಲಿ ಎಟಿಎಂ, ಮುಖ್ಯದ್ವಾರದ ಬಳಿ ಸಿರಿ ಉತ್ಪನ್ನಗಳ ಮಾರಾಟ ಮಳಿಗೆ ಮತ್ತು ಸಿರಿ ಕೆಫೆ ಸ್ಥಾಪಿಸಲಾಗಿದೆ.
ಏನೇನಿದೆ ಇಲ್ಲಿ?: ಹುಣಸೆಹುಳಿ, ಮಾವಿನಕಾಯಿ, ನಿಂಬೆ, ತರಕಾರಿ ಉಪ್ಪಿನಕಾಯಿ ತಯಾರಿಸುವ ಘಟಕ, ಅವುಗಳ ಕಚ್ಚಾಸಾಮಗ್ರಿಗಳ ಸಂಗ್ರಹಕ್ಕೆ ಅತ್ಯಾಧುನಿಕ ಕೋಲ್ಡ್ಸ್ಟೋರೇಜ್, ಪುಷ್ಟಿ, ಮಸಾಲಾ ಹಾಗೂ ಕರಿದ ತಿಂಡಿಗಳ ಉತ್ಪಾದನಾ ಘಟಕ, ಕೋಕಂ ಜ್ಯೂಸ್, ಶೇಂಗಾ ಚಿಕ್ಕಿ, ದೀಪದ ಎಣ್ಣೆ, ಕೊಬ್ಬರಿ ಎಣ್ಣೆ ಪ್ಯಾಕಿಂಗ್ ಘಟಕ, ಶುಚಿಕಾರಕಗಳು, ಸಿದ್ಧ ಉಡುಪುಗಳು, ಸಿರಿಧಾನ್ಯದ ಉತ್ಪನ್ನಗಳು, ಅಗರಬತ್ತಿ, ರೆಕ್ಸಿನ್ ಬ್ಯಾಗ್ಗಳು ಮತ್ತು ದೇವಸ್ಥಾನಗಳಿಗೆ ಅಗತ್ಯವಿರುವ ತೀರ್ಥ ಬಾಟಲಿಗಳ ಉತ್ಪಾದನೆ ಘಟಕಗಳು ಕಾರ್ಯಾಚರಣೆ ನಡೆಸುತ್ತಿವೆ.
ಗುಣಮಟ್ಟ ಖಾತ್ರಿಗೆ ಗುಣ ಪರೀಕ್ಷಣಂ: ಸಂಸ್ಥೆಯಲ್ಲಿ ಉತ್ಪಾದನೆಯಾಗುವ ಎಲ್ಲ್ಲ ಆಹಾರ ಉತ್ಪನ್ನಗಳನ್ನು ಪ್ರತಿ ಹಂತದಲ್ಲಿಯೂ ಪರೀಕ್ಷೆ ಮಾಡಿ ಗುಣಮಟ್ಟ ಕಾಯ್ದುಕೊಳ್ಳಲು ನೂತನ ಸಂಕೀರ್ಣದಲ್ಲಿ ಆಹಾರ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯ (ಗುಣ ಪರೀಕ್ಷಣಂ) ಸ್ಥಾಪಿಸಲಾಗಿದೆ. ಉತ್ಪನ್ನವು ಆಹಾರ ಸುರಕ್ಷತಾ ಮಾನದಂಡ ಹೊಂದಿದೆಯೇ ಎಂದು ಖಚಿತಪಡಿಸಿಕೊಂಡ ನಂತರವೇ ಮಾರುಕಟ್ಟೆಗೆ ಕಳುಹಿಸಲಾಗುತ್ತಿದೆ.
ಶುಚಿತ್ವಕ್ಕೆ ಆದ್ಯತೆ: ಮಸಾಲ ಪುಡಿಗಳು, ಕರಿದ ತಿಂಡಿಗಳು, ಪುಷ್ಟಿ ಘಟಕ ಸೇರಿ ಎಲ್ಲ ಆಹಾರೋತ್ಪನ್ನ ಘಟಕಗಳಲ್ಲಿ ಯಾವುದೇ ಉತ್ಪನ್ನಗಳನ್ನು ಕೈಗಳಿಂದ ಮುಟ್ಟದೆ ಶುಚಿತ್ವ ಕಾಪಾಡಿಕೊಳ್ಳಲು ಆಧುನಿಕ ತಂತ್ರಜ್ಞಾನ ಹೊಂದಿರುವ ಯಂತ್ರಗಳನ್ನು ಬಳಸಲಾಗುತ್ತಿದೆ. ವಿವಿಧ ಫ್ಲೇವರ್ನ ಫಿನಾಯಿಲ್ಗಳು, ಹ್ಯಾಂಡ್ವಾಶ್, ಫ್ಲೋರ್ವಾಶ್ ಸೇರಿ ಶುಚಿಕಾರಕಗಳ ತಯಾರಿಯನ್ನು ಸಂಪೂರ್ಣವಾಗಿ ಯಂತ್ರಗಳ ಸಹಾಯದಿಂದ ಮಾಡಲಾಗುತ್ತಿದೆ. ಡಿಪ್ಪಿಂಗ್, ಕೌಂಟಿಂಗ್, ಪ್ಯಾಕಿಂಗ್ ಮಷಿನರಿ ಬಳಸಿ 22 ಬಗೆಯ ಅಗರಬತ್ತಿಗಳನ್ನು ಉತ್ಪಾದಿಸಲಾಗುತ್ತಿದೆ.
ಹೆಗ್ಗಡೆ ದಂಪತಿಯ ಇಚ್ಛಾಶಕ್ತಿ
ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಸಾವಿರಾರು ಗ್ರಾಮೀಣ ಮಹಿಳೆಯರಿಗೆ ಉದ್ಯೋಗ, ಆತ್ಮವಿಶ್ವಾಸ ಮತ್ತು ಆರ್ಥಿಕ ಸ್ವಾವಲಂಬನೆ ಒದಗಿಸಬಲ್ಲ ಬೃಹತ್ ಉತ್ಪಾದನಾ ಸಂಕೀರ್ಣ ನಿರ್ವಣದ ಕಲ್ಪನೆಯನ್ನು ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರಲ್ಲಿ ಸಿರಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ ಹೇಳಿಕೊಂಡಿರುತ್ತಾರೆ. ಈ ಚಿಂತನೆಗೆ ಹೆಗ್ಗಡೆ ದಂಪತಿ ನೀಡಿದ ಪ್ರೋತ್ಸಾಹದಿಂದ ಇಂದು ಬೃಹತ್ ಇಂಡಸ್ಟ್ರಿಯಲ್ ಪಾರ್ಕ್ ತಲೆ ಎತ್ತಿದೆ.
ಸಿರಿ ಸಂಸ್ಥೆಯ ವೆಬ್ಸೈಟ್ ಮತ್ತು ಪ್ರಮುಖ ಇ-ಕಾಮರ್ಸ್ ಪ್ಲಾಟ್ಫಾಮರ್್ಗಳಲ್ಲಿ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಿವೆ. ಈಗಾಗಲೇ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರಕುತ್ತಿದ್ದು, ಎಸ್ಕೆಡಿಆರ್ಡಿಪಿ ಮತ್ತು ವಿತರಕರ ಜಾಲದ ಮುಖಾಂತರ ಮಾರುಕಟ್ಟೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಯೋಜನೆಯಿದೆ.
| ಕೆ.ಎನ್. ಜನಾರ್ದನ ಸಿರಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ