ಅಫಜಲಪುರದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘ ನಡೆಸುತ್ತಿರುವ ಅರ್ನಿದಿಷ್ಟಾವಧಿ ಧರಣಿ ಸ್ಥಳಕ್ಕೆ ಶಾಸಕ ಎಂ.ವೈ.ಪಾಟೀಲ್​ ಭೇಟಿ ನೀಡಿ ಮಾತನಾಡಿದರು. ಶ್ರೀಮಂತ ಬಿರಾದಾರ, ಸಂಜೀವಕುಮಾರ ದಾಸರ, ರಮೇಶ ಶೆಟ್ಟಿ, ಶಾಂತಕುಮಾರ ಅಂಜುಟಗಿ, ಗುರು ಚಾಂದಕವಟೆ ಇತರರಿದ್ದರು. 
ರಾಜ್ಯ

ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ವೈ.ಪಾಟೀಲ್​ ಅಭಯ
  • ಅಫಜಲಪುರದಲ್ಲಿ ಕಬ್ಬು ಬೆಳೆಗಾರರ ಅನಿರ್ದಿಷ್ಟಾವಧಿ ಧರಣಿ
ಅಫಜಲಪುರ: ಭೀಮಾ ನದಿಗೆ ನೀರು ಹರಿಸಲು ನಾನು ಮತ್ತು ಶಾಸಕ ಯಶವಂತರಾಯಗೌಡ ಪಾಟೀಲ್​, ಅಶೋಕ ಮನಗುಳಿ ಜತೆಗೂಡಿ ಆಲಮಟ್ಟಿ ಜಲಾಶಯದಿಂದ ಎರಡು ಟಿಎಂಸಿ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಶಾಸಕ ಎಂ.ವೈ. ಪಾಟೀಲ್​ ಹೇಳಿದರು.
ಅಂಬೇಡ್ಕರ್​ ವೃತ್ತದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನೀರು ಬಿಡುವಂತೆ ಒತ್ತಡ ಹೇರಲಾಗುತ್ತಿದೆ. ಜತೆಗೆ ನೀರಿನ ಮಟ್ಟ ಅರಿಯಲು ನೀರಾವರಿ ಇಲಾಖೆ ಉನ್ನತ ಅಧಿಕಾರಿಗಳ ತಂಡವನ್ನು ಅಲ್ಲಿಗೆ ಕಳುಹಿಸಲಾಗುವುದು ಎಂದರು.
ರೈತರು ಪ್ರಗತಿ ಹೊಂದಿದರೆ ಮಾತ್ರ ದೇಶ ಅಭಿವೃದ್ಧಿಯಾಗಲಿದೆ. ನಾನು ಶಾಸಕನಾದ ನಂತರ ಕ್ಷೇತ್ರದ ಸಮಗ್ರ ನೀರಾವರಿಗೆ ಯೋಜನೆ ತಂದಿದ್ದು, 14 ಕೆರೆ ತುಂಬುವ ಕಾಮಗಾರಿ ಪ್ರಗತಿಯಲ್ಲಿದೆ. ಘೂಳನೂರ ಬ್ರಿಡ್ಜ್​ ಕಂ ಬ್ಯಾರೇಜ್​ ಕೆಲಸ ಮುಗಿಯುವ ಹಂತದಲ್ಲಿದ್ದು, ಶೀಘ್ರ ಲೋಕಾರ್ಪಣೆಯಾಗಲಿದೆ ಎಂದು ಹೇಳಿದರು.
ಬೆಳಗುಂಪಾ-ಹರವಾಳ ಮಧ್ಯೆ ನೂತನ ಬ್ರಿಡ್ಜ್​ ಕಂ ಬ್ಯಾರೇಜ್​ ಹಾಗೂ ಕವಲಗಾ ಹತ್ತಿರ 400 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆ ಮಂಜೂರಾಗಿದೆ. ಸರ್ವೇ ಕಾರ್ಯ ನಡೆದಿದ್ದು, ಸುಮಾರು 80 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಗೌರ(ಬಿ)-ಗೌರ(ಕೆ) ಮಧ್ಯೆ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಬಾಂದಾರು ನಿರ್ಮಿಸಲಾಗುತ್ತಿದೆ. ತಾಲೂಕಿನಾದ್ಯಂತ 19 ಚೆಕ್​ ಡ್ಯಾಮ್​ಗಳನ್ನು ನಿರ್ಮಿಸಲಾಗಿದೆ. ನೀರು, ವಿದ್ಯುತ್​, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲ ಮತಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿರುವುದಾಗಿ ತಿಳಿಸಿದರು.
ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ, ತಹಸೀಲ್ದಾರ್​ ಸಂಜೀವಕುಮಾರ ದಾಸರ, ಪ್ರಮುಖರಾದ ರಮೇಶ ಶೆಟ್ಟಿ, ಶಾಂತಕುಮಾರ ಅಂಜುಟಗಿ, ಗುರು ಚಾಂದಕವಟೆ, ರಮೇಶ ಪಾಟೀಲ್​, ಮಹಾನಿಂಗ ಅಂಗಡಿ, ಪ್ರಭಾವತಿ ಮೇತ್ರಿ, ಕಲ್ಲಪ್ಪ ಅಂಜುಟಗಿ, ಬಸವರಾಜ ಶಿರ, ದತ್ತಗುರು, ಯಶ್ವಂತ ಪಟ್ಟೇದಾರ್​, ಅರ್ಜುನ ಸೋಮಜಾಳ, ನಿಂಗನಗೌಡ ಪಾಟೀಲ್​, ರಾಜುಗೌಡ ಪಾಟೀಲ್​, ಮಲ್ಲಿಕಾರ್ಜುನ ಪಾಟೀಲ್​ ಇತರರಿದ್ದರು.