kidney disease: ಮೂತ್ರಪಿಂಡಗಳು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿವೆ. ಅವು ರಕ್ತದಿಂದ ಕಲ್ಮಶಗಳು ಮತ್ತು ವಿಷವನ್ನು ಶೋಧಿಸುತ್ತವೆ. ದೇಹದಲ್ಲಿನ ದ್ರವ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ. ಮತ್ತು ಅನೇಕ ಪ್ರಮುಖ ಕಾರ್ಯಗಳಿಗೆ ಸಹಾಯ ಮಾಡುತ್ತದೆ. ಆದಾಗ್ಯೂ ಅವುಗಳನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ಮೂತ್ರಪಿಂಡದ ಕಾಯಿಲೆ ಬರಬಹುದು.
ಅತ್ಯಂತ ಆತಂಕಕಾರಿ ವಿಷಯವೆಂದರೆ ಮೂತ್ರಪಿಂಡದ ಕಾಯಿಲೆಯು ಹೆಚ್ಚಾಗಿ ಸದ್ದಿಲ್ಲದೆ ಬರುತ್ತದೆ. ಅದರ ಸ್ಥಿತಿಯು ದೇಹದಲ್ಲಿ ಹೆಚ್ಚು ಗಂಭೀರವಾದಾಗ ಮಾತ್ರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ, ನಿಯಮಿತ ತಪಾಸಣೆ ಮತ್ತು ಅಪಾಯಕಾರಿ ಅಂಶಗಳ ತಿಳಿದುಕೊಂಡಿಬೇಕು.
ಮೂತ್ರಪಿಂಡದ ಕಾಯಿಲೆ
ಪ್ರಮುಖ ಆರೋಗ್ಯ ಸಂಸ್ಥೆ ಮೇಯೋ ಕ್ಲಿನಿಕ್ ವರದಿ ಪ್ರಕಾರ, ಮೂತ್ರಪಿಂಡದ ಕಾಯಿಲೆಯು ಅವುಗಳ ಕಾರ್ಯಚಟುವಟಿಕೆಯ ದುರ್ಬಲತೆಯನ್ನು ಸೂಚಿಸುತ್ತದೆ. ಮೂತ್ರಪಿಂಡದ ಸೋಂಕುಗಳು, ದೀರ್ಘಕಾಲದ ಕಾಯಿಲೆ, ಕಲ್ಲುಗಳಿರುವುದು, ಗ್ಲೋಮೆರುಲೋನೆಫ್ರೈಟಿಸ್ ಹಾಗೂ ಪಾಲಿಸಿಸ್ಟಿಕ್ ಕಾಯಿಲೆ ಸೇರಿವೆ. ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಧೂಮಪಾನ ಮೂತ್ರಪಿಂಡ ವೈಫಲ್ಯದ ಅಪಾಯವನ್ನು ಹೆಚ್ಚಿಸಬಹುದು. 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೂ ಈ ಕಾಯಿಲೆ ಬರಬಹುದು.
ಮೂತ್ರ ಪಿಂಡ ಕಾಯಿಲೆಯ ಲಕ್ಷಣಗಳು
ಮೂತ್ರಪಿಂಡದ ಕಾಯಿಲೆಯೂ ಸದ್ದಿಲ್ಲದೇ ಬರುತ್ತದೆ. ಆದಾಗ್ಯೂ ಸ್ಥಿತಿ ಹದಗೆಟ್ಟಂತೆ, ಆಗಾಗ್ಗೆ ಮೂತ್ರ ವಿಸರ್ಜನೆ, ಕಣಕಾಲುಗಳು, ಪಾದಗಳಲ್ಲಿ ಊತ, ಹಸಿವು ಕಡಿಮೆಯಾಗುವುದು, ತೂಕ ನಷ್ಟ, ಮೂತ್ರದಲ್ಲಿ ರಕ್ತ ಅಥವಾ ನೊರೆ, ತುರಿಕೆ ಚರ್ಮ, ಉಸಿರಾಟದ ತೊಂದರೆ, ಕಣ್ಣುಗಳ ಸುತ್ತ ನಿರಂತರ ಊತ, ಸ್ನಾಯು ಸೆಳೆತ ಹಾಗೂ ನಿದ್ರೆಯ ತೊಂದರೆ ಸೇರಿದಂತೆ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು. ಈ ಅಂಶಗಳನ್ನು ನಿರ್ಲಕ್ಷಿಸಬಾರದು.
ಈ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ನಿಯಮಿತ ಪರೀಕ್ಷೆಯು ಸಮಸ್ಯೆಯನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಸಾಮಾನ್ಯ ಪರೀಕ್ಷೆಗಳಲ್ಲಿ ಸೀರಮ್ ಕ್ರಿಯೇಟಿನೈನ್, ಸಿಸ್ಟಾಟಿನ್ ಸಿ, ಅಂದಾಜು ಗ್ಲೋಮೆರುಲರ್ ಶೋಧನೆ ದರ, ರಕ್ತದ ಯೂರಿಯಾ ಸಾರಜನಕ, ಮೂತ್ರ ಪರೀಕ್ಷೆಗಳು ಮಾಡಿಸಿದ್ರೆ ಕಾಯಿಲೆ ಕಂಡು ಹಿಡಿದು ಚಿಕಿತ್ಸೆ ಪಡೆಯಬಹುದು.
ಮೂತ್ರಪಿಂಡಗಳು ದೇಹಕ್ಕೆ ಎಷ್ಟು ಮುಖ್ಯ?
ಮೂತ್ರಪಿಂಡಗಳು ದೇಹದಿಂದ ತ್ಯಾಜ್ಯವನ್ನು ತೆಗೆದುಹಾಕುವುದಷ್ಟೇ ಅಲ್ಲ. ಅವು ರಕ್ತದೊತ್ತಡವನ್ನು ನಿಯಂತ್ರಿಸುವ ಮತ್ತು ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುವ ಹಾರ್ಮೋನುಗಳನ್ನು ಉತ್ಪಾದಿಸುತ್ತವೆ. ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಹೆಚ್ಚುವರಿ ನೀರನ್ನು ತೆಗೆದುಹಾಕಲು ಸಹ ಅವುಗಳು ಬೇಕು.
ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಈ ಎಲ್ಲಾ ಪ್ರಕ್ರಿಯೆಗಳು ಪರಿಣಾಮ ಬೀರುತ್ತವೆ.
ಪ್ರಸ್ತುತ ಮೂತ್ರಪಿಂಡದ ಕಾಯಿಲೆ ವಿಶ್ವದಾದ್ಯಂತ ಹೆಚ್ಚುತ್ತಿದೆ. ಇದು ಹೃದಯದ ಕಾಯಿಲೆಗೆ ನೇರವಾಗಿ ಸಂಬಂಧಿಸಿದೆ. ಮೂತ್ರಪಿಂಡಗಳ ವೈಫಲ್ಯ ಹೃದಯಾಘಾತ, ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳನ್ನು ಹೆಚ್ಚಿಸಿ ಸಾವಿನ ಅಪಾಯವನ್ನು ಹೆಚ್ಚಿಸವಹುದು (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.