ಆನೇಕಲ್ :
ಮನುಷ್ಯನ ಕ್ರೌರ್ಯ ಹಾಗೂ ಸ್ವಾರ್ಥದ ನಡುವೆಯೂ ಸಾಧನೆಯತ್ತ ಮುನ್ನುಗ್ಗಬೇಕು. ಈ ನಿಟ್ಟಿನಲ್ಲಿ ಗಾಯಕಿ ಎಸ್.ಜಾನಕಿ ಅವರು ಮುಂಚೂಣಿಯಲ್ಲಿದ್ದ ಸಾಧಕಿ ಎಂದು ಆಧ್ಯಾತ್ಮಿಕ ಚಿಂತಕ ಅರವಿಂದ್ ಹೇಳಿದರು.
ರಾಮಕೃಷ್ಣಾಪುರದ ಕವಿ ಡಾ.ವೇದಾವತಿ, ಸಿ.ರಾವ್ ಅವರ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ನಿಂದ ಎಸ್.ಜಾನಕಿ ಹಾಗೂ ಪೊಲೀಸ್ ಅಧಿಕಾರಿ ಎಸಿಪಿ ರಮೇಶ್ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿರಿಕಂಠದಿಂದ ಸಾವಿರಾರು ಹಾಡುಗಳನ್ನು ಹಾಡಿ ಕನ್ನಡ ಚಿತ್ರರಂಗ ಶ್ರೀಮಂತಗೊಳಿಸಿದ ಎಸ್.ಜಾನಕಿ ಅವರು ಸರಳತೆ ಮತ್ತು ಸಜ್ಜನಿಕೆಯಿಂದ ಬದುಕಿದವರು. ಅವರಂತಹ ಮೇರು ಪ್ರತಿಭೆ ನಮ್ಮನ್ನು ಅಗಲಿರುವುದು ಕಲಾ ಕ್ಷೇತ್ರಕ್ಕೆ ಮಾತ್ರವಲ್ಲ, ಇಡೀ ಸಮಾಜಕ್ಕೆ ದೊಡ್ಡ ನಷ್ಟ ಎಂದು ಹೇಳಿದರು.
ಸ್ಫೂರ್ತಿ ಕಾಲೇಜಿನ ಪ್ರಾಧ್ಯಾಪಕಿ ನೂರ್ ಜಾನ್ ಮಾತನಾಡಿ, ಎಸ್.ಜಾನಕಿ ಅವರು ಸಮಾಜ ಹಾಗೂ ಕಲಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಅವರ ಸಾಧನೆ ಸ್ಮರಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಯುವ ಸಮುದಾಯ ಮಾಡಬೇಕು ಎಂದರು.
ಕವಿ ಡಾ.ಆಂತೋನಿ ರಾಜ್ ಮಾತನಾಡಿ, ಸ್ವಾರ್ಥಕ್ಕಾಗಿ ಬದುಕುವ ಕಾಲಘಟ್ಟದಲ್ಲಿಯೂ ಜಾನಕಿ ಅವರು ಜೀವನವನ್ನೇ ಕಲೆಗೆ ಮುಡಿಪಾಗಿಟ್ಟಿದ್ದರು. ಇಂತಹ ವ್ಯಕ್ತಿತ್ವವನ್ನು ಚಿತ್ರರಂಗ ಮತ್ತೊಮ್ಮೆ ಪಡೆಯಲು ದಶಕಗಳೇ ಬೇಕಾಗಬಹುದು ಎಂದರು.
ದರ್ಶಿನಿ, ಎಂ.ತಪಸ್ವಿ, ಮೋನಿಕಾ, ಭುವನೇಶ್ವರಿ, ನಯನಾ, ರೋಹಿಣಿ, ಲೋಚನಾ, ರಂಗಭೂಮಿ ಕಲಾವಿದ ಇಗ್ಗಳೂರು ನಾಗೇಂದ್ರ, ಸಿಂಗಸಂದ್ರ ರಾಮಚಂದ್ರ, ಕವಿ ಡಾ.ವೇದಾವತಿ ಬಿ.ರಾವ್, ಕವಿ ಬಸವರಾಜ, ಕಸಾಪ ಆದೂರು ಪ್ರಕಾಶ್, ಅಪ್ಸರ್ ಅಲಿ ಖಾನ್ ಇದ್ದರು.